ಅವನು ತಂದೆ-ತಾಯಿಯ ಮುದ್ದಿನ ಏಕಮಾತ್ರ ಪುತ್ರ ಕುಶಾಲ್. ಚಿಕ್ಕ ವಯಸ್ಸಿನಲ್ಲೇ ಹುಡುಗಿಯೊಬ್ಬಳ ಮೇಲೆ ಅವನಿಗೆ ಆವನಿಗಾಗುವ ಕ್ರಶ್ ಕೆಲಕಾಲ ಅವಳ ಹಿಂದೆ ಅವನನ್ನು ಬೀಳುವಂತೆ ಮಾಡುತ್ತದೆ. ಇನ್ನೇನು ಕುಶಾಲ್ ಉರೂಫ್ ಖುಶ್ ಅವಳಿಗೆ ಪ್ರೇಮ ನಿವೇದನೆ ಮಾಡಬೇಕು ಎನ್ನುವಷ್ಟರಲ್ಲಿ ಅವಳು ಊರು ಬಿಟ್ಟು ಬೇರೆ ಊರಿನತ್ತ ಮುಖ ಮಾಡುತ್ತಾಳೆ. ದಿನ ಕಳೆದಂತೆ, ಅದೇ ಹುಡುಗಿಯ ನೆನಪಿನಲ್ಲೇ ಇರುವ ಕುಶಾಲ್ ಬದುಕಿನಲ್ಲಿ ಮತ್ತೂಬ್ಬಳು ಹುಡುಗಿಯ ಆಗಮನವಾಗುತ್ತದೆ. ಅಲ್ಲಿಂದ ಕುಶಾಶ್ ಬದುಕು ಹೊಸ ಬಣ್ಣ ಪಡೆದುಕೊಳ್ಳುತ್ತದೆ. ಕುಶಾಲ್ ಬದುಕು ಇನ್ನೇನು “ದಿಲ್ ಖುಷ್’ ಆಗುತ್ತಿದೆ ಎನ್ನುವಾಗಲೇ ಕುಶಾಲ್ ಪ್ರೇಮ ನಿವೇದನೆ ಮಾಡಬೇಕೆಂದುಕೊಂಡಿದ್ದ ಹುಡುಗಿಯ ಆಗಮನವಾಗುತ್ತದೆ. ಅಲ್ಲಿಂದ ಇಬ್ಬರು ಹುಡುಗಿಯ ನಡುವೆ ಸಿಕ್ಕಿ ಹಾಕಿಕೊಂಡು ಪೇಚಿಗೆ ಸಿಲುಕುವ ಕುಶಾಲ್ ಕೊನೆಗೆ ಇಬ್ಬರಲ್ಲಿ ಯಾರನ್ನು ವ(ಆ)ರಿಸಿಕೊಳ್ಳುತ್ತಾನೆ ಎಂಬುದು ಸಿನಿಮಾದ ಕ್ಲೈಮ್ಯಾಕ್ಸ್ ವೇಳೆಗೆ ಗೊತ್ತಾಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ದಿಲ್‌ಖುಷ್’ ಸಿನಿಮಾದ ಕಥೆಯ ಒಂದು ಎಳೆ.
ಈ ಎಳೆಯನ್ನು ಇಟ್ಟುಕೊಂಡು ಅದಕ್ಕೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಸೇರಿಸಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ಪ್ರಮೋದ್ ಜಯ. ಈಗಾಗಲೇ ಕನ್ನಡದಲ್ಲಿ ಬಂದಿರುವ ಒಂದಷ್ಟು ಸಿನಿಮಾಗಳ ಛಾಯೆ “ದಿಲ್‌ಖುಷ್’ ಸಿನಿಮಾದ ಆರಂಭದಿಂದ ಅಂತ್ಯದ ವರೆಗೂ ಆವರಿಸಿಕೊಂಡಿದೆ. ಹೀಗಾಗಿ ಸಿನಿಮಾದ ಕಥೆ, ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಹೊಸದೇನು ನಿರೀಕ್ಷಿಸು ವಂತಿಲ್ಲ. ಈ ಛಾಯೆಯಿಂದ “ದಿಲ್‌ಖುಷ್’ ಹೊರಗಿದ್ದಿದ್ದರೆ, ಒಂದು ಹೊಸಬರ ನವಿರಾದ ಪ್ರೇಮಕಥೆಯಾಗಿ ಪ್ರೇಕ್ಷಕರ “ದಿಲ್’ ಖುಷಿಯಾಗುವ ಎಲ್ಲ ಸಾಧ್ಯತೆಗಳಿರುತ್ತಿದ್ದವು.
ಇನ್ನು “ದಿಲ್‌ಖುಷ್’ ಸಿನಿಮಾದಲ್ಲಿ ಹೊಸ ಪ್ರತಿಭೆಗಳಾದ ರಂಜಿತ್, ಸ್ಪಂದನಾ ಸೋಮಣ್ಣ ಜೋಡಿ ತೆರೆಮೇಲೆ ಒಂದಷ್ಟು ಲವಲವಿಕೆಯ ಅಭಿನಯ ನೀಡಿದ್ದಾರೆ. ಉಳಿದಂತೆ ರಂಗಾಯಣ ರಘು, ರವಿ ಭಟ್, ಅರುಣಾ ಬಾಲರಾಜ್, ಧರ್ಮಣ್ಣ ಕಡೂರ್, ರಘು ರಾಮನಕೊಪ್ಪ, ಶ್ರೀನಿವಾಸ ಗೌಡ, ವಿಜಯಲಕ್ಷ್ಮೀ ಮತ್ತಿತರರು ಎಂದಿನಂತೆ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾದ ಒಂದು ಹಾಡು, ಹಿನ್ನೆಲೆ ಸಂಗೀತ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಛಾಯಾಗ್ರಹಣ “ದಿಲ್‌ಖುಷ್’ ಸಿನಿಮಾವನ್ನು ತೆರೆಮೇಲೆ ಕಲರ್‌ಫುಲ್ ಆಗಿ ಕಾಣುವಂತೆ ಮಾಡಿದೆ. ಸಂಕಲನ ಇನ್ನಷ್ಟು ಹರಿತವಾಗಿದ್ದರೆ “ದಿಲ್‌ಖುಷ್’ ಹೊಳಪು ಇನ್ನಷ್ಟು ಹೆಚ್ಚಾಗಿರುತ್ತಿತ್ತು. ಹೊಸಬರ ಸಿನಿಮಾಗಳನ್ನು ಬೆಂಬಲಿಸಲು ಬಯಸು ವವರು, ಕೆಲ ತಾಂತ್ರಿಕ ಲೋಪಗಳನ್ನು ಬದಿಗಿಟ್ಟು “ದಿಲ್ ಖುಷ್’ ಚಿತ್ರವನ್ನು ನೋಡಬಹುದು.
ಜಿ.ಎಸ್.ಕಾರ್ತಿಕ ಸುಧನ್