ಹುಬ್ಬಳ್ಳಿ: ಗದುಗಿನ ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಜನ್ಮದಿನದಂದು ಭಾವೈಕ್ಯತೆ ದಿನವನ್ನಾಗಿ ಆಚರಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ ನೀಡಿದ್ದು, ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ರವಿವಾರ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಅವರು, ಇಡೀ ನಾಡಿಗೆ ತಿಳಿದಂತೆ ಶಿರಹಟ್ಟಿ ಸಂಸ್ಥಾನಮಠ ಭಾವೈಕ್ಯತೆ ಮಠ ಎಂದು ಎಲ್ಲರಿಗೂ ತಿಳಿದ ವಿಷಯ. ಜತೆಗೆ ತಾವೇ ಸ್ವತಃ ಹಲವಾರು ಭಾಷಣದಲ್ಲಿ ಹೇಳಿರುವುದುಂಟು. ಇದೀಗ ಯಾವುದೋ ಒತ್ತಡಕ್ಕೊಳಗಾಗಿ ಸಿಎಂ ಹೇಳಿಕೆ ನೀಡಿದ್ದಾರೆ.
ಶಿರಹಟ್ಟಿ ಮಠ ಮುಖ್ಯಮಂತ್ರಿಗಳು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಶಾಖಾ ಮಠಗಳನ್ನು ಹೊಂದಿದೆ. ಜತೆಗೆ ಐದು ಮಸೀದಿಗಳನ್ನು ಹೊಂದಿದ್ದು, ಅಲ್ಲಿರುವ ಪಾಂಜಾಗಳಿಗೆ ಲಿಂಗ ಧಾರಣೆ, ವಿಭೂತಿ ಧಾರಣೆ ಮಾಡುವ ಮೂಲಕ ಶಿರಹಟ್ಟಿ ಸಂಸ್ಥಾನಮಠ ಭಾವೈಕ್ಯತೆ ಪ್ರತೀಕವಾಗಿದೆ.
ಅಂದು ಹುಬ್ಬಳ್ಳಿಯಲ್ಲಿ ಕೋಮು ಗಲಭೆ ಆರಂಭವಾದರೆ ಅಂದಿನ ಲಿಂಗೈಕ್ಯ ಡಾ| ಮೂಜಗಂ ಅವರು ಹೇಳಿಕೆ ನೀಡಿ ಎರಡು ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದರು. ಮುಖ್ಯಮಂತ್ರಿಗಳು ತಮ್ಮ ಹೇಳಿಕೆ ಹಿಂಪಡೆಯದಿದ್ದರೆ ವ್ಯವಸ್ಥಿತ ಹೋರಾಟ ನಡೆಸಬೇಕಾಗುತ್ತದೆ. ಶಿರಹಟ್ಟಿ ಸಂಸ್ಥಾನದ ಶ್ರೀ ಫಕ್ಕೀರ ಶ್ರೀಗಳ ಜನ್ಮದಿನ ಮೇ 15, 16ರಂದು ಇದ್ದು ಅಂದು ಅದನ್ನು ಭಾವೈಕ್ಯತೆ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ರಾಜಕೀಯ ದೊಂಬರಾಟ: ಅವೈಜ್ಞಾನಿಕ ಕಾರ್ಯ ಮಾಡುತ್ತಿರುವುದರಿಂದ ಇಂತಹ ಕೋಮು ಗಲಭೆಗಳು ನಡೆಯುತ್ತಿವೆ. ನಾಡಿನಲ್ಲಿರುವ ಮಹಾತ್ಮರು ಭಾವ-ಮನಸ್ಸುಗಳನ್ನು ಕೂಡಿಸುವ ಕೆಲಸ ಮಾಡಿದರೆ, ರಾಜಕಾರಣಿಗಳು ಅದನ್ನು ಅಗಲಿಸುವ ಕೆಲಸ ಮಾಡುವುದರೊಂದಿಗೆ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ ಎಂದರು.