ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಮಾಸ್ತಿ ದುರ್ಗಾ ಚಿಣ್ಣರ ಬಳಗದ ಮಕ್ಕಳನ್ನು ಭಜನೆ ಮೂಲಕ ರೂಪಿಸಲಾಗುತ್ತಿದೆ. ಸುಮಾರು 15 ವರ್ಷಗಳಿಂದ ಈ ಮಾದರಿ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
Advertisement
ಬಳಗದ ಮಾಹಿತಿಈ ಚಿಣ್ಣರ ಬಳಗದಲ್ಲಿ 15ರಿಂದ 20 ವಿದ್ಯಾರ್ಥಿಗಳಿದ್ದಾರೆ. ಇವರೆಲ್ಲರೂ 1ರಿಂದ 10ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಿರುವವರೇ ಆಗಿದ್ದಾರೆ. ಪ್ರತಿ ಶುಕ್ರವಾರ ಸಂಜೆ ದೇವಸ್ಥಾನದಲ್ಲಿ ಭಜನೆ ನಡೆಯುತ್ತದೆ. ಜಿಲ್ಲೆಯಾದ್ಯಂತ ಮಾತ್ರವಲ್ಲದೆ ವಿವಿಧೆಡೆ 2,000ಕ್ಕೂ ಮಿಕ್ಕಿ ಭಜನಾ ಕಾರ್ಯಕ್ರಮ ನಡೆಸಿದ ಹೆಗ್ಗಳಿಗೆ ಹೊಂದಿದೆ. ಗುರುಗಳಾದ ರಾಘವೇಂದ್ರ ರಾವ್ ಅವರು ಮಕ್ಕಳಿಗೆ ಭಜನಾ ತರಬೇತಿ ನೀಡುತ್ತಿದ್ದಾರೆ.
ಚಿಕ್ಕಮಕ್ಕಳಲ್ಲಿ ದೇವರ ಮೇಲೆ ಭಯ, ನಂಬಿಕೆಯನ್ನು ಮೂಡಿಸುವುದು. ಧ್ಯಾನ, ಭಜನೆ, ಸತ್ಸಂಗ ಮೊದಲಾದವುಗಳಿಗೆ ಹೆಚ್ಚಿನ ಪ್ರಾಧಾನ್ಯ ಕೊಟ್ಟು ಸನಾತನ ಧರ್ಮ ಉಳಿಸುವುದು ಬಳಗದ ಉದ್ದೇಶ. ಭಜನೆಯಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿದೆ. ಕಲಿಕೆಯಲ್ಲೂ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಸಭಾ ಕಂಪನ ದೂರವಾಗಿ ತಾಳ್ಮೆ, ಶಿಸ್ತು ಮೂಡಿದೆ. ಮಕ್ಕಳ ಮನೆಯಲ್ಲೂ ಮದ್ಯವ್ಯಸನದಂತಹ ದುಶ್ಚಟಗಳನ್ನು ದೂರಮಾಡಲು ಸಹಕಾರಿಯಾಗಿದೆ. ಕಲಿಕೆಗೂ ಪ್ರೋತ್ಸಾಹ
ಈ ಬಳಗದ ಅಧ್ಯಕ್ಷ ಅನಂತ ಪದ್ಮನಾಭ ಭಟ್ ಅವರು ಸಾರ್ವಜನಿಕರಿಂದ ಹಣ ಸಂಗ್ರಹಿಸದೆ ತಮ್ಮ ಸ್ವಂತ ಖರ್ಚಿನಿಂದ ಮಕ್ಕಳಿಗೆ ಪ್ರತಿ ವರ್ಷ ಕಲಿಕೋಪಕರಣ ಹಾಗೂ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸುತ್ತಿರುವುದು ಇನ್ನೊಂದು ವಿಶೇಷ.
Related Articles
ಆಧುನಿಕ ಯುಗದ ಭರಾಟೆಯಲ್ಲಿ ಧಾರ್ಮಿಕ ಪ್ರಜ್ಞೆ ಮರೆಯಾಗಬಾರದು. ಭಜನೆಯಿಂದ ಬಳಗದ ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಉತ್ತಮ ಸಂಸ್ಕಾರ ಹೊಂದಿ ಭಾರತದ ಹೆಮ್ಮೆಯ ಪ್ರಜೆಗಳಾಗಿ ಬದುಕು ಸಾಗಿಸಬೇಕೆನ್ನುವುದು ನಮ್ಮ ಉದ್ದೇಶ.
– ಅನಂತ ಪದ್ಮನಾಭ ಭಟ್,
ಚಿಣ್ಣರ ಬಳಗದ ಅಧ್ಯಕ್ಷ
Advertisement
– ಪ್ರವೀಣ್ ಮುದ್ದೂರು