Advertisement

ಕಿರು ಅರಣ್ಯಗಳ ಅಭಿವೃದ್ಧಿಗೆ ಚರ್ಚೆ

01:01 AM Sep 14, 2019 | Lakshmi GovindaRaju |

ಬೆಂಗಳೂರು: ನಗರದಲ್ಲಿ ಕಿರು ಅರಣ್ಯಗಳನ್ನು ಗುರುತಿಸಿ ಕಬ್ಬನ್‌ಪಾರ್ಕ್‌, ಲಾಲ್‌ಬಾಗ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ಚರ್ಚಿಸಿದರು.

Advertisement

ನಗರದ ವ್ಯಾಪ್ತಿಯಲ್ಲಿನ ಕಿರು ಅರಣ್ಯಗಳನ್ನು ಗುರುತಿಸಿ ಅದರಲ್ಲಿರುವ ಜೀವ ವೈವಿಧ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವತ್ತ ಚಿಂತಿಸಬೇಕು. ಇದರಿಂದ ನಗರದ ಇತರೆಡೆಯ ಜನರಿಗೂ ಅನುಕೂಲವಾಗಲಿದೆ. ಕಿರು ಅರಣ್ಯಗಳ ಜೀವ ವೈವಿಧ್ಯಕ್ಕೆ ಹಾನಿಯಾಗದ ರೀತಿಯಲ್ಲಿ ಉದ್ಯಾನ ಅಭಿವೃದ್ಧಿ ಸಾಧಕ- ಬಾಧಕ ಕುರಿತೂ ಸಮಾಲೋಚನೆ ನಡೆಸಿದರು.

ಸೆ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಪ್ರಯುಕ್ತ ವಿಶೇಷ ಅಭಿಯಾನದ ಮೂಲಕ ಗಿಡಗಳನ್ನು ನೆಡಲು ತೀರ್ಮಾನಿಸಲಾಯಿತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ಇತರರು ಉಪಸ್ಥಿತರಿದ್ದರು. ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಪದಾಧಿಕಾರಿಗಳನ್ನು ಶುಕ್ರವಾರ ಭೇಟಿಯಾಗಿ ನೆರೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಕೆಎಸ್‌ಸಿಎ ಪದಾಧಿಕಾರಿಗಳು ಬಿಸಿಸಿಐ ಒಪ್ಪಿಗೆ ಮೇರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಸೇರಿದಂತೆ ಸಿನಿಮಾ ತಾರೆಯರು ಇತರರೊಂದಿಗೆ ಸೇರಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲು ತಾತ್ವಿಕ ಒಪ್ಪಿಗೆ ನೀಡಿದರು. ಈ ಚಟುವಟಿಕೆಗಳಿಂದ ಸಂಗ್ರಹವಾಗುವ ಹಣವನ್ನು ನೆರೆ ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಸಂಜಯ್‌ ಜೋಷಿ, ಸುಧಾಕರ್‌ ರಾವ್‌, ವಿನಯ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next