Advertisement

ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಅಕ್ರಮ ಮರಳುಗಾರಿಕೆ

07:12 PM Mar 14, 2019 | Harsha Rao |

ಕೋಟ: ಗ್ರಾಮೀಣ ಭಾಗದ ಹಲವೆಡೆ ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. 

Advertisement

ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಹಲವೆಡೆ ಈ ದಂಧೆ ನಡೆಯುತ್ತಿದ್ದು, ಹಲವು ಬಾರಿ ದಾಳಿ ನಡೆಸಿದ್ದರೂ ಅಕ್ರಮ ಮರಳುಗಾರಿಕೆ ನಿಂತಿಲ್ಲ.

ಎರಡು ದಿನದ ಹಿಂದಷ್ಟೇ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ನೇತೃತ್ವದಲ್ಲಿ ದಾಳಿ ನಡೆಸಿ 10 ದೋಣಿ, 1 ಲಾರಿ, 2 ಕಾರುಗಳೊಂದಿಗೆ ಹಲವರನ್ನು ಬಂಧಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಿಲ್ಲದ ಅಕ್ರಮ ವ್ಯವಹಾರ
ಮೊಳಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿವಿಧೆಡೆ ಹಲವು ವರ್ಷದಿಂದ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, 2017ರಿಂದ ಇಲ್ಲಿಯ ತನಕ ಸುಮಾರು 10ಕ್ಕೂ ಹೆಚ್ಚು ಬಾರಿ ದಾಳಿ ನಡೆದಿದೆ. ಹಲವು ಸಂದರ್ಭಗಳಲ್ಲಿ  ಆರೋಪಿಗಳು ಪರಾರಿಯಾದ್ದರಿಂದ ಮರಳು ಮತ್ತು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವರ ವಿರುದ್ಧ  ಮೂರಕ್ಕೂ ಹೆಚ್ಚು ಪ್ರತ್ಯೇಕ ಪ್ರಕರಣಗಳು ಕೋಟ ಠಾಣೆಯ ವ್ಯಾಪ್ತಿಯಲ್ಲಿವೆ.

ಅಕ್ರಮ ಮರಳುಗಾರಿಕೆ ತಡೆಯಲು ಕೈಲ್ಕೇರಿ ಹಾಗೂ ಮರತ್ತೂರು ಭಾಗದಲ್ಲಿ ಪೊಲೀಸ್‌ ಹಾಗೂ ಗಣಿ ಇಲಾಖೆಯ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಚೆಕ್‌ಪೋಸ್ಟ್‌ಗಳಿಂದಲೂ ಏನೂ ಪ್ರಯೋಜನವಾಗಿಲ್ಲ.

Advertisement

ಠಾಣೆಯಿಂದ ದೂರ
ಕೋಟ ಪೊಲೀಸ್‌ ಠಾಣೆಯಿಂದ ಹಾರ್ದಳ್ಳಿ- ಮಂಡಳ್ಳಿ, ಆವರ್ಸೆ, ಮೊಳಹಳ್ಳಿ ಹೊಂಬಾಡಿ-ಮುಂದಾಡಿ ಮುಂತಾದ ಗ್ರಾಮಗಳು 30 ಕಿ.ಮೀ.ಗಿಂತ ಅಧಿಕ ದೂರದಲ್ಲಿದ್ದು, ಈ ಪ್ರದೇಶಕ್ಕೆ ಹೋಗುವುದು ಕಷ್ಟ. ಹೀಗಾಗಿ ದೂರು ಬಂದ ಮೇಲೂ ಪೊಲೀಸರಿಗೆ ಸ್ಥಳಗಳಿಗೆ ತಲುಪಲು ಕನಿಷ್ಠ ಮುಕ್ಕಾಲು ಗಂಟೆ ಬೇಕು. ಅಷ್ಟರಲ್ಲಿ ಅಕ್ರಮ ದಂಧೆ ಯಲ್ಲಿ ತೊಡಗಿದವರು ಪರಾರಿಯಾಗಿ ರುತ್ತಾರೆ. ಹಾಗಾಗಿ ಎಷ್ಟೇ ದಾಳಿ ನಡೆಸಿದರೂ ದಂಧೆ ನಿಲ್ಲುತ್ತಿಲ್ಲ ಎಂಬುದು ಸಾರ್ವಜನಿಕ ವಲಯದ ಅಭಿಪ್ರಾಯ.

ಮರಳು ಕೊರತೆಯನ್ನೇ ಬಂಡವಾಳ ವಾಗಿಸಿಕೊಂಡ ದಂಧೆಕೋರರು ಮೂರು ಯುನಿಟ್‌ ಮರಳಿಗೆ 15ರಿಂದ 20 ಸಾವಿರ ರೂ. ವರೆಗೆ  ವಸೂಲಿ ಮಾಡುತ್ತಿದ್ದು, ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

ಅಕ್ರಮ ಮರಳುಗಾರಿಕೆಯನ್ನು ಮಟ್ಟ ಹಾಕಲು ಗಣಿ ಇಲಾಖೆ, ಆರ್‌ಟಿಒ ಹಾಗೂ ಪೊಲೀಸರ ಸಮನ್ವಯದ ಕಾರ್ಯಾಚರಣೆ ಬೇಕಿದೆ. ಸ್ಥಳೀಯ ಪೊಲೀಸರು ಅಕ್ರಮ ತಡೆಯುವಲ್ಲಿ ವಿಫಲರಾದರೆ ಹಾಗೂ ಅಕ್ರಮದ ಕುರಿತು ಮತ್ತೆ ದೂರುಗಳು ಬಂದರೆ ಜಿಲ್ಲಾ ಮಟ್ಟದಿಂದ ಸೂಕ್ತ ತಂಡವನ್ನು ನಿಯೋಜಿಸಲಾಗುವುದು.
– ನಿಶಾ ಜೇಮ್ಸ್‌ , ಎಸ್ಪಿ

Advertisement

Udayavani is now on Telegram. Click here to join our channel and stay updated with the latest news.

Next