ಗದಗ: ನಿರಂತರ ಮಳೆ, ಮೋಡ ಮುಸುಕಿದ ವಾತಾವರಣದ ಹಿನ್ನೆಲೆಯಲ್ಲಿ ಜಿಲ್ಲೆಯ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ವ್ಯಾಪಿಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ 1.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆಯಾಗಿದೆ. ಆ ಪೈಕಿ ಬಿತ್ತನೆಯ ಶೇ. 5ರಷ್ಟು ಭಾಗದಲ್ಲಿ ಹಳದಿ ನಂಜಾಣು ರೋಗ ಕಾಣಿಸಿಕೊಂಡಿದೆ. ಕಳೆದ ಸಾಲಿನ ಮಂಗಾರು ಅವಧಿ ಯಲ್ಲಿ ಉತ್ತಮ ಅನುಕೂಲಕರ ವಾತಾವರಣವಿದ್ದ ಕಾರಣ ಕಡಿಮೆ ಪ್ರಮಾಣದಲ್ಲಿ ಹಳದಿ ನಂಜಾಣು ರೋಗ ಕಾಣಿಸಿಕೊಂಡಿತ್ತು. ಈ ಬಾರಿ ಪ್ರತಿಕೂಲ ವಾತಾವರಣದಿಂದ ಹೆಸರು ಬೆಳೆ ಹಳದಿ ರೋಗಕ್ಕೆ ತುತ್ತಾಗಿ ರೈತರ ಮೊಗದಲ್ಲಿ ನಂಜು ಆವರಿಸಿದಂತಾಗಿದೆ.
ಜಿಲ್ಲೆಯ ನರಗುಂದ ಹಾಗೂ ಶಿರಹಟ್ಟಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡಿದೆ. ಗದಗ ಹಾಗೂ ರೋಣ ಭಾಗದಲ್ಲಿ ಹೆಸರು ಬೆಳೆ ಉತ್ತಮವಾಗಿದ್ದರೂ ತೇವಾಂಶ ಹೆಚ್ಚಿರುವ ಕಡೆಗಳಲ್ಲಿ ಹೆಸರು ಬೆಳೆ ಕೈಕೊಟ್ಟಿದೆ.
ಗದಗ ತಾಲೂಕಿನ ಹರ್ಲಾಪೂರ, ಲಕ್ಕುಂಡಿ, ತಿಮ್ಮಾಪೂರ, ಕಣಗಿನಹಾಳ, ಹಾತಲಗೇರಿ ಗ್ರಾಮಗಳ ಭಾಗದಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ, ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಅಂಟಿಕೊಂಡಿದ್ದು, ರೈತ ಸಮೂಹ ಕಂಗಾಲಾಗಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಮಳೆಯಾಗಿದ್ದು, ಹೆಸರು, ಶೇಂಗಾ ಉಷ್ಣಾಂಶದ ಕೊರತೆಯಿಂದ ಹಳದಿ ನಂಜಾಣು ರೋಗ ಅಧಿ ಕವಾಗಿ ಬೆಳೆಗಳು ನಾಶವಾಗುತ್ತಿವೆ. ಸಾವಿರಾರು ರೂ. ಖರ್ಚು ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ ಎಂದು ರೈತರು ಗೋಳಾಡುತ್ತಿದ್ದಾರೆ.
ಕೊರಕ ಹುಳು-ಕೀಡೆಯಿಂದ ಬೆಳೆ ನಾಶ
ರೈತರು ಸಾಲ ಮಾಡಿ ಹೆಸರು, ಶೇಂಗಾ ಬಿತ್ತನೆ ಮಾಡಿದ್ದಾರೆ. ಆದರೆ, ಕೊರಕ ಹುಳು ಹಾಗೂ ಕೀಡೆಗಳು ಉತ್ಪತ್ತಿಯಾಗಿ ಬೆಳೆ ಹೂವು ಕಾಯಿ ಬಿಡುವ ಮುನ್ನ ಕಾಂಡ ಮತ್ತು ಎಲೆಗಳನ್ನು ತಿಂದು, ಎಲೆಗಳ ಮೇಲೆ ಮೊಟ್ಟೆಗಳು ಉತ್ಪತ್ತಿಯಾಗಿ ಎಲೆಗಳು ರಂಧ್ರ ಬಿದ್ದು ಬೆಳೆಯನ್ನು ನಾಶಪಡಿಸುತ್ತಿವೆ ಎಂದು ಕಣಗಿನಹಾಳ ರೈತರಾದ ಬಾಲರಾಜ್ ಹುಯಿಲಗೋಳ, ಸಿದ್ದಪ್ಪ ಪಾಟೀಲ, ರಾಮಣ್ಣ ಖಂಡ್ರಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ರೋಗ ಹತೋಟಿಗೆ ಕ್ರಮ
ಹೆಸರು ಬೆಳೆಯ ಎಲೆಗಳು ಹಳದಿಯಾಗಿ ಗಿಡಗಳು ಒಣಗಲು ಆರಂಭಿಸಿದರೆ ಇಳುವರಿ ಕುಂಠಿತಗೊಳ್ಳುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗುವಾಗ ಕೂಡಲೇ ನಂಜು ಬಾತ ಹೆಸರು ಗಿಡಗಳನ್ನು ಕಿತ್ತು ಹಾಕಬೇಕು. ಪ್ರತಿ ಲೀಟರ್ ನೀರಿಗೆ 3 ಗ್ರಾಂ 13:0:45 ಪೊಟ್ಯಾಷಿಯಂ ನೈಟ್ರೇಟ್ ರಸಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಜೊತೆಗೆ 0.3 ಗ್ರಾಂ ಅಸಿಟಮಾಪ್ರಿಡ್ ಅಥವಾ 0.3 ಗ್ರಾಂ ಫಿಪ್ರೋನಿಲ್ ಕೀಟನಾಶಕ ಸಿಂಪಡಿಸಬೇಕು. ಇದರಿಂದ ಹಳದಿ ನಂಜಾಣು ರೋಗ ಹತೋಟಿಗೆ ಬರಲು ಸಾಧ್ಯ ಎಂದು ಕೃಷಿ ಇಲಾಖೆ ತಿಳಿಸಿದೆ.
ಹೆಸರು ಹಾಗೂ ಶೇಂಗಾ ಬೆಳೆಗಳು ಪ್ರತಿ ವರ್ಷ ಯಾವುದೇ ಕೀಟನಾಶಕ ಸಿಂಪಡಣೆ ಮಾಡದೆ ಬೆಳೆ ಬರುತ್ತಿತ್ತು. ಆದರೆ, ಈ ವರ್ಷ ಗಾಯದ ಮೇಲೆ ಬರೆ ಎಂಬಂತೆ, ಸಾವಿರಾರು ರೂ. ಖರ್ಚು ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಕೃಷಿ ಅಧಿ ಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಅಲ್ಲದೇ, ಬೆಳೆ ಹಾನಿಯ ಬಗ್ಗೆ ಸರಕಾರಕ್ಕೆ ವರದಿ ನೀಡಬೇಕು. –
ಯಲ್ಲಪ್ಪ ಬಾಬರಿ, ಜಿಲ್ಲಾಧ್ಯಕ್ಷ, ರೈತ ಸಂಘ-ಹಸಿರು ಸೇನೆ (ವಿ.ಆರ್. ನಾರಾಯಣ ರೆಡ್ಡಿ ಬಣ)
ಜಿಲ್ಲೆಯ ವಿವಿಧೆಡೆ ಹೆಸರು ಬೆಳೆಗೆ ತಗುಲಿರುವ ಹಳದಿ ನಂಜಾಣು ರೋಗ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ರೈತರು ಕೃಷಿ ಇಲಾಖೆ ಸೂಚಿಸಿದ ಹೆಸರು ಬೆಳೆಯ ಹಳದಿ ನಂಜು ರೋಗದ ನಿರ್ವಹಣೆ ಕ್ರಮಗಳನ್ನು ಪಾಲಿಸುವುದರ ಮೂಲಕ ಹಳದಿ ರೋಗ ಹತೋಟಿಗೆ ಮುಂದಾಗಬೇಕು. –
ಜಿಯಾವುಲ್ಲಾ ಕೆ. ಜಂಟಿ ಕೃಷಿ ನಿರ್ದೇಶಕರು
-ಅರುಣ ಕುಮಾರ ಹಿರೇಮಠ