Advertisement

Brahmavar ಕೃಷಿ ಕಾಲೇಜಿಗಾಗಿ ಜನಾಂದೋಲನ: ಮಂಜೂರಾತಿಗಾಗಿ ಹೋರಾಟದ ಹಾದಿ ಹಿಡಿಯಲು ತೀರ್ಮಾನ

12:55 AM Nov 28, 2023 | Team Udayavani |

ಉಡುಪಿ: ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಸರಕಾರದ ಆದೇಶದ ಅನ್ವಯ ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿ ನಡೆದಿಲ್ಲ. ದ್ವಿತೀಯ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳು ತೇರ್ಗಡೆ ಆಗುತ್ತಿದ್ದಂತೆ ಈ ಕಾಲೇಜು ಮುಚ್ಚಲಿದೆ. ಇಲ್ಲಿ ಕೃಷಿ ಕಾಲೇಜು ಅಥವಾ ವಿಶ್ವವಿದ್ಯಾ ನಿಲಯ ಸ್ಥಾಪನೆಗೆ ಸರಕಾರಗಳು ಮನಸ್ಸು ಮಾಡದೆ ಇರುವುದರಿಂದ ಕೃಷಿ ಕಾಲೇಜಿಗಾಗಿ ಜನಾಂದೋಲನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

Advertisement

ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿಯಿಂದ ಈಗಾಗಲೇ ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವರೂ ಆಗಿರುವ ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಕೃಷಿ ಸಚಿವರಿಗೆ ಮನವಿ ಮಾಡಲಾಗಿದೆ. ಹಿಂದಿನ ಬಿಜೆಪಿ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈಗಿನ ಕಾಂಗ್ರೆಸ್‌ ಸರಕಾರವೂ ಅದೇ ಹಾದಿಯಲ್ಲಿದೆ. ಹೀಗಾಗಿ ಹೋರಾಟ ತೀವ್ರಗೊಳಿಸಲು ಚರ್ಚೆ ಆರಂಭವಾಗಿದೆ.

ವ್ಯವಸ್ಥೆಯಿದೆ, ಒಪ್ಪಿಗೆ ಬೇಕು
ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅವಶ್ಯವಾದ 6 ತರಗತಿ ಕೊಠಡಿ, 12 ಪ್ರಯೋಗಾಲಯ, ಪರೀಕ್ಷೆಗಳಿಗೆ ವಿಶಾಲ ವಾದ ಕೊಠಡಿ, 150 ಆಸನಗಳ ಸೆಮಿನರ್‌ ಹಾಲ್‌, ವಸ್ತು ಪ್ರದರ್ಶನ ಕೊಠಡಿ, ಹಾಸ್ಟೆಲ್‌, ಬೋಧಕ, ಬೋಧಕೇತರ ಸಿಬಂದಿ ಹೀಗೆ ಎಲ್ಲವೂ ಕೃಷಿ ಕಾಲೇಜು ಸ್ಥಾಪನೆಗೆ ಇರಬೇಕು ಎಂಬ ನಿಯಮ ಇದೆ. ಇವುಗಳಲ್ಲಿ ಬಹುಪಾಲು ಸೌಲಭ್ಯಗಳು ಈಗಾಗಲೇ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿವೆ. ಆದರೆ ಸರಕಾರ ತಾತ್ವಿಕ ಒಪ್ಪಿಗೆ ನೀಡುತ್ತಿಲ್ಲ. ಹಣಕಾಸಿನ ಹೊರೆಯ ಜತೆಗೆ ಕೆಲವು ವಿ.ವಿ.ಗಳಲ್ಲಿ ಕೃಷಿ ಕಾಲೇಜುಗಳು ಸಮರ್ಪಕವಾಗಿ ನಡೆಯದೆ ಮುಚ್ಚುವ ಸ್ಥಿತಿಯಲ್ಲಿರುವುದರಿಂದ ಹೊಸ ಕಾಲೇಜು ತೆರೆಯಲು ಸರಕಾರ ಮುಂದಾಗುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಮಂಜೂರಾತಿ ಹೇಗೆ?
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರವು ಸದ್ಯ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಅಧೀನದಲ್ಲಿದೆ. ಕೃಷಿ ಕಾಲೇಜು ಸ್ಥಾಪನೆಗೆ ಬ್ರಹ್ಮಾವರ ಕೃಷಿ ಕೇಂದ್ರದಿಂದ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳ ಬಲವರ್ಧನೆ ಹಾಗೂ ಹೊಸ ಕೃಷಿ ಕಾಲೇಜುಗಳ ಸ್ಥಾಪನೆ, ಅವುಗಳ ಅಭಿವೃದ್ಧಿಗೆ ಸಂಬಂಧಿಸಿ ಪರಿಶೀಲಿಸಲು ಸರಕಾರವು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ  ರಚಿಸಿದೆ. ಪ್ರಸ್ತಾವನೆಯನ್ನು ಈ ಸಮಿತಿಯ ಮುಂದಿಟ್ಟು, ಸಭೆ ಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಂಡು ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಸರಕಾರದಿಂದ ಕಾಲೇಜು ಅಥವಾ ಅನುದಾನ ಘೋಷಣೆಯನ್ನು ಪ್ರಕಟಿಸಲಾಗುತ್ತದೆ.

ಕರಾವಳಿಗೆ
ಒಂದೇ ಸರಕಾರಿ
ಕೃಷಿ ಕಲಿಕಾ ಸಂಸ್ಥೆ
ಬ್ರಹ್ಮಾವರದ ಕೃಷಿ ಡಿಪ್ಲೊಮಾ ಕಾಲೇಜು ಬಿಟ್ಟರೆ ಕೃಷಿ ವಿಜ್ಞಾನ ದಲ್ಲಿ ಬಿಎಸ್‌ಸಿ ಪದವಿ ನೀಡುವ ಸರಕಾರಿ ಕಾಲೇಜು ಕರಾವಳಿಯಲ್ಲಿಲ್ಲ. ಹೀಗಾಗಿ ಎಲ್ಲ ವ್ಯವಸ್ಥೆ ಇರುವ ಬ್ರಹ್ಮಾವರದಲ್ಲಿ ಪದವಿ ಕಾಲೇಜು ಆರಂಭಿಸಲು ಅನುಮತಿ ನೀಡಬೇಕು ಎಂಬುದು ಬೇಡಿಕೆ. ಜನಾಂದೋಲನದ ಮೂಲಕ ಬೇಡಿಕೆಗೆ ಇನ್ನಷ್ಟು ಶಕ್ತಿ ತುಂಬಲು ಕರಾವಳಿ ಕೃಷಿ ಕಾಲೇಜು ಹೋರಾಟ ಸಮಿತಿ ಮುಂದಾಗಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.

Advertisement

ಅಧಿವೇಶನದಲ್ಲಿ ಪ್ರಸ್ತಾವ ಸಾಧ್ಯತೆ
ಬೆಳಗಾವಿ ಅಧಿವೇಶನದಲ್ಲಿ ಬ್ರಹ್ಮಾವರ ಕೃಷಿ ಕಾಲೇಜು ಸ್ಥಾಪನೆಯ ಬಗ್ಗೆ ಸ್ಥಳೀಯ ಶಾಸಕರು ವಿಷಯ ಪ್ರಸ್ತಾವಿಸಿ ಸರಕಾರದ ಗಮನ ಸೆಳೆಯುವ ಸಾಧ್ಯತೆಯಿದೆ. ಆದರೆ ಅಧಿವೇಶನದಲ್ಲಿ ವಿಷಯ ಪ್ರಸ್ತಾವಿಸಿದ ತತ್‌ಕ್ಷಣ ಕಾಲೇಜು ಮಂಜೂರಾಗುತ್ತದೆ ಎಂದೇನಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿ ಶಾಸಕರೇ ಎರಡು ಬಾರಿ ಇದನ್ನು ಸದನದಲ್ಲಿ ಪ್ರಸ್ತಾವಿಸಿದ್ದರೂ ಸರಕಾರ ಏನೂ ಮಾಡಿರಲಿಲ್ಲ.

ಡಿಪ್ಲೊಮಾ ಕಾಲೇಜಿನಲ್ಲಿ 2ನೇ ವರ್ಷದ ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ದಾಖಲಾತಿ ಯಾಗಿಲ್ಲ. ಹೀಗಾಗಿ ಮುಂದೆ ಡಿಪ್ಲೊಮಾ ಇರುವು ದಿಲ್ಲ. ಕೃಷಿ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರಕಾರದ ಹಂತದಲ್ಲಿ ತೀರ್ಮಾನ ವಾಗಬೇಕು.
-ಡಾ| ಸುಧೀರ್‌ ಕಾಮತ್‌ ಕೆ.ವಿ., ಪ್ರಾಂಶುಪಾಲರು, ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ.

Advertisement

Udayavani is now on Telegram. Click here to join our channel and stay updated with the latest news.

Next