Advertisement

ವೈದ್ಯರ ವಿರುದ್ಧ ಅಂಗವಿಕಲರ ಆಕ್ರೋಶ

11:47 AM Jul 26, 2017 | |

ಮುದ್ದೇಬಿಹಾಳ: ಇಲ್ಲಿಯ ತಾಲೂಕಾಸ್ಪತ್ರೆಯಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾದ ಅಂಗವಿಕಲರ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಆಗಮಿಸಬೇಕಾದ ವೈದ್ಯರು ವಿಳಂಬ ಮಾಡಿದ್ದಕ್ಕೆ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ನಿರ್ಲಕ್ಷದಿಂದ ರೊಚ್ಚಿಗೆದ್ದ ಅಂಗವಿಕಲರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ ಕ್ಷೇತ್ರದ ಶಾಸಕ ಸಿ.ಎಸ್‌. ನಾಡಗೌಡ ಶಿಬಿರ ಉದ್ಘಾಟಿಸಿ ಆಸ್ಪತ್ರೆಯಿಂದ ಹೊರ ನಡೆದ ಕ್ಷಣದಲ್ಲಿಯೇ ಆಸ್ಪತ್ರೆಯಲ್ಲಿ ಶಿಬಿರದ ವಾತಾವರಣವೇ ಬದಲಾಯಿತು. ಬೆಳಗ್ಗೆಯೇ ತಮ್ಮ ಬುದ್ಧಿಮಾಂದ್ಯ ಹೊಂದಿದ ಪುಟ್ಟ ಮಕ್ಕಳ ಜೊತೆಗೆ ಬಂದ ತಾಯಂದಿರು ಹಾಗೂ ಅಂಗವಿಕಲರು ಉಪಾಹಾರಕ್ಕೆ ಹಾಗೂ ಕುಡಿಯುವ ನೀರಿಗೆ ಪರದಾಡಿದರು. ಆದರೆ ಶಿಬಿರವನ್ನು ಏರ್ಪಡಿಸಿ ತಾಲೂಕು ಆರೋಗ್ಯ ಅಧಿ ಕಾರಿಗಳ ಹಾಗೂ ವೈದ್ಯಕೀಯ ತಪಾಸಣೆಗೆ ಆಗಮಿಸಬೇಕಾದ ವೈದ್ಯರು ಬಾರದ ಕಾರಣ 3 ಗಂಟೆವರೆಗೂ ಕಾದು ಕುಳಿತ ಅಂಗವಿಕಲರು ದಿಢೀರ್‌ ಆಸ್ಪತ್ರೆಯ ಬಾಗಿಲನ್ನು ಹಾಕಿ ಸುಮಾರು 500ಕ್ಕೂ ಹೆಚ್ಚು ಜನ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಅಧಿಕಾರಿ: ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ಪ್ರತಿಭಟನಾಕಾರರಿಗೆ ಸಮಜಾಯಿಸಲು ಹೋದರು. ಆದರೆ ಯಾವುದಕ್ಕೂ ಬಗ್ಗದ ಅಂಗವಿಕಲರು ಇದು ಪ್ರತಿ ತಿಂಗಳೂ ನಡೆಯುವ ಸಮಸ್ಯೆ. ವೈದ್ಯರು ಪ್ರತಿ ಬಾರಿಯೂ ತಡವಾಗಿ ಬರುತ್ತಾರೆ. ಇಲ್ಲವೆ ಕೇವಲ ಒಬ್ಬರು ವೈದ್ಯರು ಬರುತ್ತಾರೆ. ಕೂಡಲೇ ವೈದ್ಯರ ನಿರ್ಲಕ್ಷದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.

ಪ್ರತಿ ತಿಂಗಳು ನಡೆಸುವ ಅಂಗವಿಕಲರ ಶಿಬಿರವನ್ನು ಮಂಗಳವಾರ ನಡೆಸಲಾಗಿತ್ತು. ಆದರೆ ಆರೋಗ್ಯ ಅಧಿಕಾರಿಗಳು ಗ್ರಾಮೀಣ ಆಶಾ ಕಾರ್ಯಕರ್ತೆಯರಿಗೆ ಎಲ್ಲ ಅಂಗವಿಕಲರ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ ಹಿನ್ನೆಲೆ ಆಶಾ ಕಾರ್ಯಕರ್ತೆಯರು ತಾಲೂಕಿನ ಎಲ್ಲ ಅಂಗವಿಕಲರನ್ನು ಆಸ್ಪತ್ರೆಗೆ ಕರೆ ತಂದಿದ್ದಾರೆ. ಈಗಾಗಲೇ ಅಂಗವಿಕಲ ಪ್ರಮಾಣಪತ್ರ ತೆಗೆದುಕೊಂಡ ಹಾಗೂ
ಹೊಸದಾಗಿ ಪ್ರಮಾಣಪತ್ರ ತೆಗೆದುಕೊಳ್ಳುವ ಎಲ್ಲ ಅಂಗವಿಕಲರೂ ಶಿಬಿರಿಗೆ ಆಗಮಿಸಿದ್ದರು.  ಇದರಿಂದಲೇ ಶಿಬಿರಿನಲ್ಲಿ ಗೊಂದಲ ಸೃಷ್ಟಿಯಾಯಿತು. 

ಕರಳು ಹಿಂಡುವ ದೃಶ್ಯ: ತಾಲೂಕಾಸ್ಪತ್ರೆ ಶಿಬಿರಕ್ಕೆ ಬುದ್ಧಿಮಾಂದ್ಯ ಮಕ್ಕಳು ತಮ್ಮತಾಯಂದಿರೊಂದಿಗೆ ಆಗಮಿಸಿದ್ದರು. ಆದರೆ ಸುಮಾರು ಮೂರು ಗಂಟೆವರೆಗೂ ವೈದ್ಯರಿಗಾಗಿ ಕುಳಿತ ಅವರು ಊಟವಿಲ್ಲದೇ ಬುದ್ಧಿಮಾಂದ್ಯ ಮಕ್ಕಳ ಕಿರುಚಾಟ ಹಾಗೂ ಅವರನ್ನು ಹತೋಟಿಗೆ ಇಟ್ಟುಕೊಳ್ಳಲು ತಾಯಂದಿರು ಪಟ್ಟ ಶ್ರಮದ ನೋಟ ಸಾರ್ವಜನಿಕರ ಕರಳು ಹಿಂಡುವಂತ್ತಿತ್ತು.

Advertisement

ವೈದ್ಯರೊಂದಿಗೆ ವಾಗ್ವಾದ: 10 ಗಂಟೆಗೆ ಬರಬೇಕಾದ ವೈದ್ಯರು ಮಧ್ಯಾಹ್ನ 2ಕ್ಕೆ ಬಂದ ನಂತರ ಅವರೊಂದಿಗೆ ವಾಗ್ವಾದಕ್ಕೆ ಇಳಿದ ಅಂಗವಿಕಲರು ವೈದ್ಯರನ್ನು ಹಾಗೂ ತಾಲೂಕು ವೈದ್ಯಾಧಿ ಕಾರಿ ಸತೀಶ ತಿವಾರಿಯ ಅವರನ್ನು ತೀವ್ರ  ತರಾಟೆಗೆ ತೆಗೆದುಕೊಂಡರು. ತರಾತುರಿಯಲ್ಲಿ ಶಿಬಿರ ಪ್ರಾರಂಭಿಸಲು ವೈದ್ಯರು ಮುಂದಾದ ಸಂದರ್ಭದಲ್ಲಿ ಜಗ್ಗದ ಅಂಗವಿಕಲರು ಅರ್ಧ ಗಂಟೆ ಹೆಚ್ಚುವರಿಯಾಗಿ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ ಪಿಎಸ್‌ಐ  ಗೋವಿಂದಗೌಡ ಪಾಟೀಲ ಅಂಗವಿಕಲರಿಗೆ ಸಮಜಾಯಿಷಿದರು. ನಂತರ ಪ್ರತಿಭಟನೆಯನ್ನು ಹಿಂಪಡೆದು ತಪಾಸಣಾ ಶಿಬಿರ ಪ್ರಾರಂಭಕ್ಕೆ ಅನುವು ಮಾಡಿಕೊಡಲಾಯಿತು.

ಮಂಗಳವಾರ ಅಂಗವಿಕಲರ ಶಿಬಿರಕ್ಕೆ ಆಗಮಿಸಬೇಕಿದ್ದ ವೈದ್ಯರಿಗೆ ಮುಖ್ಯವಾದ ಆಪರೇಷನ್‌ ಇದ್ದ ಕಾರಣ ತಡವಾಗಿದೆ. 480 ಜನರಲ್ಲಿ ಕೇವಲ 15 ಜನರಿಗೆ ಹೆಚ್ಚಿನ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಬರಬೇಕೆಂದು ತಿಳಿಸಿದ್ದು 190 ಜನರಿಗೆ ಬಹು ಅಸ್ವಸ್ಥತೆ, 62 ಮೊನೊ ಅಸ್ವಸ್ಥತೆ ಹಾಗೂ 60 ಜನರಿಗೆ ಕಣ್ಣಿನ ವಿಕಲತೆ ಹೊಂದಿದ್ದಾರೆ ಎಂದು ಪ್ರಮಾಣ ಪತ್ರ ನೀಡಲಾಗಿದೆ.
 ಡಾ| ಸತೀಶ ತಿವಾರಿ, ತಾಲೂಕು ವೈದ್ಯಾಧಿಕಾರಿ

ಶಿಬಿರದ ಬಗ್ಗೆ ಆಶಾ ಕಾರ್ಯಕರ್ತರಲ್ಲಿ ಆರೋಗ್ಯ ಅಧಿಕಾರಿಗಳು ತಪ್ಪು ಮಾಹಿತಿ  ನೀಡಿದ ಕಾರಣ ತಾಲೂಕಿನ ಎಲ್ಲ ಅಂಗವಿಕಲರು ಶಿಬಿರಕ್ಕೆ ಆಗಮಿಸಿದ್ದರು. ಆಗಮಿಸಿದ್ದವರಲ್ಲಿ ಈಗಾಗಲೇ ಪ್ರಮಾಣ ಪತ್ರ ಪಡೆದವರೂ ಇದ್ದರು. ಗ್ರಾಪಂನಲ್ಲಿರುವ ವಿಆರ್‌ಡಬ್ಲೂ ಅವರಿಗೆ ಶಿಬಿರ ಮಾಹಿತಿ ನೀಡಿದ್ದರೆ ಯಾವುದೇ ಗೊಂದಲ ಆಗುತ್ತಿರಲಿಲ್ಲ.
 ಎಸ್‌.ಕೆ. ಘಾಟೆ, ಎಂಆರ್‌ಡಬ್ಲೂ, ಮುದ್ದೇಬಿಹಾಳ

ಅಂಗವಿಕಲರ ಶಿಬಿರವನ್ನು ಕಾಟಾಚಾರಕ್ಕೆ ಮಾಡಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿಗೆ ವಿಚಾರಿಸಿದರೆ ಜಿಲ್ಲಾಮಟ್ಟದಲ್ಲಿ ಕ್ಯಾಂಪ್‌
ಮಾಡಲಾಗುತ್ತಿದ್ದು ಎಲ್ಲರೂ ಅಲ್ಲಿಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ ಎನ್ನುತ್ತಾರೆ. ಇಲ್ಲವಾದರೆ ಸುಮ್ಮನೆ
ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸುತ್ತಾರೆ. ಇವರಿಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ.
ಪವಾಡೆಪ್ಪ ಚಲವಾರಿ, ತಾಲೂಕಾಧ್ಯಕ್ಷ, ಎಂಆರ್‌ಡಬ್ಲೂ-ವಿಆರ್‌ಡಬ್ಲೂ

Advertisement

Udayavani is now on Telegram. Click here to join our channel and stay updated with the latest news.

Next