ಶ್ರೀನಗರ: ಹಿಜ್ಬುಲ್ ಮುಜಾಹಿದೀನ್ ಉಗ್ರರನ್ನು ದಿಲ್ಲಿಗೆ ಕರೆದುಕೊಂಡು ಬರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ, ವಜಾಗೊಂಡಿರುವ ಡಿಎಸ್‌ಪಿ ದೇವೀಂದರ್ ಸಿಂಗ್ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಂದಾಗಿಯೇ ಅಧಃಪತನಕ್ಕೆ ಇಳಿದರು ಎಂಬ ಅಂಶ ಬೆಳಕಿಗೆ ಬಂದಿದೆ.
ಉಗ್ರರ ಜತೆಗೆ ಕೈಜೋಡಿಸುವ ಮೊದಲೇ ಆ ಅಧಿಕಾರಿ ಒಂಟಿ ತೋಳದಂತೆ ಇರುತ್ತಿದ್ದ. ಸೇವೆಯಲ್ಲಿ ಇರುವಾಗಲೇ ಜಮ್ಮು ಮತ್ತು ಪೊಲೀಸ್ ಅಧಿಕಾರಿಗಳ ವರ್ಗದಲ್ಲಿ ವಿಶ್ವಾಸಕ್ಕೆ ಅರ್ಹನಲ್ಲ ಎಂಬ ಕುಖ್ಯಾತಿಗೂ ಒಳಗಾಗಿದ್ದ. ಆತನ ವಿರುದ್ಧ ಹಲವು ಸುಲಿಗೆಯ ಆರೋಪಗಳೂ ಹಿಂದಿನ ಸಂದರ್ಭಗಳಲ್ಲಿ ಕೇಳಿ ಬಂದಿದ್ದವು ಎಂದು ಸದ್ಯ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎನ್‌ಐಎ ಹೇಳಿದೆ.
ಆತ ಮದಿರೆ, ಮಾನಿನಿ, ವಯಾಗ್ರದ ಹಿಂದೆ ಬಿದ್ದಿದ್ದ ಕಾರಣ ಎಷ್ಟು ಪ್ರಮಾಣದಲ್ಲಿ ದುಡ್ಡು ಇದ್ದರೂ, ಸಾಕಾಗುತ್ತಿರಲಿಲ್ಲ. ತನಿಖೆ-ವಿಚಾರಣೆ ವೇಳೆ ದೇವಿಂದರ್ ಸಿಂಗ್ ಹೇಳಿಕೊಂಡ ಪ್ರಕಾರ, ಆತ ಹಲವಾರು ಮಹಿಳೆಯರ ಜತೆಗೆ ಸಂಬಂಧ ಹೊಂದಿದ್ದ. ಹೆಚ್ಚಿನ ರೀತಿಯಲ್ಲಿ ಲೈಂಗಿಕ ವಾಂಛೆಗಳನ್ನು ಪಡಕೊಳ್ಳುವ ನಿಟ್ಟಿನಲ್ಲಿ ಆತ ವಯಾಗ್ರದ ಮೊರೆ ಹೋಗಿದ್ದ. ಇದೆಲ್ಲದಕ್ಕೆ ಕಳಶವಿಟ್ಟಂತೆ ಶ್ರೀನಗರದಲ್ಲಿ ಅದ್ಧೂರಿ ಬಂಗಲೆಯ ನಿರ್ಮಾಣದಲ್ಲೂ ತೊಡಗಿದ್ದ.
ಇತ್ತೀಚಿನ ದಿನಗಳಲ್ಲಿ ಆತನಿಗೆ ಆರ್ಥಿಕ ಸಂಪನ್ಮೂಲದ ಕೊರತೆ ಕಾಡಲು ಶುರುವಾಗಿತ್ತು ಎಂದು ಎನ್‌ಐಎ ಮೂಲಗಳು ಹೇಳಿವೆ. ತನ್ನೆಲ್ಲಾ ವೈಯಕ್ತಿಕ ತೃಷೆ ತೀರಿಸಿಕೊಳ್ಳಲು ಹೆಚ್ಚಿನ ಹಣದ ಅಗತ್ಯ ಬಿದ್ದುದರಿಂದ ಉಗ್ರರ ಜತೆಗೆ ಕೈಜೋಡಿಸಿದ್ದ.
ಇತ್ತೀಚೆಗೆ ವಿಚಾರಣೆ ಸಂದರ್ಭದಲ್ಲಿ ನಾಲ್ಕೂವರೆ ದಶಕಗಳ ಪೊಲೀಸ್ ಸೇವೆಯಲ್ಲಿ ಕೊನೆಯ ಹಂತದಲ್ಲಿ ಹೀಗೆ ದಾರಿ ತಪ್ಪಿದ್ದಕ್ಕೆ ಹಲವು ಬಾರಿ ಕಣ್ಣೀರು ಹಾಕಿದ್ದಾನೆ ಎಂದೂ ಅವರು ಹೇಳಿಕೊಂಡಿದ್ದಾರೆ.