Advertisement
ಈಗಿನ ಯುವಕರು, ಅದರಲ್ಲೂ ಮಹಾನಗರಗಳಲ್ಲಿನ ಯುವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳೇನು ಎಂಬ ಪ್ರಶ್ನೆಯನ್ನು ಹಿರಿಯರಿಗೆ ಕೇಳಿನೋಡಿ. ಬಹುತೇಕರು ತಕ್ಷಣ ಉಡಾಫೆಯ ದನಿಯಲ್ಲಿ ಉತ್ತರಿಸುತ್ತಾರೆ, “ಏನೂ ಸಮಸ್ಯೆಯಿಲ್ಲ. ನಮ್ಮ ಕಾಲದಲ್ಲಿ ನಾವು ಅನುಭವಿಸಿದಷ್ಟು ಕಷ್ಟ ಇವೇನು ಅನುಭವಿಸಿವೆ?’ “ಉನ್ನತ ಪದವಿ, ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಕೆಲಸ, ಕೈ ತುಂಬಾ ಸಂಬಳ, ಚಿಕ್ಕ ವಯಸ್ಸಲ್ಲೇ ಕಾರು,ಇನ್ನೆರಡು ವರ್ಷದಲ್ಲಿ ಒಂದು ಸ್ವಂತ ಅಪಾರ್ಟ್‌ಮೆಂಟು… ಎಲ್ಲ ಇದೆಯಲ್ಲ’ ಎನ್ನುವ ಸಮರ್ಥನೆಯೂ ಬಂದೀತು. ಇದೆಲ್ಲ ಇದೆ ಆದರೆ ಇವೆಲ್ಲ ಸಿಕ್ಕ ಮೇಲೂ ಅವರಿಗೆ ನೆಮ್ಮದಿ ಏಕೆ ಸಿಗುತ್ತಿಲ್ಲ? ಜೀವನದಲ್ಲಿ ಸಾಧಿಸಲೇಬೇಕಾದ ಟಾಸ್ಕ್ಗಳು ಏಕೆ ಮುಗಿಯು ತ್ತಲೇ ಇಲ್ಲ? ಎಂಬ ಪ್ರಶ್ನೆಯನ್ನು ಅವರಿಗೆ ಎಂದಾದರೂ ಕೇಳಿದ್ದೀರಾ?
Related Articles
Advertisement
ಒಮ್ಮೆ ಸಾಮಾಜಿಕ ಮಾಧ್ಯಮಕ್ಕೆ ಅಥವಾ ಅಂತರ್ಜಾಲ ಲೋಕಕ್ಕೆ ಪ್ರವೇಶಿಸಿ ನೋಡಿ. ನಿಮ್ಮ ಪರಿಚಿತನೊಬ್ಬ ತನ್ನ ಹೊಸ ಕಾರ್‌ನೊಂದಿಗೆ ಫೋಟೋ ಹಾಕಿರುತ್ತಾನೆ, ಇತ್ತೀಚೆಗೆ ಮದುವೆಯಾದ ಯುವ ಜೋಡಿ ಹವಾಯಿ ದ್ವೀಪಕ್ಕೆ ತಾವು ಹನಿಮೂನ್‌ಗೆ ಹೋಗಿರುವುದಾಗಿ ಚೆಕ್‌ಇನ್ ಕೊಟ್ಟಿರುತ್ತದೆ, ನಿಮ್ಮ ಸರೀಕನೊಬ್ಬ ಫ್ಯಾಮಿಲಿಯೊಂದಿಗೆ ಪ್ರಪಂಚ ಪರ್ಯಟನೆ ಮಾಡುತ್ತಿರುತ್ತಾನೆ, ನಿಮ್ಮ ಪರಿಚಿತರ ಮಗಳು ತನ್ನ ಫ್ರೆಂಡ್ಸ್ ಜೊತೆಗೆ ಕಾಸ್ಟಿ ಹೊಟೆಲ್‌ಗೆ ಹೋಗಿ ಅಲ್ಲಿನ ದುಬಾರಿ ತಿಂಡಿಯ ಫೋಟೋ ಹಾಕಿರುತ್ತಾಳೆ…ಇಷ್ಟಕ್ಕೇ ಇದು ನಿಲ್ಲುವುದಿಲ್ಲ, ಟ್ರಿಪ್/ಲೈಫ್ ಅಡ್ವೆ„ಸರ್ ತಾಣಗಳು ನಿಮ್ಮತ್ತ ಕ್ಷಣಕ್ಷಣಕ್ಕೆ ಲೇಖನಗಳನ್ನು ಹರಿಬಿಡುತ್ತವೆ: “ನೀವು ಸಾಯುವ ಮುನ್ನ ನೋಡಲೇಬೇಕಾದ ಹತ್ತು ಸ್ಥಳಗಳು’, “25 ವರ್ಷಕ್ಕೂ ಮುನ್ನ ಮಾಡಲೇಬೇಕಾದ 5 ಹೂಡಿಕೆಗಳು’ “30ಕ್ಕೂ ಮುನ್ನ ತಂಗಲೇಬೇಕಾದ 10 ರೆಸಾರ್ಟ್‌ಗಳು’, “ನಿಮ್ಮ ಕನಸಿನ ಮನೆ ಹೇಗಿರಬೇಕು ಗೊತ್ತೇ?'”ಈ ಹಾಲಿವುಡ್ ನಟಿಯ ಒಂದು ಸಿನೆಮಾ ಆದಾಯ ಎಷ್ಟು ಗೊತ್ತೇ?’ “ಚಿಕ್ಕ ವಯಸ್ಸಲ್ಲೇ ಕೋಟ್ಯಧಿಪತಿಯಾದ ಹುಡುಗನ ಕಥೆ ಕೇಳಿದರೆ ಗಾಬರಿಯಾಗುತ್ತೀರಿ…’ “ಸ್ಕಾರ್‌ಲೆಟ್ ಜಾನ್ಸನ್‌ಳ ವಾರ್ಡರೋಬ್‌ನಲ್ಲಿ ಎಷ್ಟು ಬಟ್ಟೆಗಳಿವೆ?’…
ಇದನ್ನೆಲ್ಲ ನೋಡಿದಾಗ ಏನನ್ನಿಸುತ್ತದೆ? ಇಡೀ ಜಗತ್ತೇ ಸುಂದರ-ಸುಖಮಯ ಜೀವನ ನಡೆಸುತ್ತಿದೆ, ನಾನು ಮಾತ್ರ ಏನೂ ಮಾಡದೇ, ಬದುಕು ವ್ಯರ್ಥ ಮಾಡುತ್ತಿದ್ದೇನೆ ಎಂದೇ ಅಲ್ಲವೇ? ಕೀಳರಿಮೆ ಬೆಳೆಯಲು ಇನ್ನೇನು ಬೇಕು? ಇದು ಒಂದು ದಿನದ ಕಥೆಯಲ್ಲ. ನಿತ್ಯವೂ ಸುದ್ದಿವಾಹಿನಿಗಳು, ಪತ್ರಿಕೆಗಳು, ಅಂತರ್ಜಾಲ ಲೋಕ, ರಸ್ತೆಯಲ್ಲಿನ ಜಾಹೀರಾತು ಹೋರ್ಡಿಂಗ್‌ಗಳು, ಮಿಂಚುವ ಮಾಡೆಲ್‌ಗಳು ಕ್ಷಣಕ್ಷಣಕ್ಕೂ ಇಂದಿನ ಯುವ ಸಮುದಾಯದಲ್ಲಿ ಹುಟ್ಟಿಸುತ್ತಿರುವ ಕೀಳರಿಮೆಯ ಪರಮಾ ವಧಿಯಿದು. ಜೀವನದಲ್ಲಿ ಒಮ್ಮೆಯಾದರೂ ಬಂಜಿ ಜಂಪಿಂಗ್ ಮಾಡ ಬೇಕು, ಸ್ಕೈ ಡೈವಿಂಗ್ ಮಾಡಬೇಕು, 40 ವರ್ಷ ಮುಗಿಯುವುದರೊಳಗೆ ಸೆಟಲ್ ಆಗಿಬಿಡಬೇಕು, ಅದಕ್ಕಾಗಿ ನಿದ್ದೆಗೆಟ್ಟು ಕೆಲಸ ಮಾಡಬೇಕು (ಆಹಾರ- ಆರೋಗ್ಯದ ಕಾಳಜಿಯಿಲ್ಲದೆ) ಎನ್ನುವ ಒತ್ತಡದ ಆಕಾಂಕ್ಷೆಗಳು ಯುವಕರಲ್ಲಿ ತೀವ್ರವಾಗಿ ಹುಟ್ಟಿಕೊಂಡಿದೆ ಎನ್ನುವುದು ನಿಮಗೆ ಗೊತ್ತೇ? ಇಂದು “ಆರ್ಡಿನರಿ ಬದುಕು ನಡೆಸುವುದೇ ಮಹಾಪಾಪ’ ಎನ್ನುವಂಥ ವಾತಾವರಣದಲ್ಲಿದೆ ಯುವಸಮುದಾಯ ಎನ್ನುವುದನ್ನು ಗಮನಿಸಿ ದ್ದೀರಾ? ಈ ಕಾಲದ ದುರಂತವೆಂದರೆ, ಕಷ್ಟಪಟ್ಟರೆ ಯಾರು ಬೇಕಾದರೂ ಬಿಲ್‌ಗೇಟ್ಸ್ ಆಗಬಹುದು, ನಿರಂತರ ಪರಿಶ್ರಮದಿಂದ ಮಾತ್ರ ಯಶಸ್ಸಿನ ತುದಿಗೇರುವುದಕ್ಕೆ ಸಾಧ್ಯ ಎಂಬ ಭ್ರಮೆ ಸೃಷ್ಟಿಯಾಗಿರುವುದು.ಬಿಲ್‌ಗೇಟ್ಸ್‌ಗಿಂತ ನೀವು ಹೆಚ್ಚು ಬುದ್ಧಿವಂತ ರಾಗಿದ್ದರೂ, ಅವರಿಗಿಂತ ಹೆಚ್ಚು ಅದ್ಭುತ ಆವಿಷ್ಕಾರಗಳನ್ನು ಮಾಡಿದರೂ ಹೇಳಹೆಸರಿಲ್ಲದಂತೆ ಗದ್ದಲದಲ್ಲಿ ಕಳೆದುಹೋಗಬಹುದು ಎನ್ನುವ ವಾಸ್ತವವನ್ನು ಯುವಕರಿಗೆ ಮನದಟ್ಟು ಮಾಡಿಸುವವರು ಯಾರು? ಗ್ಯಾರೇಜ್ ಅಲ್ಲಿ ಕಂಪನಿ ಆರಂಭಿಸಿದಾಕ್ಷಣ ಎಲ್ಲರಿಗೂ ಬಿಲ್‌ಗೇಟ್ಸ್ ಆಗುವುದಕ್ಕೆ, ಸ್ಟೀವ್ ಜಾಬ್ಸ್ ಆಗುವುದಕ್ಕೆ, ಅಮೆಜಾನ್ ಕಂಪನಿ ಹುಟ್ಟುಹಾಕುವುದಕ್ಕೆ ಸಾಧ್ಯವೇ?
ನಮಗೆ 700 ಕೋಟಿ ಜನರಲ್ಲಿ ಒಬ್ಬ ಬಿಲ್‌ಗೇಟ್ಸ್, ಒಬ್ಬ ಸ್ಟೀವ್ ಜಾಬ್ಸ್ ಕಾಣಿಸುತ್ತಾನೆಯೇ ಹೊರತು, ಅವರಂತಾಗದ “ಉಳಿದವರಲ್ಲ’. ಫಾರ್ಚೂನ್ 500 ಕಂಪನಿಗಳು ಕಾಣಿಸುತ್ತವೆಯೇ ಹೊರತು ಕೋಟ್ಯಂತರ ಅನ್‌ಫಾರ್ಚುನೇಟ್ ಕಂಪನಿಗಳಲ್ಲ…ಲಾಟರಿ ಗೆಲ್ಲುವ ಒಬ್ಬ ಕಾಣುತ್ತಾನೆಯೇ ಹೊರತು, ಗೆಲ್ಲದ ಕೋಟ್ಯಂತರ ಜನರಲ್ಲ…***
ಮನೆಯವರೊಂದಿಗಿನ ಆಪ್ತ ಹರಟೆ, ಭಾನುವಾರದ ಮಂಜು ಮುಸುಕಿದ ಮುಂಜಾವಿನಲ್ಲಿ ಹೆಜ್ಜೆಯಿಡುವ ಮುದ, ಮಡದಿಯೊಂದಿಗೆ ಮಾಡಿದ ಅಡುಗೆ…ಮಕ್ಕಳ ಜೊತೆ ಕಣ್ಣಾಮುಚ್ಚಾಲೆ ಆಟ…ಮನೆ ಅಂಗಳದಲ್ಲಿ ಕಟ್ಟಿದ ಇರುವೆ ಗೂಡು…ಏಕೆ ಇವೆಲ್ಲವೂ “ಸುಖೀ ಬದುಕಿನ’ ವ್ಯಾಪ್ತಿಯಿಂದ ಹೊರಗೆ ಹೋಗಿಬಿಟ್ಟಿವೆ? ಏಕೆ ಹಣ ಮತ್ತು ಸ್ಟೇಟಸ್ ಮಾತ್ರ ಸುಖ-ಯಶಸ್ಸಿನ ಮಾನಂದಂಡವಾಗಿಬಿಟ್ಟಿದೆ? ಪಾಪ, ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಸಮಯವಾದರೂ ಇಂದಿನ ತಲೆಮಾರಿಗೆ ಸಿಗುತ್ತಿದೆಯೇ? ಬದುಕು ಎಷ್ಟು ಕ್ಷಣಿಕವಾದದ್ದು, ಎಷ್ಟು ಸುಂದರವಾದದ್ದು ಎಂದು ಅರ್ಥಮಾಡಿಕೊಳ್ಳಬೇಕಾದರೆ ಕ್ಷಣಕಾಲ ನಿಂತು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿರುತ್ತದೆ. ಆದರೆ ಓಡುವ ಜಗತ್ತಿನಲ್ಲಿ ನಿಂತವನೇ “ಲೂಸರ್’ ಎಂಬ ಭಾವನೆ ಸಾರ್ವತ್ರಿಕವಾಗಿ ಮೂಡಿರುವಾಗ ಆತ್ಮಾವಲೋಕನಕ್ಕೆ ದಾರಿಯೆಲ್ಲಿದೆ? ಹೇಳಿ, ಇಂದಿನ ಯುವಕರ ಈ ಸಮಸ್ಯೆಗಳಿಗೆ ಹಿರಿಯರಾದ ನೀವು ಏನು ಪರಿಹಾರ ನೀಡುತ್ತೀರಿ? ಹೇಗೆ ಈ ಓಟದಿಂದ ಅವರನ್ನು ಹೊರತರಬಲ್ಲಿರಿ? ಹೇಗೆ ಯಶಸ್ಸಿನ ಕನಸ್ಸು ಕಾಣುತ್ತಿರುವವನಿಗೆ “ಯಶಸ್ಸೆಂದರೆ ಅದಲ್ಲ’ ಎಂದು ಮನ ಒಲಿಸಬಲ್ಲಿರಿ? “ಸಾಯುವ ಮುನ್ನ ವಿಶ್ವದ ಆ 10 ಸ್ಥಳಗಳನ್ನು ನೋಡದಿದ್ದರೆ ಬದುಕು ಫೇಲ್ಯೂರ್ ಅಲ್ಲ’ ಎಂದು ಅವರಿಗೆ ಹೇಳುವವರ್ಯಾರು? ಹೇಳಬಲ್ಲಿರಾ ನೀವು? ಅಥವಾ ನೀವೂ “ಮಾಡರ್ನ್ ಯಶಸ್ಸನ್ನು’ ಅರಸುತ್ತಾ ಏದುಸಿರುಬಿಡುತ್ತಾ ಓಡುತ್ತಿರುವ ಈ ಯುವ ಕುದುರೆಗಳ ಮೇಲೆ ಜೂಜು ಕಟ್ಟಿ ಬೆವರು ಒರೆಸಿಕೊಳ್ಳುತ್ತಿದ್ದೀರಾ? – ಲಿಯೋ ಬಬೌತ ಅಮೆರಿಕನ್ ಲೇಖಕ