Advertisement

ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಶಿಸ್ತು ಕ್ರಮ

09:15 AM Dec 25, 2018 | Team Udayavani |

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಯಾರೇ ಆದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಶಿಸ್ತು ಸಮಿತಿ ಇನ್ನು ಮುಂದೆ ನಿರಂತರವಾಗಿ ಕಾರ್ಯ ನಿರ್ವಹಿಸಲಿದ್ದು, ಪಕ್ಷದ ಶಿಸ್ತು ಉಲ್ಲಂ ಸುವವರ ವಿರುದ್ಧ ಯಾವಾಗಬೇಕಾದರೂ ದೂರು ನೀಡಬಹುದು ಎಂದು
ತಿಳಿಸಿದರು. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಹಿರಿಯ ಶಾಸಕರೂ ನಿರೀಕ್ಷಿತ ಮಟ್ಟದಲ್ಲಿ ಶಾಸಕರನ್ನು
ಗೆಲ್ಲಿಸಿಕೊಂಡು ಬಂದಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಂತವರಿಗೆ ಸಚಿವ ಸ್ಥಾನ ನೀಡದಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ ಎಂದು ಪರೋಕ್ಷವಾಗಿ ಕೆಲವು ಹಿರಿಯರಿಗೆ ಸಚಿವ ಸ್ಥಾನ ನೀಡದ ಕಾರಣವನ್ನು ಸೂಕ್ಷ್ಮವಾಗಿ ಹೇಳಿದರು.

Advertisement

ಈಗಾಗಲೇ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವವರ ಬಗ್ಗೆ ಒಂದು ವರ್ಷ ಪೂರೈಸಿದ ನಂತರ ಮೌಲ್ಯಮಾಪನ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಸರಿಯಾಗಿಕೆಲಸ ಮಾಡದ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುವುದು
ಎಂದು ಹೇಳಿದರು.

ರಮೇಶ್‌ ಜಾರಕಿಹೊಳಿ ಪಕ್ಷದ ವಿರುದ್ಧ ಮಾತನಾಡಿಲ್ಲ: ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್‌
ಜಾರಕಿಹೊಳಿ ಅವರು ಪಕ್ಷದ ಹಿರಿಯ ನಾಯಕರು. ನನ್ನೊಂದಿಗೆ ಅವರೂ ವಿಧಾನಸಭೆಗೆ ಅಯ್ಕೆಯಾಗಿದ್ದರು. ಅವರಿಗೆ ಸಚಿವರಾಗಿ ಸಂಪುಟ ಸಭೆ, ಜಿಲ್ಲಾ ಮಟ್ಟದ ಸಭೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಲಾಗಿದೆ. ನಾನೂ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಎರಡು ಮೂರು ದಿನದಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಹೇಳಿದರು. ಹಿರಿಯ ನಾಯಕರಾದ ಕೆ.ಎನ್‌.ರಾಜಣ್ಣ ಹಾಗೂ
ಕೆ.ಬಿ. ಕೋಳಿವಾಡ್‌ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿದಾಗ ಅವರಿಗೂ ನೊಟೀಸ್‌ ನೀಡಲಾಗಿತ್ತು.
ಅವರು ಸ್ಪಷ್ಟನೆ ನೀಡಿದ್ದು, ಇನ್ನು ಮುಂದೆ ಆ ರೀತಿಯ ಹೇಳಿಕೆ ನೀಡುವುದಿಲ್ಲ ಎಂದು ಹೇಳಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಅದೇ ರೀತಿ ಆರೋಪ ಕೇಳಿ ಬಂದಿರುವ ಅನೇಕ
ಸ್ಥಳೀಯ ನಾಯಕರ ಬಗ್ಗೆ ಶಿಸ್ತು ಸಮಿತಿ ಸಭೆ ನಡೆಸಿ ವಿವರಣೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದರು.

6 ವರ್ಷ ಕಾಲ ಉಚ್ಛಾಟನೆ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಮೂವರು ಜಿಪಂ ಸದಸ್ಯರು ಹಾಗೂ ಐವರು ತಾಪಂ ಸದಸ್ಯರು ಮತ್ತು ಒಬ್ಬರು ಮಾಜಿ ಎಪಿಎಂಸಿ ಅಧ್ಯಕ್ಷರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಚುನಾವಣೆ ವೇಳೆ ರಚಿಸಿದ್ದ ಶಿಸ್ತು ಸಮಿತಿ ನೀಡಿರುವ ವರದಿ ಆಧರಿಸಿ ಒಂಭತ್ತು ಜನರನ್ನು ವಜಾ ಮಾಡಲಾಗಿದೆ ಎಂದು ದಿನೇಶ್‌
ಗುಂಡೂರಾವ್‌ ತಿಳಿಸಿದರು.

ಸುದರ್ಶನ್‌ ನೇತೃತ್ವದ ಶಿಸ್ತು ಸಮಿತಿ ವರದಿ: ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌ ನೇತೃತ್ವದ ಶಿಸ್ತು ಸಮಿತಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ವರದಿ ನೀಡಿದ್ದು, ವರದಿಯಲ್ಲಿ ಪ್ರಮುಖವಾಗಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಒಂಭತ್ತು ಜನರನ್ನು ಆರು ವರ್ಷಗಳ ಕಾಲ ಉಚ್ಚಾಟನೆ ಮಾಡುವಂತೆ ಶಿಫಾರಸು ಮಾಡಿದ್ದಾರೆ. ವಿಧಾನಸಭೆ, ವಿಧಾನ ಪರಿಷತ್‌ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ
ಹೇಳಿಕೆ ನೀಡಿರುವ ಬಗ್ಗೆ ಶಿಸ್ತು ಸಮಿತಿ ಮುಂದೆ 44 ದೂರುಗಳು ಬಂದಿದ್ದು, ಅವುಗಳಲ್ಲಿ 9 ಜನರ ವಿರುದ್ದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದು, ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿದ್ದರು. ಅಲ್ಲದೇ 18 ಜನರ ವಿರುದ್ಧ ಯಾವುದೇ ಸಾಕ್ಷಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ಕೈ ಬಿಡುವಂತೆಯೂ 13 ಜನರ
ವಿರುದ್ಧ ಸಣ್ಣ ಪುಟ್ಟ ಆರೋಪ ಕೇಳಿ ಬಂದಿದ್ದರಿಂದ ಎಚ್ಚರಿಕೆ ನೀಡಿರುವುದಾಗಿ ಶಿಫಾರಸಿನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next