ಬೆಂಗಳೂರು: ಮಡಿಕೇರಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ, ಮೊಟ್ಟೆ ಎಸೆದಿರುವುದು ಹೇಡಿಗಳ ಲಕ್ಷಣ ಎಂದು ಶಾಸಕ ಹಾಗೂ ಎಐಸಿಸಿಯ ತಮಿಳುನಾಡು ಮತ್ತು ಗೋವಾ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಈ ಕೃತ್ಯ ಬಿಜೆಪಿಯವರ ಹತಾಶೆ ತೋರಿಸುತ್ತಿದೆ. ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಇಂತಹ ಹೀನ ನಡೆ ಪ್ರದರ್ಶಿಸುತ್ತಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಗಲಭೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತರು ಗೂಂಡಾವರ್ತನೆ ತೋರಿದ್ದಾರೆ. ವಿಪಕ್ಷದ ನಾಯಕರಿಗೆ ಈ ರಾಜ್ಯದಲ್ಲಿ ಭದ್ರತೆ ಇಲ್ಲ. ಹೀಗಿರುವಾಗ ಜನಸಾಮಾನ್ಯರ ರಕ್ಷಣೆ ಎಲ್ಲಿ? ಇದು ಗಂಭೀರ ಸ್ವರೂಪದ ಲೋಪ ಎಂದು ಕಿಡಿಕಾರಿದ್ದಾರೆ.
ಇಂತಹ ಕಿಡಿಗೇಡಿ ಕೃತ್ಯ ನಡೆಸುವ ಮೂಲಕ ವಿಪಕ್ಷದ ಬಾಯಿ ಮುಚ್ಚಿಸಬಹುದು ಎಂದು ಸರ್ಕಾರ ಭಾವಿಸಿರಬಹುದು. ಆದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ. ಸಿದ್ದರಾಮೋತ್ಸವ ಭರ್ಜರಿ ಯಶಸ್ಸಿನ ನಂತರ ಬಿಜೆಪಿಯವರಿಗೆ ನಡುಕ ಶುರುವಾಗಿದೆ ಎಂದು ಆರೋಪಿಸಿದ್ದಾರೆ
ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಮತ್ತು ಕಪ್ಪು ಬಾವುಟ ಪ್ರದರ್ಶಿಸಿರುವುದು ಖಂಡನೀಯ. ಬಿಜೆಪಿಯ ಮನುವಾದಿಗಳಿಗೆ ಶೂದ್ರರು- ಹಿಂದುಳಿದವರೆಂದರೆ ಕೆಂಡದಂತಹ ಕೋಪ ಎಂಬುದಕ್ಕೆ ಇದೇ ಸಾಕ್ಷಿ. ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಲಾದೆ ಹೀನ ಕೃತ್ಯಗಳ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಜೆಪಿಗರು ತೋರಿದ್ದಾರೆ.
-ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ