ಹುಬ್ಬಳ್ಳಿ: ನಮ್ಮ ಸ್ಪರ್ಧೆಯು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ದೃಷ್ಟಿಯಲ್ಲಿ ದುಸ್ಸಾಹಸ ಆಗಿರಬಹುದು, ಆದರೆ ಧಾರವಾಡ ಮತದಾರರ ದೃಷ್ಟಿಯಲ್ಲಿ ಇದು ಸಾಹಸವಾಗಿದೆ. ಅವರು ನನ್ನೊಂದಿಗೆ ಮಾತನಾಡಿದ್ದಾರೆ, ಆದರೆ ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬುದಾಗಿ ಅವರಿಗೆ ತಿಳಿಸಿರುವೆ ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ತಿಳಿಸಿದರು.
ಬುಧವಾರ ಇಲ್ಲಿನ ಬನಶಂಕರಿ ಬಡಾವಣೆಯಲ್ಲಿ ಮುಸ್ಲಿಂ ಧರ್ಮ ಗುರುಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡುತ್ತಿರುವುದು ಧಾರವಾಡದ ಮತದಾರರ ಒತ್ತಾಯದ ಮೇರೆಗೆ ವಿನಹ ಇದು ನನ್ನ ವಯಕ್ತಿಕ ಸ್ಪರ್ಧೆ ಅಲ್ಲ. ಹೀಗಾಗಿ ಇದು ದುಃಸ್ಸಾಹಸ ಅಲ್ಲ ಎಂದು ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.
ಸೋಲಿನ ಆತಂಕ : ಇಲ್ಲಿನ ಕೇಂದ್ರ ಸಚಿವರ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದ ಅವರ ಪಕ್ಷದ ಮುಖಂಡರಲ್ಲಿ ಶೇ. 90ರಷ್ಟು ನಾಯಕರು ಇವರಿಂದಲೇ ತುಳಿತಕ್ಕೊಳಗಾದವರು. ಪ್ರತಿಯೊಂದು ನಾಮಪತ್ರವನ್ನು ಬೇರೆ ಬೇರೆ ನಾಯಕರೊಂದಿಗೆ ಸಲ್ಲಿಸಿರುವುದನ್ನು ನೋಡಿದರೆ ಇವರಿಗೆ ಸೋಲಿನ ಭೀತಿ ಎದುರಾಗಿರುವುದು ಕಾಣುತ್ತದೆ. ಈ ನಾಯಕರ ಬೆನ್ನು ಹತ್ತಿದರೆ ಉಳಿಯಬಹುದು ಎನ್ನುವ ಲೆಕ್ಕಾಚಾರ ಇವರದಾಗಿದೆ. ಬಂದಿರುವ ನಾಯಕರ ಮೇಲೆ ಒತ್ತಡ ಹೇರಿ ಕರೆಸಿಕೊಂಡಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಈ ನಾಯಕರು ಬಂದಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಿ ಮತ ಹಾಕಿ ಎಂದು ಹೇಳುತ್ತಿರುವುದನ್ನು ನೋಡಿದರೆ ಅವರಿಗೆ ವೈಯಕ್ತಿಕ ತಾಕತ್ತು ಇಲ್ಲ ಎಂದರು.
ನಾಳೆ ನಾಮಪತ್ರ:
ಈ ಹಿಂದೆ ತಿಳಿಸಿದಂತೆ ಏಪ್ರಿಲ್ 18ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ನಮ್ಮದು ಧರ್ಮ ಯುದ್ಧ ಧರ್ಮದ ಹಾದಿಯಲ್ಲೇ ಸಾಗುತ್ತೇವೆ. ನಾಮಪತ್ರ ಸಲ್ಲಿಕೆ ವೇಳೆ ಒತ್ತಾಯ, ಒತ್ತಡ, ಆಮೀಷವೊಡ್ಡಿ ಯಾರನ್ನು ಕರೆದುಕೊಂಡು ಬರುವುದಿಲ್ಲ. ಯಾರೂ ಕೂಡ ತಮ್ಮ ಕೆಲಸವನ್ನು ಬಿಟ್ಟು ಖರ್ಚು ಮಾಡಿಕೊಂಡು ಬರಬಾರದು. ಶಕ್ತಿವಂತರು ಮಾತ್ರ ಬನ್ನಿ ಎಂದು ಕರೆ ಕೊಡುತ್ತೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ:Lok Sabha Election: ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಾರಾ ರಾಹುಲ್? ಹೇಳಿದ್ದೇನು