ನಗರ ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿದೆ. ಸ್ಮಾರ್ಟ್ ಸಿಟಿ ಪಟ್ಟ ಹೊತ್ತಿರುವ ನಗರದ ಸೌಂದರ್ಯ ವರ್ಧನೆಗೆ ಡಿಜಿಟಲೀಕರಣಗೊಂಡ ಬೋರ್ಡ್‌ಗಳ ಬಳಕೆ ಹೆಚ್ಚಾದರೆ ಉತ್ತಮ. ಮುಖ್ಯವಾಗಿ ಜಾಹೀರಾತು ಫಲಕ, ಮಾರ್ಗಸೂಚಿ ಫಲಕ, ಟ್ರಾಫಿಕ್ ಬೋರ್ಡ್ ಗಳು ಡಿಜಿಟಲೀಕರಣಗೊಂಡರೆ ಪ್ರವಾಸಿ ಸ್ನೇಹಿಯಾಗಿ, ವಾಹನ ಚಾಲಕ ಸ್ನೇಹಿ ಹಾಗೂ ಸಾರ್ವಜನಿಕ ಸ್ನೇಹಿಯಾಗಿಯೂ ನಗರ ಮಾರ್ಪಾಡಾಗುವಲ್ಲಿ ಸಹಕಾರಿಯಾಗುತ್ತದೆ.
ನಗರದಲ್ಲಿ ಪ್ರಮುಖವಾಗಿ ಸಮಸ್ಯೆ ಸೃಷ್ಟಿಸುತ್ತಿರುವುದೆಂದರೆ ಪ್ಲಾಸ್ಟಿಕ್ ಫ್ಲೆಕ್ಸ್‌ಗಳ ಬಳಕೆ. ಆದರೆ ಇದನ್ನು ಸಂಪೂರ್ಣ ನಿಲುಗಡೆಗೊಳಿಸಿ, ಡಿಜಿಟಲ್ ಫಲಕಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸರಕಾರದ ಮಟ್ಟದಿಂದ ಪ್ರೋತ್ಸಾಹ ಸಿಕ್ಕಿದರೆ ಇಡೀ ನಗರವನ್ನು ಡಿಜಿಟಲ್ ಬೋರ್ಡ್ ಅಳವಡಿಕೆಯತ್ತ ಕೊಂಡೊಯ್ಯಬಹುದು. ಸರಕಾರದ ಜಾಹೀರಾತುಗಳನ್ನು ಅಳವಡಿಸುವಾಗಲೂ ಪ್ಲಾಸ್ಟಿಕ್ ಫ್ಲೆಕ್ಸ್‌ಗಳನ್ನು ಬಳಕೆ ಮಾಡುತ್ತಿ ರುವುದು ಹೆಚ್ಚುತ್ತಿದೆ. ಈ ಫ್ಲೆಕ್ಸ್‌ಗಳು ಹಳೆಯದಾದಂತೆ ಹರಿದು ಬಿದ್ದು, ಅಥವಾ ನಿರುಪಯೋಗಗೊಂಡ ಬಳಿಕ ಅಲ್ಲಲ್ಲಿ ಬಿಸಾಡುವುದೇ ಹೆಚ್ಚು. ಇದು ಮಣ್ಣಿನಲ್ಲಿ ಬಿದ್ದು, ಕರಗದೆ ಪರಿಸರ ನಾಶಕ್ಕೂ ಕಾರಣವಾಗುತ್ತದೆ. ಒಂದು ವೇಳೆ ಸುಟ್ಟು ಹಾಕಿದರೆ, ಅದೂ ವಾಯು ಮಾಲಿನ್ಯಕ್ಕೆ ಕಾರಣವಾಗಿ ಮನುಷ್ಯ ಸಹಿತ ಸಮಸ್ತ ಜೀವಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿ ಫ್ಲೆಕ್ಸ್ ಬಳಕೆಯನ್ನೂ ಡಿಜಿಟ ಲೀಕರಣ ಮಾಡಿದರೆ, ನಗರದ ಸೌಂದರ್ಯ ವರ್ಧನೆಗೆ ಕಾರಣವಾಗುತ್ತದೆ ಜತೆಗೆ ಪ್ಲಾಸ್ಟಿಕ್ ಬಳಕೆಯೂ ತಪ್ಪುತ್ತದೆ.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ, ಪಿವಿಎಸ್ ಸರ್ಕಲ್ ಬಳಿ, ಲಾಲ್ ಬಾಗ್ ಸೇರಿದಂತೆ ಕೆಲವೆಡೆ ಈಗಾಗಲೇ ಡಿಜಿಟಲ್ ಫ್ಲೆಕ್ಸ್ ಗಳನ್ನು ಹಾಕಲಾಗಿದೆ. ಇದು ನೋಡುವುದಕ್ಕೂ ಆಕರ್ಷಕವಾಗಿ ಕಾಣುವುದರಿಂದ ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಕಾರ್ಯಾಚರಿಸಿದರೆ ಉತ್ತಮ. ಸಂಪೂರ್ಣ ಡಿಜಿಟಲೀಕರಣಗೊಳ್ಳುವುದರಿಂದ ಪಾಲಿಕೆಯ ಆದಾಯಕ್ಕೂ ಹೆಚ್ಚಿನ ರೀತಿಯ ಸಂಗ್ರಹಣೆಯಾಗಬಹುದು.
ಅಂತೆಯೇ ನಂತೂರು ವೃತ್ತ ಮುಂತಾದೆಡೆಗಳಲ್ಲಿ ಟ್ರಾಫಿಕ್ ಡಿಜಿಟಲ್ ಬೋರ್ಡ್ ಕಾರ್ಯನಿರ್ವಹಿಸುತ್ತಿದೆ. ಮುಖ್ಯವಾಗಿ ಪರವೂರುಗಳಿಂದ ಪ್ರವಾಸಿಗರು ನಗರಕ್ಕೆ ಆಗಮಿಸಿದ ಸಂದರ್ಭಗಳಲ್ಲಿ ಇದು ಹೆಚ್ಚು ಉಪಯುಕ್ತವಾಗುತ್ತದೆ. ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ಹಂತ ಹಂತವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಟ್ರಾಫಿಕ್ ಡಿಜಿಟಲ್ ಬೋರ್ಡ್, ಫ್ಲೆಕ್ಸ್‌ಗಳನ್ನು ಸಂಪೂರ್ಣ ಡಿಜಿಟಲೀಕರಣದ ವ್ಯಾಪ್ತಿಗೆ ತರುವುದು ಈ ಹೊತ್ತಿನ ಅವಶ್ಯಕತೆ.
ಧನ್ಯಾ ಬಾಳೆಕಜೆ