ಕೋಲ್ಕತ್ತಾ: ಗಡಿಯಾಚೆಗಿನ ಪಾವತಿಗೆ ಡಿಜಿಟಲ್ ರೂಪಾಯಿ ಬಳಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಮುಖ ಜಾಗತಿಕ ಸೆಂಟ್ರಲ್ ಬ್ಯಾಂಕ್‌ಗಳೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮಾತುಕತೆ ನಡೆಸಲಾರಂಭಿಸಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರೇ ಈ ಮಾಹಿತಿ ನೀಡಿದ್ದಾರೆ.
ಸ್ಥಳೀಯ ರೂಪಾಯಿಯು ಜಾಗತಿಕವಾಗಿ ಸ್ವೀಕಾರಾರ್ಹವಾಗಬೇಕು ಎಂಬ ಉದ್ದೇಶದಿಂದ ಕಳೆದ ವರ್ಷವಷ್ಟೇ ಆರ್‌ಬಿಐ ವ್ಯಾಪಾರ-ವಹಿವಾಟುಗಳ ಪಾವತಿಯನ್ನು ರೂಪಾಯಿಯಲ್ಲೇ ಮಾಡಲು ಅನುಮತಿ ನೀಡಿತ್ತು.
ಲಂಡನ್‌ನ ಸೆಂಟ್ರಲ್ ಬ್ಯಾಂಕಿಂಗ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ “ವರ್ಷದ ಗವರ್ನರ್’ ಗೌರವ ಸ್ವೀಕರಿಸಿದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ ಶಕ್ತಿಕಾಂತ್ ದಾಸ್, “ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯು(ಸಿಬಿಡಿಸಿ) ಭವಿಷ್ಯದ ಹಣವಾಗಲಿದೆ. ನಾವು ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದೇವೆ. ಪ್ರಸಕ್ತ ಮಾಸಾಂತ್ಯದ ವೇಳೆಗೆ, ನಾವು ರಿಟೇಲ್ ಸಿಬಿಡಿಸಿ ಬಳಕೆ ಮಾಡುತ್ತಿರುವ ಹತ್ತು ಲಕ್ಷ ಮಂದಿಯನ್ನು ತಲುಪಲಿದ್ದೇವೆ. ಅದು ದೇಶೀಯ ಪಾವತಿಗಾಗಿ ಮಾತ್ರ. ಆದರೆ, ಗಡಿಯಾಚೆಗಿನ ಪಾವತಿಯೂ ಅತ್ಯಂತ ಕ್ಷಿಪ್ರವಾಗಿ, ಸರಾಗವಾಗಿ, ಅಗ್ಗವಾಗಿ ಆಗಬೇಕೆಂಬ ಉದ್ದೇಶವೂ ಇದ್ದು, ಅದಕ್ಕಾಗಿ ನಾವು ಕೇಂದ್ರೀಯ ಬ್ಯಾಂಕುಗಳೊಂದಿಗೆ ಚರ್ಚೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಭಾರತದಲ್ಲಿ ನಮಗೆ ಡಾಲರ್‌ಗೆ ಕೊರತೆ ಇಲ್ಲ. ಕೆಲವೊಂದು ದೇಶಗಳ ಮಾರುಕಟ್ಟೆಗಳಲ್ಲಿ ಡಾಲರ್ ಅಭಾವವಿರುವ ಕಾರಣ, ಅವರಿಗೆ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಾವು ನೀಡುತ್ತಿರುವ ಅವಕಾಶದಿಂದ, ಯಾವುದೇ ದೇಶಗಳು ಭಾರತದಿಂದ ಆಮದು ಮಾಡಿಕೊಂಡು, ರೂಪಾಯಿಯಲ್ಲೇ ಪಾವತಿ ಮಾಡಬಹುದು ಎಂದೂ ದಾಸ್ ಹೇಳಿದ್ದಾರೆ.