ಹುಬ್ಬಳ್ಳಿ: ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಿರುವ ಬಗ್ಗೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿದ್ದು, ರಾಜ್ಯ ರಾಜಕೀಯ ಕುರಿತಾಗಿ ಮಾಹಿತಿ ಪಡೆದರು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ತಿಳಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಚಲನವಲನ ಬಗ್ಗೆ ಗಮನಿಸಲು ನಾಗಪುರದಿಂದ ತಂಡ ಬಂದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಂದು ವೇಳೆ ಬಂದಿದ್ದರೆ ಅವರು ಗಮನಿಸುವುದರೊಳಗಾಗಿ ಚುನಾವಣೆಯೇ ಮುಗಿದಿರುತ್ತದೆ. ನನ್ನದು ಕಾನೂನು ಬಾಹಿರ ಚಲನವಲನ ಇಲ್ಲವೇ ಇಲ್ಲ. ನಾಗಪುರ ತಂಡದವರು ನನ್ನ ಮೇಲೆ ನಿಗಾ ವಹಿಸಿದರೆ ಏನೂ ಪರಿಣಾಮ ಬೀರುವುದಿಲ್ಲ ಎಂದರು.
ನನ್ನ ಮೇಲೆ ನಿಗಾ ವಹಿಸಲು ನಾಗಪುರ, ಗುಜರಾತ್ ದಿಂದ ಆರ್ಎಸ್ಎಸ್, ಬಿಜೆಪಿ ತಂಡದವರು ಬಂದಿದ್ದಾರೆ ಎಂಬುದನ್ನು ನಾನು ವೆರಿಫೈ ಮಾಡಲು ಹೋಗುವುದಿಲ್ಲ. ಆಕಸ್ಮಾತ್ ಬಂದಿದ್ದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ನಾಗಪುರದಲ್ಲಿ ಅಷ್ಟೊಂದು ಎಕ್ಸಪರ್ಟ್ ತಂಡಗಳು ಇದ್ದಲ್ಲಿ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಏಕೆ ಸೋಲು ಅನುಭವಿಸಿತು ಎಂದು ಪ್ರಶ್ನಿಸಿದರು.
ಚುನಾವಣೆ ಎಂದ ಮೇಲೆ ನೆಗೆಟಿವ್ ಹಾಗೂ ಪಾಸಿಟಿವ್ ಅಭಿಪ್ರಾಯಗಳು ಬಂದೆ ಬರುತ್ತವೆ. ನನ್ನ ಬಗ್ಗೆಯೂ ಇದೀಗ ನೆಗೆಟಿವ್ ಅಭಿಪ್ರಾಯಗಳು ಬಂದಿವೆ. ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಇಂತಹ ಹಲವು ನೆಗಟಿವ್ ಅಭಿಪ್ರಾಯಗಳನ್ನು ನಾನು ಎದುರಿಸಿದ್ದೇನೆ. ಸೆಂಟ್ರಲ್ ಕ್ಷೇತ್ರದ ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಲಿಂಗಾಯತರಿಗೆ ಎಲ್ಲ ಸ್ಥಾನಮಾನ ನೀಡಿದೆ. ಈ ಬಾರೀ ಚುನಾವಣೆಯಲ್ಲಿ ಸಮಾಜದ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹಾನಗಲ್ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ. ಹುಬ್ಬಳ್ಳಿ, ಧಾರವಾಡದಲ್ಲೂ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ನನಗೂ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರಕ್ಕಾಗಿ ಆಹ್ವಾನಿಸುತ್ತಿದ್ದಾರೆ ಎಂದರು.