Advertisement
ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದಾಗಿನಿಂದಲೂ ಅಡೆತಡೆಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿದ್ದ ಮಳೆ ಮಾಪನ ಕೇಂದ್ರವು, ಪ್ರಸಕ್ತ ಆಸ್ಪತ್ರೆಯು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿ ವಿಸ್ಕೃತ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿರುವ ಹೊತ್ತಲ್ಲಿ, ಕಾಮಗಾರಿಗೆ ಅಡಚಣೆ ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆ ಮಾಪನ ಕೇಂದ್ರವನ್ನು ತೆರವುಗೊಳಿಸಲು ಆರೋಗ್ಯ ಇಲಾಖೆಯು ಹವಾಮಾನ ಇಲಾಖೆಗೆ ಸೂಚಿಸಿತ್ತು.
ಪರ್ಯಾಯ ಸ್ಥಳದಲ್ಲಿ ಮಳೆ ಮಾಪನ ಕೇಂದ್ರವನ್ನು ಅಳವಡಿಸಲು ಹವಾಮಾನ ಇಲಾಖೆ ಅಧಿಕಾರಿಗಳ ತಂಡ ಉಪ್ಪಿನಂಗಡಿಯಲ್ಲಿ ಪರಿಶೀಲನೆ ನಡೆಸಿ, ನಿರ್ಗಮಿಸಿತ್ತು. ಇದಾಗಿ ಏಳು ತಿಂಗಳು ಉರುಳಿದರೂ ಸ್ಥಳಾಂತರ ಕಾರ್ಯ ನಡೆಯದೇ ಇರುವುದು ಅಚ್ಚರಿ ಮೂಡಿಸಿದೆ. ಅಧಿಕಾರಿಗಳಿಗೆ ಮಳೆ ಮಾಪನ ಕೇಂದ್ರ ಮರೆತು ಹೋಗಿದೆಯೇ? ಅಥವಾ ಮಳೆ ಮಾಪನ ಕೇಂದ್ರ ಸ್ಥಾಪಿಸಲು ಅಗತ್ಯವಾದ 15 ಅಡಿ ಸುತ್ತಳತೆಯ ಜಾಗ ಸರಕಾರದ ಬಳಿ ಇಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ. ಪ್ರಸ್ತುತ ಮಳೆ ಮಾಪನ ಕೇಂದ್ರಕ್ಕೆ ಅಳವಡಿಸಲಾದ ರಕ್ಷಣಾ ಬೇಲಿ ಅಲ್ಲಲ್ಲಿ ತುಂಡಾಗಿದ್ದು, ಸಾಧನಗಳು ಅಪಾಯಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲೂ ಮಳೆ ಮಾಪನ ಕೇಂದ್ರದ ಸುರಕ್ಷತೆ ಹಾಗೂ ಸ್ಥಳಾಂತರಕ್ಕೆ ಇಲಾಖೆ ಆದ್ಯತೆ ನೀಡಬೇಕಾಗಿದೆ.
Related Articles
ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಇಲಾಖೆಯ ಗ್ರಾಮ ಕರಣಿಕ ರಮಾನಂದ ಚಕ್ಕಡಿ, ಏಳು ತಿಂಗಳ ಹಿಂದೆ ಹವಾಮಾನ ಇಲಾಖೆ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ತಂಡ ಪರಿಶೀಲನ ಕಾರ್ಯ ನಡೆಸಿ ನಿರ್ಗಮಿಸಿತ್ತು. ಆಮೇಲಿನ ಬೆಳವಣಿಗೆ ಏನಾಗಿದೆ ಎನ್ನುವುದನ್ನು ತಿಳಿಸಿಲ್ಲ. ಪ್ರಸಕ್ತ ಮಳೆ ಮಾಪನದ ವರದಿಯನ್ನು ನಮ್ಮ ಇಲಾಖೆಯ ಮುಖೇನ ಗ್ರಾಮ ಸಹಾಯಕರು ಬೆಂಗಳೂರಿನ ಹವಾಮಾನ ಇಲಾಖೆಗೆ ರವಾನಿಸುತ್ತಿದ್ದು, ಈ ಕಾರ್ಯ ಹಿಂದಿನಂತೆಯೇ ನಡೆಯುತ್ತಿದೆ ಎಂದಿದ್ದಾರೆ.
Advertisement
ಸ್ಥಳಾಂತರ ಅನಿವಾರ್ಯಮಳೆ ಮಾಪನವು ಹವಾಮಾನ ಇಲಾಖೆಗೆ ಅತ್ಯಗತ್ಯವಾದ ವ್ಯವಸ್ಥೆಯಾಗಿದ್ದು, ಹಲವಾರು ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಕಾರ್ಯ ನಡೆಯುತ್ತಿದೆ. ಆಸ್ಪತ್ರೆಯ ಕಟ್ಟಡ ಕಾಮಗಾರಿಯ ಕಾರಣಕ್ಕೆ ಅದು ಸ್ಥಳಾಂತರಗೊಳ್ಳುವುದು ಅನಿವಾರ್ಯ. ಸ್ಥಳಾಂತರಗೊಳ್ಳದೆ ಅವ್ಯವಸ್ಥೆಯಿಂದ ಹಾನಿಗೀಡಾಗಿ ಉಪಯೋಗಕ್ಕಿಲ್ಲದಂತೆ ಆಗಬಾರದು. ಈ ದಿಶೆಯಲ್ಲಿ ಸಂಬಂಧಪಟ್ಟ ಇಲಾಖೆ ಕಾಳಜಿಯುಕ್ತ ಗಮನಹರಿಸಬೇಕೆಂದು ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ಆಗ್ರಹಿಸಿದ್ದಾರೆ.