ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ವಿಚಾರಣೆ ನೆಪದಲ್ಲಿ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಮಹಿಳಾ ಉದ್ಯಮಿ ಜೀವಾಳನ್ನು ವಿವಸ್ತ್ರಗೊಳಿಸಿ ಬ್ಲ್ಯಾಕ್ ಮೇಲ್ ಮಾಡಿ, ಚಿತ್ರ ಹಿಂಸೆ ನೀಡಿದ್ದಾರೆ. ಇದೇ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಮೃತ ಜೀವಾ ಸಹೋದರಿ ಸಂಗೀತಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ವಿರುದ್ಧ ಬನಶಂಕರಿ ಠಾಣೆ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಎಫ್ ಐಆರ್ ದಾಖಲಿಸಿದ್ದಾರೆ.
ಇತ್ತೀಚೆಗೆ ಸಿಐಡಿ ವಿಚಾರಣೆ ಎದುರಿಸಿದ್ದ ಮಹಿಳಾ ಉದ್ಯಮಿ ಜೀವಾ ಶುಕ್ರವಾರ ಮುಂಜಾನೆ ರಾಘವೇಂದ್ರ ಲೇಔಟ್‌ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೃತ ಜೀವಾ ಸಹೋದರಿ ಸಂಗೀತಾ ಡಿವೈಎಸ್ಪಿ ಕನಕಲಕ್ಷ್ಮೀ ವಿರುದ್ಧ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?: ದೂರುದಾರೆ ಸಂಗೀತಾ ನೀಡಿದ ದೂರಿನ ಅನ್ವಯ, ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ನಮ್ಮ ಅಕ್ಕ ಜೀವಾ ಹೈಕೋರ್ಟ್ ಆದೇಶದ ಮೇರೆಗೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಎದುರು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಡಿವೈಎಸ್ಪಿ ತಮ್ಮ ಸಹೋದರಿಗೆ ತುಂಬ ತೊಂದರೆ ಕೊಟ್ಟಿದ್ದಾರೆ. ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿವಸ್ತ್ರಗೊಳಿಸಿ ಚಿತ್ರಹಿಂಸೆ: ನ.14ರಿಂದ 23ರ ವರೆಗೆ ವಿಡಿಯೋ ಮೂಲಕ ವಿಚಾರಣೆ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಡಿವೈಎಸ್ಪಿ ಕನಕಲಕ್ಷಿ$¾à ನ.14ರಂದು ಬೆಳಗ್ಗೆ 11 ಗಂಟೆಗೆ ನಮ್ಮ ಅಕ್ಕ ಜೀವಾ ಅವರನ್ನು ವಿಚಾರಣೆ ಕರೆಸಿಕೊಂಡಿದ್ದರು. ಈ ವೇಳೆ ನಮ್ಮ ಅಕ್ಕಳನ್ನು ವಿವಸ್ತ್ರಗೊಳಿಸಿ ಸೈನೆಡ್ ತಂದಿದ್ದೀರಾ ಎಂದು ಕೇಳಿದ್ದಾರೆ. ಅಕ್ಕನಿಗೆ ಚಿತ್ರಹಿಂಸೆ ನೀಡಿ ನೀವೆಲ್ಲಾ ಏಕೆ ಬದುಕಬೇಕು, ನೀನು ದುಡ್ಡು ಹೇಗೆ ಸಂಪಾದಿಸುತ್ತೀಯಾ ಎಂದು ಪ್ರಶ್ನಿಸಿದ್ದಾರೆ. ಪ್ರಕರಣ ಸಂಬಂಧ ಕೆಲ ದಾಖಲೆಗಳನ್ನು ನೀಡಿದರೂ ಸಹ ಡಿವೈಎಸ್ಪಿ ಸ್ವೀಕರಿಸಿಲ್ಲ. ನನಗೆ ದಾಖಲೆ ಬೇಡ, 25 ಲಕ್ಷ ರೂ.ಕೊಟ್ಟು ಸಾಯಿ. ನೀನು ಏಕೆ ಬದುಕಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ವಿಚಾರಣೆ ನೆಪದಲ್ಲಿ ಜೀವಾಳಿಗೆ ಅವಮಾನ: ನ.14ರಿಂದ ನ.21ರ ವರೆಗೆ ಪ್ರತಿದಿನ ಕರೆಸಿಕೊಂಡು ಬೆಳಗ್ಗೆಯಿಂದ ಸಂಜೆ ವರೆಗೆ ಹಿಂಸೆ ನೀಡಿದ್ದಾರೆ. ಅಂಗಡಿ ಪರಿ ಶೀಲಿಸುವ ನೆಪದಲ್ಲಿ ಕರೆದೊಯ್ದು ಎಲ್ಲರ ಎದುರು ಅಕ್ಕನಿಗೆ ಅವಮಾನ ಮಾಡಿದ್ದಾರೆ. ನಮ್ಮ ಅಕ್ಕ 13 ಪುಟಗಳ ಡೆತ್ ನೋಟ್ ಬರೆದು, ನ.22ರ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕನ ಸಾವಿಗೆ ಸಿಐಡಿ ಡಿವೈಎಸ್ಪಿ ಕನಕಲಕ್ಷ್ಮೀ ಯೇ ಕಾರಣ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂಗೀತಾ ದೂರಿನಲ್ಲಿ ಕೋರಿದ್ದಾರೆ.