ಚಿಕ್ಕಮಗಳೂರು: ಓದುಗರ ಅನುಕೂಲಕ್ಕಾಗಿ ಡಿಜಿಟಲ್ ಇ- ಪೋರ್ಟಲ್ ತೆರೆಯಲಾಗಿದ್ದು ಓದುಗರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಾರ್ವಜನಿಕ ಕೇಂದ್ರ ಗ್ರಂಥಾಲಯ ನಿರ್ದೇಶಕ ಡಾ| ಸತೀಶ್ ಹೊಸಮನಿ ತಿಳಿಸಿದರು. ಗುರುವಾರ ನಗರದ ಸಾರ್ವಜನಿಕ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ಅವರು, ಗ್ರಂಥಾಲಯ ಜೊತೆಗೆ ಹೆಚ್ಚುವರಿಯಾಗಿ ನಿರ್ಮಾಣ ವಾಗುತ್ತಿರುವ ಗ್ರಂಥಾಲಯ ಕೊಠಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಜಿಲ್ಲಾ ಮತ್ತು ತಾಲೂಕು ಹಂತದ ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಡಿಜಿಟಲ್ ಇ- ಪೋರ್ಟಲ್ ಗಳನ್ನು ಆರಂಭಿಸಲಾಗಿದ್ದು, 4.30 ಲಕ್ಷ ಇ-ಕಂಟೆಂಟ್ ಮಾಹಿತಿ ಲಭ್ಯವಿದ್ದು ಓದುಗರು ಸುಲಭವಾಗಿ ಮಾಹಿತಿಗಳನ್ನು ತಿಳಿಯಬಹುದಾಗಿದೆ ಎಂದರು.
ಆಂಗ್ಲ ಮತ್ತು ಕನ್ನಡ ಭಾಷೆಯ ದಿನಪತ್ರಿಕೆ ಒಳಗೊಂಡಂತೆ ಐ.ಎಎಸ್, ಕೆಎಎಸ್, ಐಪಿಎಸ್ ಸ್ಪರ್ಧಾರ್ಥಿಗಳಿಗೆ ಉನ್ನತ ಹುದ್ದೆಗಳನ್ನು ಪಡೆಯಲು ಅನುಕೂಲವಾಗುವಂತೆ ಕನ್ನಡಮತ್ತು ಸಂಸ್ಕೃತಿ ಇಲಾಖೆ ಕಣಜ, ಶೋಧಗಂಗಾ, ಆಕಾಶವಾಣಿಯಲ್ಲಿ ಪ್ರಸಾರವಾಗುವ ರೂಪಕ, ಕಲೆ, ಸಾಹಿತ್ಯ, ನಾಟಕ ಜೊತೆಗೆ ಸಂದರ್ಶನಗಳ ಲಿಂಕ್ ಕೂಡ ಅಳವಡಿಸಲಾಗಿದ್ದು ಓದುಗರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹೇಳಿದರು.
ರಾಜ್ಯದ ಎಲ್ಲಾ ಗ್ರಾಪಂಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ “ಓದುವ ಬೆಳಕು’ ಎಂಬ ಗ್ರಂಥಾಲಯಗಳನ್ನು ತೆರೆಯಲಾಗಿದ್ದು ಪ್ರತಿ ಗ್ರಾಪಂನಲ್ಲಿ 500 ಸದಸ್ಯರು ನೋಂದಣಿಯಾಗಿದ್ದಾರೆ. ರಾಜ್ಯದಲ್ಲಿ ಬಿಬಿಎಂ ವ್ಯಾಪ್ತಿಯಲ್ಲಿ 2ನೇ ಹಂತದಲ್ಲಿ 192 ವಾರ್ಡ್‌ಗಳಲ್ಲಿ 100 ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯ ವನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದರು. ಉಪನಿರ್ದೇಶಕರಾದ ಮಂಜುನಾಥ್, ಚಂದ್ರಶೇಖರ್, ವೆಂಕಟೇಶ್, ನಗರ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯಾಧಿ ಕಾರಿ ಉಮೇಶ್, ರವೀಶ್ ಕ್ಯಾತನಬೀಡು, ರೈತ ಮುಖಂಡ ಗುರುಶಾಂತಪ್ಪ ಇದ್ದರು.