ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಆಧಾರದ ಮೇಲೆ ಗೆಲುವು ನಮ್ಮದಾಗಲಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಗೆಲುವು ತಮ್ಮದೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಅತಿ ಹೆಚ್ಚು ಮತ ಚಲಾವಣೆಯಿಂದಾಗಿ ಮೊದಲನೇ ಬಾರಿ ಮತದಾನ ಮಾಡಿದ ಯುವಕರ ಮತಗಳು ಯಾರ ಕೈ ಸೇರಲಿವೆ ಎಂಬ ಚರ್ಚೆಗಳೂ ಕೇಳಿ ಬರುತ್ತಿದೆ.
ತಾಲೂಕಿನ ನಾಲ್ಕು ಹೋಬಳಿಗಳ ಪೈಕಿ ರಾವಂದೂರು ಮತ್ತು ಬೆಟ್ಟದಪುರ ಹೋಬಳಿಗಳಲ್ಲಿ ಕಾಂಗ್ರೆಸ್ ಅಭೈರ್ಥಿಗೆ ಹೆಚ್ಚು ಮತಗಳು ಬಿದ್ದು, ಹಾರನಹಳ್ಳಿ ಮತ್ತು ಕಸಬಾ ಹೋಬಳಿಗಳಲ್ಲಿ ಜೆಡಿಎಸ್ ಮೇಲುಗೈ ಸಾಧಿಸಬಹುದೆಂಬ ಚರ್ಚೆಗಳು ಎರಡೂ ಪಕ್ಷಗಳ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.
ಕಳೆದ ಒಂದು ತಿಂಗಳಿಂದ ವಿಶ್ರಾಂತಿ ಇಲ್ಲದೆ ಮಳೆ ಬಿಸಿಲನ್ನು ಲೆಕ್ಕಿಸದೆ ಚುನಾವಣಾ ಪ್ರಚಾರ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಕೆ.ವೆಂಕಟೇಶ್ ಮರದೂರಿನ ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಸೋಮವಾರ ಬೆಳಗಿನಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಅವರ ತೋಟದ ಮನೆಯಲ್ಲಿ ಶಾಸಕರನ್ನು ಭೇಟಿ ಮಾಡಿ ತಮ್ಮ ಮತಗಟ್ಟೆಗಳಲ್ಲಿ ನಡೆದ ಮತಗಳ ಬಗ್ಗೆ ಚರ್ಚಿಸಿದರು. ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರೊಂದಿಗೆ ನ್ಯೂಸ್ ಪೇಪರ್ ಓದಿದರು. ಚುನಾವಣೆ ಪ್ರಚಾರ, ಕ್ಷೇತ್ರದಲ್ಲಿನ ಮತದಾರರ ಒಲವು ಮತ್ತಿತರೆ ವಿಷಯಗಳ ಬಗ್ಗೆ ಮೆಲಕು ಹಾಕಿದರು.
ಇತ್ತ ಜೆಡಿಎಸ್ ಪಕ್ಷದ ಅಭ್ಯರ್ಥಿ ಕೆ.ಮಹದೇವ್ ಎಂದಿನಂತೆ ಬೆಳಗ್ಗೆ ಎದ್ದು ದಿನ ಪತ್ರಿಕೆ ಮೇಲೆ ಕಣ್ಣಾಡಿಸಿ ಕಾರ್ಯಕರ್ತರೊಂದಿಗೆ ಕೆಲ ಸಮಯ ಕಳೆದು, ಜನರ ಆಶೀರ್ವಾದದೊಂದಿಗೆ ದೇವರ ಆಶೀರ್ವಾದ ಪಡೆಯಲು ಕುಟುಂಬ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.
ಚುನಾವಣೆ ಮುಗಿದಿದ್ದು ಮತದಾರರ ತೀರ್ಪಿಗೆ ತಲೆಬಾಗಲೇಬೇಕಾಗಿದೆ. ಎರಡು ಬಾರಿ ಪರಾಭವಗೊಂಡಿರುವ ನನಗೆ ಈ ಬಾರಿ ಕ್ಷೇತ್ರದ ಜನತೆ ಅತಿ ಹೆಚ್ಚು ಮತಗಳ ಮೂಲಕ ಗೆಲುವು ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಮುಖಂಡರೊಂದಿಗೆ ಹಂಚಿಕೊಂಡರು.