ಬೆಂಗಳೂರು: ಜನರು ಮಧ್ಯವರ್ತಿಗಳ ಬಲೆಗೆ ಬಿದ್ದು ಕೆರೆ-ಕಾಲುವೆ, ಸರ್ಕಾರಿ ಜಾಗ ಹಾಗೂ ವ್ಯಾಜ್ಯಗಳಲ್ಲಿರುವ ಜಮೀನು ಹಾಗೂ ನಿವೇಶನಗಳನ್ನು ಖರೀದಿಸಿ ತೊಂದರೆ ಸಿಲುಕುವುದನ್ನು ತಪ್ಪಿಸಲು ಮುಂದಾಗಿರುವ ಕಂದಾಯ ಇಲಾಖೆ ದಾಖಲೆಗಳ ಸಂಪೂರ್ಣ ಮಾಹಿತಿ ನೀಡುವ “ದಿಶಾಂಕ್’ ಆ್ಯಪ್ ಹೊರತಂದಿದೆ.
ಭೂಮಾಪನ, ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯಿಂದ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 30 ಜಿಲ್ಲೆಗಳ ಎಲ್ಲ ಆಸ್ತಿಗಳ ಸಂಪೂರ್ಣ ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿದೆ. ಜಮೀನು ಹಾಗೂ ನಿವೇಶನ ಖರೀದಿಸುವ ಸಂದರ್ಭದಲ್ಲಿ ಆ್ಯಪ್ ಮೂಲಕ ಅವು ಕೆರೆ-ಕಾಲುವೆ ಹಾಗೂ ಸರ್ಕಾರಿ ಜಾಗದಲ್ಲಿವೆಯೇ ಎಂಬುದುನ್ನು ಗ್ರಾಹಕರು ಖಾತರಿಪಡಿಸಿಕೊಂಡು ವಂಚನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಬಹುದು.
ನಾಗರಿಕರು ತಾವು ನಿಂತಿರುವ ಸ್ಥಳದಿಂದಲೇ ದಿಶಾಂಕ್ ಆ್ಯಪ್ ಬಳಸಿ ರಾಜ್ಯದ ಯಾವುದೇ ಮೂಲೆಯಲ್ಲಿರುವ ಜಮೀನು ಅಥವಾ ನಿವೇಶನಗಳ ಸಮಗ್ರ ಮಾಹಿತಿ ಪಡೆಯಬಹುದಾಗಿದ್ದು, ಒಂದು ಗ್ರಾಮದಲ್ಲಿ ಬರುವಂತಹ ಎಲ್ಲ ಸರ್ವೆ ಸಂಖ್ಯೆಗಳ ನಕ್ಷೆಯನ್ನು ಆನ್‌ಲೈನ್ ಅಥವಾ ಡೌನ್‌ಲೋಡ್ ಮಾಡಿ ಆಫ್ಲೈನ್ ಮೂಲಕವೂ ವೀಕ್ಷಿಸಬಹುದಾಗಿದೆ. ಸರ್ವೆ, ಭೂ ವ್ಯಾಜ್ಯ ಇತ್ಯರ್ಥ ಹಾಗೂ ಭೂದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಅವರ ನೇತೃತ್ವ ನಿರ್ದೇಶನದಂತೆ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಆ್ಯಪ್ ಪಡೆಯುವುದು ಹೇಗೆ?: ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ “ದಿಶಾಂಕ್’ ಆ್ಯಪ್ ಡೌನ್‌ಲೋಡ್‌ನ್ನು ಮೊದಲಿಗೆ ಮಾಡಿಕೊಳ್ಳಬೇಕು. ಆಪ್ಲಿಕೇಷನ್ ತೆರೆದುಕೊಂಡ ಕೂಡಲೇ ಭಾರತದ ಮ್ಯಾಪ್ ತೆರೆದುಕೊಳ್ಳಲಿದ್ದು, ಕೆಳಭಾಗದಲ್ಲಿ ನನ್ನ ಸ್ಥಳ, ಸರ್ವೆ ಸಂಖ್ಯೆ ಆಯ್ಕೆ, ನನ್ನ ಸ್ಥಳದ ವರದಿ ಹಾಗೂ ಡೌನ್‌ಲೋಡ್ ಎಂಬ ಆಯ್ಕೆಗಳಿರಲಿವೆ. ಆ ನಾಲ್ಕು ಆಯ್ಕೆಗಳ ಮೂಲಕ ಸಾರ್ವಜನಿಕರು ತಾವು ನೋಡಬಯಸುವ ಸರ್ವೆ ಸಂಖ್ಯೆಯ ನಕ್ಷೆಯನ್ನು ವೀಕ್ಷಿಸಬಹುದಾಗಿದೆ.
ಆ್ಯಪ್ ಕಾರ್ಯನಿರ್ವಹಿಸುವುದು ಹೇಗೆ?: ಅಪ್ಲಿಕೇಷನ್‌ನಲ್ಲಿ ಸಾರ್ವಜನಿಕರು ಜಿಲ್ಲೆ ಆಯ್ಕೆ ಮಾಡಿದ ಕೂಡಲೇ ಜಿಲ್ಲಾ ವ್ಯಾಪ್ತಿಗೆ ಬರುವ ತಾಲೂಕುಗಳನ್ನು ಸ್ವಯಂಚಾಲಿತವಾಗಿ ತೋರಿಸಲಿದೆ. ಅದೇ ರೀತಿ ತಾಲೂಕು ಆಯ್ಕೆ ಮಾಡಿದರೆ ಹೋಬಳಿಗಳು, ಹೋಬಳಿ ಆಯ್ಕೆ ನಂತರ ಗ್ರಾಮಗಳ ಹೆಸರುಗಳ ಪಟ್ಟಿ ಬರಲಿದೆ. ಗ್ರಾಮದ ಹೆಸರು ಆಯ್ಕೆ ಮಾಡಿದ ಕೂಡಲೇ ಆ ಗ್ರಾಮ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲ ಸರ್ವೆ ಸಂಖ್ಯೆಗಳು ಲಭ್ಯವಾಗಲಿವೆ. ಸರ್ವೆ ಸಂಖ್ಯೆ ಆಯ್ಕೆಗೊಳಿಸಿದ ಕೂಡಲೇ ನಕ್ಷೆ ಮೂಲಕ ಆ ಜಮೀನು ಅಥವಾ ನಿವೇಶನ ಎಲ್ಲಿ ಬರುತ್ತದೆ, ಅಕ್ಕಪಕ್ಕದ ಸರ್ವೆ ಸಂಖ್ಯೆಗಳು, ಕೆರೆ, ಕಾಲುವೆ, ಗ್ರಾಮದ ಪ್ರಮುಖ ಸರಹದ್ದುಗಳು ಎಲ್ಲಿವೆ ಎಂಬ ಇನ್ನಿತರ ಮಾಹಿತಿ ಲಭ್ಯವಾಗಲಿದೆ.
ಮಾಲೀಕರು ಯಾರು ತಿಳಿಯಲಿದೆ: ಕೆಲವೊಮ್ಮೆ ಜಮೀನು ಅಥವಾ ನಿವೇಶನಕ್ಕೆ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾರ್ವಜನಿಕರನ್ನು ವಂಚಿಸುವುದುಂಟು. ಇನ್ನು ಕೆಲವು ಸಂದರ್ಭಗಳಲ್ಲಿ ಮಾಲೀಕರ ಹೆಸರು ಸರಿಯಾಗಿದ್ದರೂ ವಿಸ್ತೀರ್ಣ ಹೆಚ್ಚಿಸಿ ವಂಚಿಸುವುದು ನಡೆಯುತ್ತದೆ. ಆದರೆ, ದಿಶಾಂಕ್ ಆ್ಯಪ್ ಮೂಲಕ ಸರ್ವೆ ಸಂಖ್ಯೆಯ ನಮೂದಿಸಿದ ಕೂಡಲೇ ಜಮೀನಿನ ಮಾಲೀಕರ ಹೆಸರು, ವಿಸ್ತೀರ್ಣ ಹಾಗೂ ಚೆಕ್‌ಬಂದಿಗಳ ಮಾಹಿತಿ ದೊರೆಯಲಿದೆ.