Advertisement

ಕಡಲೆ-ಜೋಳಕ್ಕೆ  ರೋಗಬಾಧೆ 

03:56 PM Dec 13, 2018 | |

ಗಜೇಂದ್ರಗಡ: ಹಿಂಗಾರು ಹಂಗಾಮಿನ ಕಡಲೆ ಮತ್ತು ಜೋಳ ಬೆಳೆಗಳು ಫಸಲು ಹಂತಕ್ಕೆ ಬಂದಿರುವ ಸಮಯದಲ್ಲಿ ಕಾಯಿಕ ಕೊರಕ ರೋಗ ಕಾಣಿಸಿಕೊಂಡಿದ್ದು, ಕೈಗೆ ಬಂದು ತುತ್ತು ಬಾಯಿಗೆ ಬಾರದಂತ ಪರಿಸ್ಥಿತಿ ಗಜೇಂದ್ರಗಡ ತಾಲೂಕಿನ ರೈತರದ್ದಾಗಿದೆ. ಮಳೆ ಹಾಗೂ ತೇವಾಂಶ ಕೊರತೆಯಿಂದ ಬೆಳೆಗಳಿಗೆ ಕಾಯಿಕ ರೋಗ ಕಾಣಿಸಿಕೊಂಡಿದೆ. ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಕ್ರಿಮಿನಾಶಕ ಸಿಂಪಡಣೆಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ.

Advertisement

ಮುಂಗಾರು ಹಂಗಾಮು ಬೆಳೆ ಕೈಕೊಟ್ಟಿತ್ತು. ಹಿಂಗಾರು ಹಂಗಾಮಿನ ಮಳೆ ಆಶ್ರಿತ ಎರಿ(ಕಪ್ಪು) ಭೂಮಿಯಲ್ಲಿ ರೈತರಯ ಅಣ್ಣಿಗೇರಿ ತಳಿಯ ಕಡಲೆ ಮತ್ತು ಜೋಳ ಬೀಜಗಳನ್ನು ಬಿತ್ತನೆ ಮಾಡಿದ್ದರು. ಅಲ್ಪಸಲ್ಪ ಹಿಂಗಾರು ಮಳೆಯಾಗಿತ್ತು. ಇದಲ್ಲದೆ ಇರುವ ಚಳಿಗಾಲದ ಹಿಬ್ಬನಿಯ ತೇವಾಂಶದಿಂದ ಬೆಳೆಗಳು ಹಸಿರಾಗಿದ್ದು, ಉತ್ತಮ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡ ಕಾಯಿಕೊರಕ ರೋಗದಿಂದ ಇಳುವರಿ ಕ್ಷೀಣಬಹುದಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಬೆಳೆಯಲ್ಪಡುವ ಜೋಳ ಈ ಬಾರಿ 1,69,00 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಡಲೆ 63,615 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬೆಳೆಗಳಿಗೆ ಕಾಯಿಕೊರಕ ರೋಗ ಕಾಣಿಸಿಕೊಂಡಿದ್ದು, ಕೃಷಿ ತಜ್ಞರ ಸಲಹೆ ಮೇರೆಗೆ ಔಷಧಗಳನ್ನು ಸಿಂಪಡಿಸಿ ರೋಗಬಾಧೆ ಹತೋಟಿಗೆ ತರಲು ಯತ್ನಿಸಲಾಗುತ್ತಿದೆ ಎಂದು ರೈತರು ತಿಳಿಸುತ್ತಾರೆ. 

ದೇಶ-ವಿದೇಶದಲ್ಲೂ ಬೇಡಿಕೆ 
ಸೂಡಿ, ಕಳಕಾಪುರ, ದಿಂಡೂರ, ಕೊಡಗಾನೂರ, ರಾಜೂರ, ನೆಲ್ಲೂರ, ನಿಡಗುಂದಿ, ಹಾಳಕೇರಿ, ಜಕ್ಕಲಿ, ನೇರೆಗಲ್‌, ರೋಣ, ಇಟಗಿ, ಪ್ಯಾಟಿ, ಬೇವಿನಕಟ್ಟಿ, ಇನ್ನಿತರ ಗ್ರಾಮಗಳಲ್ಲಿ ಬೆಳೆಯುವ ಅಣ್ಣಿಗೇರಿ ತಳಿಯ ಕಡಲೆ ಕಾಳುಗಳಿಗೆ ದೇಶ, ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಗದುಗಿನ ಕೃಷಿ ಮಾರುಕಟ್ಟೆಯಿಂದ ಕಡಲೆ ಹೊರ ದೇಶಗಳಿಗೂ ರವಾನೆಯಾಗುತ್ತದೆ. 

ಹಿಂಗಾರಿ ಜೋಳ, ಕಡಲೆ ಬೆಳಿ ಬೆಳದ ನಿಂತಾವ್ರಿ. ಆದ್ರ ಬೆಳೆಗೆ ಕೀಟಬಾಧೆ ಕಾಟ ಶುರುವಾಗೈತ್ರಿ. ಭೂ ತಾಯಿ ತನ್ನ ಮಕ್ಕಳನ್ನ ಎಂದೆಂದಿಗೂ ಕೈಬಿಡುವದಿಲ್ಲಾ. ನಮ್ಮ ಬದುಕು ಹಸನಾಗಿಸುತ್ತಾಳೆ ಅನ್ನುವ ಖಾತ್ರಿ ಐತ್ರಿ.
 ಕಳಕಪ್ಪ ಕುಂಬಾರ, ಜೋಳ, ಕಡಲೆ ಬೆಳೆದ ರೈತ

Advertisement

ಪ್ರಸಕ್ತ ಬಾರಿ ತಾಲೂಕಿನಲ್ಲಿ ಜೋಳ ಮತ್ತು ಕಡಲೆ ಸೇರಿ ಒಟ್ಟು 80,515 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬೆಳೆಗಳಿಗೆ ಕೀಟಭಾದೆ ತಗುಲುವುದು ಸಾಮಾನ್ಯ. ರೈತರು ಇಮಾಮೆಟಿನ್‌ ಬೆಂಜಿವೆಟ್‌ ಮತ್ತು ಕ್ಲೋರೊಪರಿಪಾಸ್‌ ರಾಸಾಯನಿಕ ಸಿಂಪಡಿಸಲು ಮುಂದಾಗಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಕ್ರಿಮಿನಾಶಕ ದಾಸ್ತಾನು ಸಂಗ್ರಹಿಸಿ ರೈತರಿಗೆ ವಿತರಿಸಲಾಗುತ್ತಿದೆ.
ಸಿದ್ದೇಶ ಕೋಡಳ್ಳಿ, ಸಹಾಯಕ ಕೃಷಿ ನಿರ್ದೆಶಕ.

„ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next