ಮುಂಬಯಿ : ಹಿಂದಿ ಚಿತ್ರರಂಗದ ದಂತಕಥೆ ಎನಿಸಿರುವ 95ರ ಹರೆಯದ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು ಇಂದು ಬುಧವಾರ ಎದೆ ಸೋಂಕಿನ ಕಾರಣ ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ತಾರಾ ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ.
ದಿಲೀಪ್ ಕುಮಾರ್ ಅವರ ಆರೋಗ್ಯದ ಬಗ್ಗೆ ಭಯ ಪಡಬೇಕಾಗಿಲ್ಲ ಎಂದು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳಿದ್ದಾರೆ; ಆದರೆ ಎದೆ ಸೋಂಕಿಗೆ ಗುರಿಯಾಗಿರುವ ಅವರು ಎಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾದೀತು ಎಂಬುದನ್ನು ತಿಳಿಸಲು ನಿರಾಕರಿಸಿದ್ದಾರೆ.
“ನಾವು ಕ್ರಮ ಪ್ರಕಾರ ವೈದ್ಯಕೀಯ ತಪಾಸಣೆಗಾಗಿ ಲೀಲಾವತಿಗೆ ಬಂದಿದ್ದೇವೆ; ದಿಲೀಪ್ ಅವರು ಕೆಲ ದಿನಗಳ ಕಾಲ ಇಲ್ಲಿರುತ್ತಾರೆ. ವೈದ್ಯರು ಮಾಡಬೇಕಾದ ಎಲ್ಲ ಬಗೆಯ ಪರೀಕ್ಷೆಗಳನ್ನು ಮಾಡುತ್ತಾರೆ. ವೈದ್ಯರ ತಂಡವೇ ಇಲ್ಲಿದೆ; ಶ್ವಾಸಕೋಶ ತಜ್ಞರು, ನ್ಯೂರಾಲಜಿಸ್ಟ್‌ಗಳು ಇದ್ದಾರೆ’ ಎಂದು ಪತ್ನಿ ಸಾಯಿರಾ ಬಾನು ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
“ಡಾ. ನಿತಿನ್ ಗೋಖಲೆ ಅವರ ನೇತೃತ್ವದಲ್ಲಿ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ. ಆದಷ್ಟು ಬೇಗನೆ ದಿಲೀಪ್ ಗುಣಮುಖರಾಗಿ ಮನೆಗೆ ಮರಳುವುದಕ್ಕೆ ನಿಮ್ಮೆಲ್ಲರ ಶುಭ ಹಾರೈಕೆಗಳ ನಮಗೆ ಬೇಕಿವೆ’ ಎಂದು ಸಾಯಿರಾ ಹೇಳಿದರು.
ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲಾಗಿರುವ ವಿಷಯವನ್ನು ಮೊದಲಾಗಿ ಟ್ವಿಟರ್ ಮೂಲಕ ತಿಳಿಸಿದವರು ದಿಲೀಪ್ ಅವರ ಸೋದರ ಸಂಬಂಧಿ ಫೈಸಲ್ ಫಾರೂಕೀ ಅವರು.
ದಿಲೀಪ್ ಕುಮಾರ್ ಅವರನ್ನು ಇಂದು ಬುಧವಾರ ಮಧ್ಯಾಹ್ನ ಆಸ್ಪತ್ರೆಗೆ ಸೇರಿಸಲಾಯಿತೆಂದು ಲೀಲಾವತಿ ಆಸ್ಪತ್ರೆಯ ಉಪಾಧ್ಯಕ್ಷ ಅಜಯ್ ಕುಮಾರ್ ಪಾಂಡೆ ಹೇಳಿದರು.