“ಸುಪ್ರಭಾತ’, “ಅಮೃತವರ್ಷಿಣಿ’ ಯಂತಹ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಹಿರಿಯ ನಿರ್ದೇಶಕ ದಿನೇಶ್ ಬಾಬು “ಹಗಲು ಕನಸು’ ನನಸು ಮಾಡಿಕೊಳ್ಳಲು ಹೊರಟಿದ್ದಾರೆ. “ನನಗಿಷ್ಟ’ ಚಿತ್ರದ ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ದಿನೇಶ್ ಬಾಬು, “ಹಗಲು ಕನಸು’ ಎಂಬ ಮತ್ತೂಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ದಿನೇಶ್ ಬಾಬು, ಆರಂಭದಲ್ಲಿಯೇ ಪತ್ರಕರ್ತರ ಮುಂದೆ ಬಂದಿದ್ದು, ತಮ್ಮ ಚಿತ್ರದ ಕಲಾವಿದರು, ತಂತ್ರಜ್ಞರು, ಕಥಾಹಂದರ ಸೇರಿದಂತೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಬಾಬು ಅವರ ಹಿಂದಿನ ಹಲವು ಚಿತ್ರಗಳಂತೆ, ಈ ಚಿತ್ರದಲ್ಲೂ ನಾಯಕ ಅಂತ ಯಾರೂ ಇಲ್ಲವಂತೆ.
“ಕಥೆಯೇ ಚಿತ್ರದ ನಾಯಕ’ ಎನ್ನುವ ಬಾಬು, “ಒಂದಷ್ಟು ಪಾತ್ರಗಳು ಚಿತ್ರದ ಕಥೆಯನ್ನು ತೆಗೆದುಕೊಂಡು ಹೋಗುತ್ತವೆ. ಆ ಪಾತ್ರಗಳ ನಡುವೆ ಕಥೆ ನಡೆಯುತ್ತದೆ. ಮಾಸ್ಟರ್ ಆನಂದ್, ನೀನಾಸಂ ಅಶ್ವಥ್, ಅಶ್ವಿನಿ ಹಾಸನ್, ಸನಿಹಾ ಯಾದವ್, ಮನದೀಪ್ ರಾಯ್, ವಾಣಿಶ್ರೀ ಮೊದಲಾದ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಕನಸು, ವಾಸ್ತವ, ಅರಿವು, ಭ್ರಮೆ ಹೀಗೆ ಒಂದಷ್ಟು ಸಂಗತಿಗಳ ಸುತ್ತ ನಡೆಯುತ್ತದೆ.
ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಕಾಮಿಡಿ ಎಳೆಯಲ್ಲಿ ಚಿತ್ರದ ಕಥೆ ನಡೆಯುತ್ತದೆ’ ಎನ್ನುತ್ತಾರೆ. “ಈಗಾಗಲೇ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕೆಲಸ ಶುರುವಾಗಿದೆ. ಇದೇ ತಿಂಗಳಾಂತ್ಯಕ್ಕೆ ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇಲ್ಲಿಯವರೆಗೆ ಮಾಡಿದ ಸಿನಿಮಾಗಳಿಗಿಂತ ವಿಭಿನ್ನ ಕಥೆಯೊಂದನ್ನು ಪ್ರೇಕ್ಷಕರ ಮುಂದೆ ಚಿತ್ರವಾಗಿ ತರಬೇಕು ಎಂಬ ಉದ್ದೇಶದಿಂದ ಸಾಕಷ್ಟು ಸಮಯ ತೆಗೆದುಕೊಂಡು ಈ ಕಥೆಯನ್ನು ಮಾಡಿಕೊಂಡಿದ್ದೇನೆ.
ನಾನು ಕಾಣುತ್ತಿದ್ದ ಕನಸುಗಳೇ ಈ ಕಥೆಗೆ ಸ್ಪೂರ್ತಿ’ ಎನ್ನುತ್ತಾರೆ ದಿನೇಶ್ ಬಾಬು. ಚಿತ್ರರಂಗದಲ್ಲಿ ಕೆಲ ವರ್ಷಗಳಿಂದ ವಿತರಕರಾಗಿ ಗುರುತಿಸಿಕೊಂಡಿರುವ ಪದ್ಮನಾಭ, ಅಚ್ಯುತರಾಜ್, ರೆಹಮಾನ್ ಎಂಬುವವರು ದಿನೇಶ್ ಬಾಬು ಅವರ “ಹಗಲು ಕನಸು’ ನನಸಾಗಲು ನಿರ್ಮಾಪಕರಾಗಿ ಬಂಡವಾಳ ಹೂಡುತ್ತಿದ್ದಾರೆ.
ಚಿತ್ರದಲ್ಲಿ ಎರಡು ಕಾಡುಗಳಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅರಸಿಕೆರೆಯ ಹತ್ತಿರದ ದೊಡ್ಡ ಮನೆಯೊಂದರಲ್ಲಿ ಚಿತ್ರದ ಬಹುಭಾಗ ಚಿತ್ರೀಕರಣ ನಡೆಯಲಿದೆ. ತೆರೆಮರೆಯಲ್ಲಿ “ಹಗಲು ಕನಸು’ ಚಿತ್ರವನ್ನು ತೆರೆಗೆ ತರಲು ಭರದ ಕಾರ್ಯಗಳಲ್ಲಿರುವ ದಿನೇಶ್ ಬಾಬು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸುವ ಇರಾದೆಯಲ್ಲಿ ಇದ್ದಾರೆ.