Advertisement

ಕಾಯಿಲೆಯದ್ದೇ ಧ್ಯಾನ

03:45 AM Apr 23, 2017 | Harsha Rao |

ನನಗೆ ಮೊದಲಿಂದಲೂ ಕಾಯಿಲೆಗಳ ಬಗ್ಗೆ ಅತೀವ ಮುಂಜಾಗ್ರತೆ, ಆರೋಗ್ಯದ ವಿಚಾರವಾಗಿ ಸದಾ ಕಾಳಜಿ ಹೊಂದಿರುವುದು, ಆ ವಿಚಾರವಾಗಿ ಜಾಗೃತಳಾಗಿರುವುದು ನನ್ನ ಸ್ವಭಾವ. ನನ್ನ ಈ ಅತಿ ಕಾಳಜಿ, ಜಾಗೃತಿ ಮನೆಯವರ ಕಣ್ಣಿನಲ್ಲಿ ಕೆಲವೊಮ್ಮೆ ನಗೆಪಾಟಲಾಗಿರುವುದು ಉಂಟು. ನನ್ನ ಒಂದಲ್ಲೊಂದು ಆರೋಗ್ಯ ಕುರಿತ ವಿಚಾರಗಳನ್ನು ಮನೆಯವರು ಗೇಲಿ ಮಾಡುತ್ತಲೇ ಇರುತ್ತಾರೆ. ಆದರೂ ನಾನೇನು ಅದಕ್ಕೆಲ್ಲ ಕೇರ್‌ ಮಾಡುವವಳಲ್ಲ. ಆರೋಗ್ಯದ ವಿಚಾರದ ಬಗ್ಗೆ ಯಾರು ಏನು ಹೇಳಿದರೂ ಅದನ್ನು ಕೇಳಲು, ಅನುಷ್ಠಾನಕ್ಕೆ ತರಲು ನಾನು ಸದಾ ಸಿದ್ದಳಾಗಿರುತ್ತೇನೆ. ಅದು ಚಿಕ್ಕವಯಸ್ಸಿನಿಂದಲೂ ನನಗೆ ಅಭ್ಯಾಸವಾಗಿ ಬಿಟ್ಟಿದೆ.

Advertisement

ಒಮ್ಮೆ ನಮ್ಮ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರು ನಿಧಾನವಾಗಿ ಊಟಮಾಡುವುದರಿಂದ ಆರೋಗ್ಯ ಉತ್ತಮಗೊಂಡು ಹೆಚ್ಚು ದಿನಗಳು ಬದುಕಬಹುದು ಅಂತ ಹೇಳಿದ್ದನ್ನು ಮನೆಯಲ್ಲಿ ಹೇಳಿ ಅದನ್ನು ಅಕ್ಷರ ಸಹ ಪಾಲಿಸುತ್ತಿದ್ದ ನನ್ನನ್ನು, ನನ್ನ ಸಹೋದರರು ನನ್ನ ನಿಧಾನಗತಿ ಊಟವನ್ನು ಅಣಕಿಸಿ, ಕಿಚಾಯಿಸಿ “ನಿಧಾನವಾಗಿ ಸಾಯುವವಳು’ ಅಂತ ಗೋಳು ಹುಯ್ದುಕೊಳ್ಳುತ್ತಿದ್ದದ್ದು ಈಗಲೂ ನೆನಪಿದೆ. 

ಪ್ರೌಢಶಾಲೆಯಲ್ಲಿ ಓದುವಾಗ ನನ್ನ ಕೆನ್ನೆ ಮೇಲೆ ಒಂಥರಾ ಬಿಳಿ ಚಿಬ್ಬಿನಂತಹುದ್ದೇನೊ ಕಾಣಿಸಿಕೊಂಡು ಬಿಟ್ಟಿತ್ತು. ಅದು ನನ್ನ ಹೆದರಿಸಿದ್ದು ಅಷ್ಟಿಷ್ಟಲ್ಲ. ನಮ್ಮ ನೆಂಟರೊಬ್ಬರಿಗೆ ತೊನ್ನು ಇದ್ದು, ಎಲ್ಲರೂ ಅವರ ಬಗ್ಗೆ ಹೀನಾಯವಾಗಿ ನಡೆದುಕೊಂಡಿದ್ದು ಕಂಡಿದ್ದರಿಂದ ನನಗೂ ಹಾಗೆ ಆಗಿರಬೇಕು ಅಂತ ತಿಳಿದು ಬಿಟ್ಟೆ. ಅದೇ ಭೀತಿಯಿಂದ ಅತ್ತು ಕರೆದು ರಂಪ ಮಾಡಿ¨ªೆ. ಇರುವ ಒಬ್ಬಳೇ ಮುದ್ದಿನ ಮಗಳ ಗೋಳಾಟ ನೋಡಲಾರದ ನಮ್ಮ ಅಪ್ಪ ತಮ್ಮ ಪರಿಚಯದ ಚರ್ಮದ ವೈದ್ಯರಲ್ಲಿ ಕರೆದೊಯ್ದು ನನ್ನ ಗೋಳಾಟ ವಿವರಿಸಿದ್ದರು. ನನ್ನ ಕೆನ್ನೆಯನ್ನು ಮುಟ್ಟಿ ನೋಡಿ ನಕ್ಕ ಅವರು, “”ಏಯ್‌ ಅಪ್ಪನ ಮುದ್ದಿನ ಮಗಳೇ, ತೊನ್ನು ಅಂದ್ರೆ ಏನು ಗೊತ್ತಾ?” ಅಂತ ಅದರ ಬಗ್ಗೆ ವಿವರಿಸಿ, “”ನಿನಗೆ ವಿಟಮಿನ್‌ ಕೊರತೆ ಆಗಿದೆ ಅದಕ್ಕೆ ಈ ಬಿಳಿ ಚಿಬ್ಬು ಬಂದಿದೆ” ಅಂತ ಹೇಳಿ ವಿಟಮಿನ್‌ ಮಾತ್ರೆ ಕೊಟ್ಟು ಕಳಿಸಿದ್ದರು. ಮನೆಗೆ ಬಂದ ಮೇಲೆ ಸೋದರರ ಕೀಟಲೆ ಕೇಳಬೇಕೆ? ನನ್ನ ಕಿಚಾಯಿಸಿ ಹುರಿದು ಮುಕ್ಕಿದ್ದರು. 

ಮುಂದೆ ಕೂಡ ನನ್ನ ಆರೋಗ್ಯದ  ಬಗೆಗಿನ  ಕಾಳಜಿ ಮತ್ತಷ್ಟು ಹೆಚ್ಚಾಗಿತ್ತು. ಸಾಕಷ್ಟು ಅದರ ಬಗ್ಗೆ ಓದಿಕೊಂಡಿ¨ªೆ, ಈಗಂತೂ ಟಿವಿಯಲ್ಲಿ ಅದರ ಬಗ್ಗೆನೇ ಬರುತ್ತಿರುತ್ತದೆ. ಒಂದನ್ನೂ ಮಿಸ್‌ ಮಾಡದೆ ನೋಡುತ್ತಿರುತ್ತೇನೆ. ಜೊತೆಗೆ ಇಂಟರ್‌ನೆಟ್‌ನಲ್ಲಿ ಬೇರೆ ಹುಡುಕಿ ಹುಡುಕಿ ಓದುತ್ತಿರುತ್ತೇನೆ. ಹಾಗಾಗಿ, ಎಲ್ಲ ದೊಡ್ಡ ಕಾಯಿಲೆಗಳ ಮೊದಲ ಲಕ್ಷಣಗಳ ಬಗ್ಗೆ, ಯಾವ ಕಾಯಿಲೆ ಬಂದರೆ ಏನು ಮಾಡಬೇಕು, ಯಾವ ಚಿಕಿತ್ಸೆ ಪಡೆಯಬೇಕು, ಮನೆವೈದ್ಯಗಳು ಯಾವುವು ಅಂತ ಅರೆದು ಕುಡಿದು ಬಿಟ್ಟಿ¨ªೆ. ತಲೆ ನೋವು ಬಂದರೆ ಬ್ರೈನ್‌ ಟ್ಯೂಮರ್‌, ಹೊಟ್ಟೆ ನೋವು ಬಂದರೆ ಗ್ಯಾಸ್ಟ್ರಿಕ್‌, ಅದು ಮೀರಿದರೆ ಅಲ್ಸರ್‌, ಮತ್ತೂ ಮೀರಿದರೆ ಕ್ಯಾನ್ಸರ್‌, ಪದೇ ಪದೇ ಜ್ವರ ಬಂದರೆ, ಮೈಯಲ್ಲಿ ನವೆ ಉಂಟಾಗಿ ದದ್ದುಗಳಾಗುತ್ತಿದ್ದರೆ ಅದು ಎಚ್‌ಐವಿ ಆಗಿರಬಹುದು, ಎಡತೋಳು, ಭುಜನೋವು ಬಂದರೆ ಹೃದಯಾಘಾತ, ಕಾಲು ನೋವು, ಸೆಳೆತ, ಇದ್ದಕಿದ್ದಂತೆ ಸಣ್ಣಗಾಗುವುದು ಸಕ್ಕರೆ ಕಾಯಿಲೆ, ತಲೆಸುತ್ತು ಬಂದರೆ ರಕ್ತದೊತ್ತಡ- ಹೀಗೆ ಎಲ್ಲ  ಕಾಯಿಲೆಗಳ ಬಗ್ಗೆ ಅರೆದು ಕುಡಿದು ಬಿಟ್ಟಿ¨ªೆ.

ಯಾರಿಗಾದರೂ ಈ ತರಹದ ಲಕ್ಷಣಗಳು ಕಂಡುಬಂದರೆ ಯಾವಾಗ ಬೇಕಾದರೂ, ಯಾರಿಗೆ ಬೇಕಾದರೂ ಬಿಟ್ಟಿ ಸಲಹೆ ಕೊಡುತ್ತಿ¨ªೆ. ಹಾಗೆ ಸಲಹೆ ಪಡೆದವರನ್ನು ಹೆದರಿಸಿ ಬಿಡುತ್ತಿ¨ªೆ. ಒಂದೊಂದು ಸಲ ನನ್ನ ಸಲಹೆ ಯಶಸ್ವಿಯಾಗಿ ಅವರು ಹೊಗಳುವಾಗ ನನಗೆ ಖುಷಿಯಾಗುತ್ತಿತ್ತು. ಆದರೆ ಕೆಲವೊಮ್ಮೆ ಅದು ಮತಾöವುದಕ್ಕೋ ತಿರುಗಿ ನನಗೆ ಶಾಪ ಹಾಕುವಾಗ, ನನಗೆ ಅಪಾರ ಬೇಸರವಾಗುತ್ತಿದ್ದದ್ದು ನಿಜ. ನನ್ನ ವೈದ್ಯವನ್ನು ಹೀಗಳೆದು ಬಿಟ್ಟರಲ್ಲ, ಅನ್ನೊ ಕೋಪದಲ್ಲಿ ಮತಾöವತ್ತೂ ಅವರಿಗೆ ನನ್ನ ಸಲಹೆ ನೀಡಬಾರದೆಂದು ಪ್ರತಿಜ್ಞೆ ಮಾಡಿ ಬಿಡುತ್ತಿ¨ªೆ. ನನ್ನ ಪ್ರತಿಜ್ಞೆ ಇರಲಿ, ಅವರೇ ನನ್ನ ಮುಂದೆ ಸುಳಿಯದಂತೆ ಎಚ್ಚರಿಕೆ ವಹಿಸುತ್ತಿದ್ದದ್ದು ನನಗೆ ತಿಳಿದರೂ ತಿಳಿಯದಂತೆ ನಟಿಸುತ್ತಿ¨ªೆ.

Advertisement

ನನಗೂ ಒಂದೊಂದು ಸಲ ಆ ದೊಡ್ಡ ಕಾಯಿಲೆಗಳ ಪ್ರಾರಂಭದ ಲಕ್ಷಣಗಳು ಕಾಣಿಸಿಕೊಂಡು ಬಿಡುತ್ತಿದ್ದವು. ಇದ್ದಕ್ಕಿದ್ದಂತೆ ಒಂದು ದಿನ ನನಗೆ ಮುಖದ ಮೇಲೆ ನವೆ ಉಂಟಾಗಿ ಉಗುರಿನಿಂದ ಕೆರೆದುಕೊಂಡೆ. ನವೆ ಹೆಚ್ಚಾಯ್ತು. ಹಾಗೆ ಕೆರೆದುಕೊಂಡ ಜಾಗವೆಲ್ಲ ಊದಿಕೊಂಡು ಬಿಟ್ಟಿತು. ಕನ್ನಡಿಯಲ್ಲಿ ನೋಡಿಕೊಂಡೆ, ಒಳ್ಳೆ  ಹನುಮನ ಮೂತಿಯಂತೆ ನನ್ನ ಮುಖ ಕಾಣಿಸಿತು. ಗಾಬರಿಯಾಯಿತು. ಏನು ಮಾಡಲೂ ತೋಚದೆ ಪತಿರಾಯರು ಬರುವುದನ್ನೆ ಕಾಯತೊಡಗಿದೆ. ಬಂದವರೇ ನನ್ನ ಮುಖ ನೋಡಿ ನಗಲಾರಂಭಿಸಿದರು. “ಏನಾಯೆ¤à, ಯಾರು ಹೊಡೆದರು ನಿಂಗೆ?’ ಅಂತ ಬಿದ್ದು ಬಿದ್ದು ನಕ್ಕರು. 

ವೆೊದಲೇ ಆತಂಕಗೊಂಡಿದ್ದ ನನಗೆ ಇವರ ನಗು ನೋಡಿ ರೇಗಿ ಹೋಯಿತು. ನಂತರ ತಮ್ಮ ನಗುವನ್ನು ತಹಬಂದಿಗೆ ತೆಗೆದುಕೊಂಡು “ನಿನಗೇನಾಯಿತು’ ಅಂತ ಕೇಳಿ “ನಾಳೆನೇ ಆಸ್ಪತ್ರೆಗೆ ಹೋಗೋಣ’ ಅಂತ ಹೇಳಿದರು. ಅಷ್ಟು ಸುಲಭಕ್ಕೆ ನಾನು ಆಸ್ಪತ್ರೆಗೆಲ್ಲ ಹೋಗುವವಳಲ್ಲ. ಏನೇ ಕಾಯಿಲೆಗಳ ಲಕ್ಷಣಗಳು ಗೋಚರಿಸಿದರೂ, ಆಸ್ಪತ್ರೆಗೆ ಹೋಗಲು ನನಗೆ ಉದಾಸೀನ, ಜೊತೆಗೆ ಒಂಥರಾ ಆತಂಕ. ನನಗೇನಾದರೂ ದೊಡ್ಡ ರೋಗ ಇದೆ ಎಂದು ಬಿಟ್ಟರೆ ಅಂತ ಇವತ್ತು, ನಾಳೆ ಅಂತ ವೈದ್ಯರಲ್ಲಿಗೆ ಹೋಗುವುದನ್ನು ಮುಂದೂಡುತ್ತಿ¨ªೆ. ಕೆಲವು ಸ್ವಯಂವೈದ್ಯವನ್ನು ಮಾಡಿಕೊಳ್ಳುವುದನ್ನು ಕರಗತಮಾಡಿಕೊಂಡಿ¨ªೆ. 

ಜ್ವರ ಬಂದರೆ ಕ್ರೋಸಿನ್‌, ಮೈಕೈನೋವಿಗೆ ಪ್ಯಾರಾಸಿಟಾಮುಲ್‌, ಶೀತಕ್ಕೆ ಆ್ಯಕ್ಷನ್‌ ಫೈಹಂಡ್ರೆಡ್‌, ಮೈಕಡಿತಕ್ಕೆ ಅವಿಲ್‌, ಹೊಟ್ಟೆನೋವಿಗೆ ಗ್ಯಾಷ್ಟ್ರೊಜಿನ್‌- ಹೀಗೆ ಔಷಧಿಯ ಭಂಡಾರವೇ ನನ್ನಲ್ಲಿತ್ತು. ಏನೇ ಬಂದರೂ ಮೊದಲು ಅದನ್ನೇ ಪ್ರಯೋಗಿಸುತ್ತಿ¨ªೆ, ಕಡಿಮೆಯಾಗದಿದ್ದರೆ ಮಾತ್ರ ವೈದ್ಯರ ದರ್ಶನ.

ನನ್ನ ಮೈಕೈ ನವೆ ನನ್ನ ಸ್ವಯಂವೈದ್ಯಕ್ಕೆ ಬಗ್ಗದಿ¨ªಾಗ ಆಸ್ಪತ್ರೆಗೆ ಹೋಗಲೇಬೇಕಾಯಿತು. ವೈದ್ಯರು ಅಲರ್ಜಿಗೆ ಹೀಗಾಗುತ್ತಿದೆ ಅಂತ ಹೇಳಿ ಮಾತ್ರೆ ಬರೆದು ಕೊಟ್ಟರು. ನಂಗೆ ಅಲರ್ಜಿನೇ ಇದುವರೆಗೂ ಇರಲಿಲ್ಲ , ಈಗ್ಯಾಕೆ ಬಂತು ಅಂತ ತಿರುಗಿ ಕೇಳಿದೆ.

ಅದಕ್ಕವರು, “ನಮ್ಮ ಮಾಜಿ ಪ್ರಧಾನಿಯವರಿಗೆ ಈಗ ನಾನ್‌ವೆಜ್‌ ತಿಂದರೆ ಅಲರ್ಜಿ ಆಗುತ್ತೆ, ಅದನ್ನ ತಿನ್ನೋದೇ ಬಿಟ್ಟಿ¨ªಾರೆ, ಈಗ್ಯಾಕೆ ಹಂಗಾಯ್ತು ಅಂದ್ರೆ ಏನು ಹೇಳ್ಳೋದು. ನೀವು ಯಾಕೆ ಅಲರ್ಜಿ ಆಗುತ್ತಿದೆ, ಯಾವ ಆಹಾರ ತಿಂದರೆ ಈ ರೀತಿ ಆಗುತ್ತೆ ಅಂತ ಪತ್ತೆ ಮಾಡಿ’ ಅಂತ ಉದಾಹರಣೆ ಸಮೇತ ಉತ್ತರಿಸಿದ್ದರು. ನನಗೆ ಯಾವ ಆಹಾರ ಸೇವಿಸಿದರೆ ನವೆ ಬಂದು ಊದಿಕೊಳ್ಳುತ್ತೆ ಅಂತ ನಂಗೆ ಗೊತ್ತಾಗಲೇ ಇಲ್ಲ. ನವೆ ನಿಲ್ಲಲೇ ಇಲ್ಲ. ವೈದ್ಯರು ಕೊಟ್ಟಿದ್ದ ಮಾತ್ರೆಯನ್ನು ಸದಾ ತಂದು ಇಟ್ಟುಕೊಂಡಿ¨ªೆ. ನವೆಯಾಗುವ ಲಕ್ಷಣ ಕಂಡಕೂಡಲೆ ಮಾತ್ರೆ ನುಂಗಿ ಹನುಮನ ಅವತಾರದಿಂದ ಪಾರಾಗುತ್ತಿ¨ªೆ. 

ಎಲ್ಲಿಯೇ ಹೋದರೂ ಮಾತ್ರೆಗಳ ಬಾಕ್ಸ್‌ ಮಾತ್ರ ಮರೆಯದೆ ಇಟ್ಟುಕೊಂಡಿರುತ್ತಿ¨ªೆ. ವರ್ಷ ಕಳೆದರೂ ನವೆ ಬರುವುದು ನಿಲ್ಲಲಿಲ್ಲ. ನನಗೇಕೊ ಅನುಮಾನ ಕಾಡತೊಡಗಿತ್ತು. ಒಂದೆರಡು ಬಾರಿ ಜ್ವರ ಬೇರೆ ಬಂದಿತ್ತು. ಎದೆಯೊಳಗೆ ಆತಂಕದ ಒನಕೆ ಕುಟ್ಟಲಾರಂಭಿಸಿತ್ತು. ಪತಿರಾಯರ ಬಗ್ಗೆಯೇ ಅನುಮಾನ ಕಾಡಲಾರಂಭಿಸಿತ್ತು. ಇವರಿಗೇನಾದರೂ ಹೊರಗಿನ ಸಂಬಂಧವಿರಬಹುದೇ, ಈ ಗಂಡಸರನ್ನು ನಂಬಲೇಬಾರದು; ತಿಂಗಳಿಗೊಮ್ಮೆ ಮೀಟಿಂಗೆ ಅದು ಇದು ಅಂತ ಹೊರಗೆ ಹೋಗುತ್ತಿರುತ್ತಾರೆ. ಯಾರಿಂದಲೋ ಏನೋ ರೋಗ ಹತ್ತಿ ನನಗೂ ವರ್ಗಾಯಿಸಿರಬಹುದೇ ಅನ್ನೋ ಅನುಮಾನ  ಬೃಹದಾಕಾರವಾಗಿ ಬೆಳೆದು ನಿಂತು ಅದನ್ನು ಅವರಲ್ಲಿ ಹೇಳಿಯೂ ಬಿಟ್ಟೆ. ಪತಿರಾಯರು ತಲೆ ಚಚ್ಚಿಕೊಳ್ಳುತ್ತ, “ಮೊದಲು ನಿನ್ನನ್ನು ಹುಚ್ಚಾಸ್ಪತ್ರೆಗೆ ಕಳಿಸಬೇಕು’ ಅಂತ ಕೂಗಾಡಿದರು. ನನಗಂತೂ ಒಂದ್ಸಲ ಬ್ಲಿಡ್‌ ಚೆಕ್‌ಅಪ್‌ ಮಾಡಿಸಿದ್ದರೆ ಆಗಿತ್ತೇನೊ ಅನ್ನಿಸಿದ್ರೂ ಹೋಗಲು ಧೈರ್ಯ ಸಾಲದೆ ಸುಮ್ಮನಾಗಿ ಬಿಟ್ಟಿ¨ªೆ. ಅಂತೂ ಕೆಲವು ದಿನಗಳ ನಂತರ ನನಗೆ ನವೆ ಆಗುವುದು, ಊದಿಕೊಳ್ಳುವುದು ನಿಂತೇ ಹೋಯಿತು.

ಕಾಲು ಮುರಿದುಕೊಂಡ ಪ್ರಹಸನವೂ ಒಮ್ಮೆ ನಡೆಯಿತು. ವಾಹನ ಓಡಿಸಲು ಭಯವಿದ್ದರೂ ಅನಿವಾರ್ಯವಾಗಿ ನಾನು ವಾಹನ ಓಡಿಸಲು ಕಲಿತು ಸ್ಕೂಟಿಯಲ್ಲಿಯೇ ಡ್ನೂಟಿಗೆ ಹೋಗುತ್ತಿ¨ªೆ. ಒಮ್ಮೆ ಯಾರೂ ರಸ್ತೆಯಲ್ಲಿ ಇಲ್ಲ ಅಂತ ಜೋರಾಗಿ ಗಾಡಿ ಓಡಿಸಿಕೊಂಡು ಬರುವಾಗ ತಿರುವಿನಲ್ಲಿ ಬಂದ ಸೈಕಲ್‌ ಸವಾರನನ್ನು ಉಳಿಸಲು ಹೋಗಿ ನಾನು ಪಕ್ಕಕ್ಕೆ ತಿರುಗಿಸಿದೆ. ಮುಂದೆ ಏನಾಯಿತೆಂದು ತಿಳಿಯುವಷ್ಟರಲ್ಲಿ ಗಾಡಿ ಸಮೇತ ಉರುಳಿ ಬಿದ್ದಿ¨ªೆ, ಪಾಪ ಸೈಕಲ್‌ ಸವಾರ ಪ್ರಾಣ ಉಳಿಸಿದ ಮಹಾತಾಯಿ ಅಂದುಕೊಳ್ಳುತ್ತ ನನ್ನ ಸಮೇತ ಗಾಡಿಯನ್ನು ಎತ್ತಿ ನಿಲ್ಲಿಸಿದ್ದ. ಕಾಲು ಭಯಂಕರ ನೋವಾಗುತ್ತಿತ್ತು. ಅದು ಹೇಗೆ ಮನೆ ತಲುಪಿದೆನೊ! ಮನೆಗೆ ಬಂದು ಮಂಚದ ಮೇಲೆ ಉರುಳಿದವಳಿಗೆ ಹೊರಳಾಡಲು ಕೂಡಾ ಆಗುತ್ತಿಲ್ಲ. ಮಗಳು, ಪತಿರಾಯರು ಕಾಲಿಗೆಲ್ಲ ಮುಲಾಮು ಹಚ್ಚಿ, ಪೇಯ್ನಕಿಲ್ಲರ್‌ ಮಾತ್ರೆ ನುಂಗಿಸಿದರೂ ನನ್ನ ನೋವು ಕಡಿಮೆಯಾಗಲೇ ಇಲ್ಲ. 

ಬೆಳಗ್ಗೆ ಎದ್ದ ಕೂಡಲೆ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರಿಗೆ ನನ್ನ ಭಯಂಕರ ನೋವನ್ನು ಹೇಳುತ್ತ¤ ನನ್ನ ಕಾಲಿನ ಮೂಳೆ ಮುರಿದಿರಬಹುದು ಅನ್ನೋ ಅನುಮಾನವನ್ನು ಆ ನೋವಿನಲ್ಲೂ  ವ್ಯಕ್ತಪಡಿಸಿದೆ. ಅವರು ಒಂಥರ ನೋಡಿ, “”ಮೂಳೆ ಮುರಿದಿದ್ದರೆ ನಿಮ್ಮನ್ನ ಹೊತ್ತುಕೊಂಡು ಬರಬೇಕಿತ್ತು, ಆರಾಮವಾಗಿ ನಡೆದುಕೊಂಡು ಬಂದಿದ್ದೀರಾ” ಅಂತ ದಿವ್ಯ ನಿರ್ಲಕ್ಷದಿಂದ ಹೇಳಿದಾಗ ನನ್ನ ಘನಘೋರ ನೋವಿನ ನಡುವೆಯೂ ಅಸಾಧ್ಯ ಕೋಪ ಬಂದಿತು. ಮಗಳು ಎತ್ತಲೊ ನೋಡುತ್ತ¤ ನಗುವನ್ನು ತಡೆ ಹಿಡಿಯುತ್ತಿದದ್ದು ಗೋಚರಿಸಿತು. 

ಎರಡು ದಿನ ಕಳೆದ ಮೇಲೆ ನನ್ನ ಘನಘೋರ ನೋವು ಕಡಿಮೆಯಾಗಿತ್ತು. ಅದೇ ವೈದ್ಯರು ಹಿಂದೊಮ್ಮೆ ನನ್ನ ಕೈಬೆರಳಿಗೆ ನೋವು ಬಂದು ಬೆರಳು ಕೊಂಚ ಸೊಟ್ಟಗಾಗಿದೆ ಅಂತ ಅನ್ನಿಸಿ ಅವರಿಗೆ ತೋರಿಸಿ¨ªೆ. ಅವರು ಅದೇ ನಿರ್ಲಕ್ಷ್ಯಭಾವದಿಂದ ನನ್ನ ಕೈಯನ್ನು ಮುಟ್ಟದೆ “ಪದೇ ಪದೇ ಮುಟ್ಟಿಕೊಳ್ಳುತ್ತೀರೇನೊ, ಏನೂ ಆಗಿಲ್ಲ ಹೋಗಿ’ ಅಂತ ಹೇಳಿ ಬಿಟ್ಟಿದ್ದರು. ಇನ್ನು ಈ ಜೀವನದಲ್ಲಿ ನನ್ನ ಕಾಯಿಲೆಯನ್ನು ಗಂಭೀರವಾಗಿ ನೋಡದ ಆ ವೈದ್ಯರ ಬಳಿ ಹೋಗುವುದಿಲ್ಲ ಅಂತ ತೀರ್ಮಾನಿಸಿ¨ªೆ.

ಆದರೆ, ಮತ್ತೂಬ್ಬ ವೈದ್ಯರ ಬಳಿ ಹೋಗಲೇಬೇಕಾಯ್ತು- ಅದೂ ನನ್ನ ಪತಿ ಮತ್ತು ಮಗಳ ಬಲವಂತಕ್ಕೆ. ನನಗೆ ಎಡ ತೋಳು ಭುಜ ನೋಯುತ್ತಿದ್ದು, ರಾತ್ರಿ ಎದೆನೋವು ಕೂಡ ಬರುತ್ತಿತ್ತು. ನನಗೆ ಗ್ಯಾರಂಟಿಯಾಗಿ ಬಿಟ್ಟಿತ್ತು, ನಮ್ಮ ಅಪ್ಪನಿಗೆ ಆಗಿದ್ದ ಹೃದಯಘಾತ ನನಗೂ ಆಗುತ್ತದೆ ಅಂತ ಅಂದುಕೊಂಡು, ಇನ್ನೂ ಮಗಳಿಗೆ ಮದುವೆಯಾಗಿಲ್ಲ, ಅವಳ ಸಂಸಾರ ನೋಡಿಲ್ಲ, ಅದ್ಯಾವುದೂ ಆಗದೆ ನಾನು ಹೋಗಿಬಿಡುತ್ತೇನಲ್ಲ ಅನ್ನಿಸಿ ವೇದನೆ ಒತ್ತಿಕೊಂಡು ಬಂದರೂ, ಹಣೆಯಲ್ಲಿ ಬರೆದಿದ್ದನ್ನು ತಪ್ಪಿಸಲು ಸಾಧ್ಯವೇ, ಏನಾಗುತ್ತದೆಯೋ ಅದು ಆಗಲಿ ಅನ್ನೋ ವೈರಾಗ್ಯ ಬಂದು ಅದೇ ಭಾವದಿಂದ ಸುಮ್ಮನಿದ್ದು ಬಿಟ್ಟೆ. 

ನ‌ನ್ನ ಮಾತು, ನನ್ನ ವೈರಾಗ್ಯ ಭಾವ ನನ್ನ ಪತಿರಾಯರಲ್ಲಿ ಭಯ ಹುಟ್ಟಿಸಿತು. ಮಗಳು ಕೂಡಾ ಅಮ್ಮ ಮುಂಚಿನಂತಿಲ್ಲ ಅಂತ ಅನ್ನಿಸಿ, “”ಸದಾ ಆರೋಗ್ಯದ ಲೇಖನ ಓದ್ತಾ ಇರಿ¤àಯಾ, ಅದನ್ನೇ ಟಿವಿಯಲ್ಲೂ ನೋಡ್ತಿಯಾ. ಅದನ್ನ ಅತಿಯಾಗಿ ಓದಬೇಡ, ನೋಡಬೇಡಾ ಅಂದರೂ ಕೇಳಲ್ಲ” ಅಂತ  ದೂರುತ್ತ ಬಲವಂತವಾಗಿ ಅಪ್ಪ-ಮಗಳು ಇಬ್ಬರೂ ಆಸ್ಪತ್ರೆಗೆ ಕರೆದೊಯ್ದು ಬ್ಲಿಡ್‌, ಯೂರಿನ್‌, ಯೂಸಿಜಿ ಅಂತ ದಿನವೆಲ್ಲ ಕೂರಿಸಿ ಇಡೀ ಶರೀರದ ತಪಾಸಣೆ ಮಾಡಿಸಿದ್ದರು. ಎಲ್ಲ ರಿಪೋರ್ಟನ್ನು ಹಿಡಿದುಕೊಂಡು ಡವಡವಿಸುವ ಎದೆಯೊಂದಿಗೆ ವೈದ್ಯರ ಮುಂದೆ ಕುಳಿತಿ¨ªೆ. ಎಲ್ಲವನ್ನು ಗಂಭೀರವಾಗಿ ನೋಡುತ್ತಿದ್ದ ವೈದ್ಯರ ಗಂಭೀರ ಮುಖವನ್ನು ನೋಡಿ ನನಗೆ ಅದೆಂತಹುದೊ ದೊಡ್ಡ ರೋಗವೇ ಬಂದಿರಬೇಕು ಅಂತ ಆ ಕ್ಷಣವೇ ನಿರ್ಧರಿಸಿಬಿಟ್ಟಿ¨ªೆ. ಯಾತನೆಯಿಂದ ನನ್ನವರ ಕಡೆ ನೋಡಿದೆ.

ಕಣ್ಣಿನಲ್ಲಿಯೇ ಧೈರ್ಯ ತುಂಬಿದರು. ಅವರೂ ಕೂಡ ಆತಂಕಗೊಂಡಿದ್ದರು. ಮಗಳು ಹೊರಗೆ ಇದೇ ಆತಂಕದಲ್ಲಿ ಇ¨ªಾಳೆ ಅಂತ ಗೊತ್ತಾಗಿತ್ತು. ನಿಧಾನವಾಗಿ ತಲೆ ಎತ್ತಿದ ವೈದ್ಯರು ನನ್ನತ್ತ ನೋಡಿ ನಸುನಕ್ಕು, “”ಏನೂ ತೊಂದರೆ ಇಲ್ಲ. ಎಲ್ಲವೂ ನಾರ್ಮಲ್‌ ಆಗಿದೆ. ಯಾವ ಔಷಧಿಯೂ ಬೇಡ” ಎಂದಾಗ ಎದೆ ಮೇಲಿನ ಭಾರ ಇಳಿದಂತಾಗಿ ಎದ್ದು ಹೊರಬಂದಿ¨ªೆ. ನನ್ನವರು ಹಗುರವಾಗಿ ಗಾಳಿಯಲ್ಲಿ ಹಾರಿಬಂದಂತೆ ತೇಲಿ ಬಂದು ಮಗಳಿಗೆ ಈ ಸಿಹಿಸುದ್ದಿಯನ್ನು ಹೇಳುತ್ತಿದ್ದದ್ದನ್ನು ನೋಡಿ ನಾನೂ ಹಗುರವಾದೆ.

– ಎನ್‌. ಶೈಲಜಾ ಹಾಸನ

Advertisement

Udayavani is now on Telegram. Click here to join our channel and stay updated with the latest news.

Next