Advertisement
ಅಪನಗದೀಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಬೆನ್ನಿಗೇ ಎಲ್ಲರೂ ಮೊಬೈಲ್ ವ್ಯಾಲೆಟ್‌ಗಳ ಕಡೆಗೆ ಗಮನ ಹರಿಸತೊಡಗಿದ್ದಾರೆ. ಆದರೆ ಮೊಬೈಲ್ ಮೂಲಕ ಹಣ ಕಳುಹಿಸುವುದು ಎಷ್ಟು ಸುರಕ್ಷಿತ ಎಂದು ಚಿಂತಿಸಿ ಮುಂದಡಿಯಿಡಬೇಕಾದ ಸ್ಥಿತಿಯಿದೆ. ಇನ್ನು, ಗ್ರಾಮಾಂತರದ ಜನತೆಯ ಬವಣೆ ಕಡೆಗೆ ಸರಕಾರದ ಗಮನ ಕಡಿಮೆಯಾಗಿದೆ ಎಂಬ ಅಪವಾದವೂ ಇದೆ.
Related Articles
Advertisement
ಸರಕಾರಿ ಆ್ಯಪ್‌ಗ್ಳ ದುರವಸ್ಥೆಸರಿ, ಖಾಸಗಿ ಆ್ಯಪ್‌ಗ್ಳು ಬೇಡ ಎಂದಾದರೆ ಸರಕಾರಿ ಆ್ಯಪ್ ಉಪಯೋಗಿಸಿ ಎನ್ನಬಹುದು. ರಿಸರ್ವ್ ಬ್ಯಾಂಕ್ ಯುಪಿಐ ಎಂಬ ಆ್ಯಪ್ ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ 18 ಬ್ಯಾಂಕುಗಳಷ್ಟೇ ಇವೆ. ದೇಶದಲ್ಲಿ ನೂರಾರು ಬ್ಯಾಂಕುಗಳಿರುವಾಗ ಕೇವಲ 18 ಬ್ಯಾಂಕುಗಳಷ್ಟೇ ಈ ಆ್ಯಪ್‌ನ ಅಡಿಯಲ್ಲಿದ್ದರೆ ಸರ್ವಜನತೆ ಹೇಗೆ ಡಿಜಿಟಲ್ ವ್ಯವಹಾರ ಮಾಡುವುದು? ಇದೇನೂ ಕಷ್ಟದ ಕೆಲಸವಲ್ಲ. ರಿಸರ್ವ್ ಬ್ಯಾಂಕ್ ಒಂದು ಸುತ್ತೋಲೆ ಹೊರಡಿಸಿದರೆ ಸಾಕು, ಎಲ್ಲ ಬ್ಯಾಂಕುಗಳ ಸರ್ವರ್‌ಗಳೂ ಇದರ ಜತೆ ಲಿಂಕ್ ಮಾಡಿಕೊಳ್ಳಬಹುದು. ಈ ಕಾರ್ಯ ನಡೆಯದೇ ಡಿಜಿಟಲ್ ವ್ಯವಹಾರ ಮಾಡಿ ಎಂದರೆ ವ್ಯಾವಹಾರಿಕ ವಿಶ್ವಾಸ ಉಳಿಯುವುದು ಹೇಗೆ? ಈಗ ಕೇಂದ್ರ ಸರ್ಕಾರವೇ ಭೀಮ್ ಆ್ಯಪ್ ಬಿಡುಗಡೆ ಮಾಡಿ, ಇದರಲ್ಲಿ ವ್ಯವಹಾರ ಮಾಡಿ ಎಂದು ಪ್ರಚಾರ ಮಾಡುತ್ತಿದೆ. ಆದರೆ, ಈ ಆ್ಯಪ್ ಎಲ್ಲರ ಮೊಬೈಲ್‌ನಲ್ಲೂ ಇನ್‌ಸ್ಟಾಲ್ ಆಗುತ್ತಿಲ್ಲ. ಇದರಲ್ಲಿರುವ ಬಗ್‌ಗಳನ್ನು ಸರಿಪಡಿಸುವ ಗೋಜಿಗೆ ಸರ್ಕಾರ ಹೋದಂತಿಲ್ಲ.
ಇಂಟರ್ನೆಟ್ ಇಲ್ಲದೆ ಏನು ಸಾಧ್ಯ? ಮೊಬೈಲ್ ಬ್ಯಾಂಕಿಂಗ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಉಪಯೋಗಿಸಿ, ಡಿಜಿಟಲ್ ಹಣ ವಿನಿಯೋಗಿಸಿ ಎಂದು ಏಕಾಏಕಿ ಕಠಿಣ ನಿಯಮ ಮಾಡಿದ ಸರಕಾರ ಹಳ್ಳಿ ಹಳ್ಳಿಗೆ ಇಂಟರ್‌ನೆಟ್ ಕೊಡುವ ಕುರಿತು ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ? ಅಥವಾ ಈಗ ಇರುವ ಸರಕಾರಿ ಸ್ವಾಮ್ಯದ ದೂರವಾಣಿಯಲ್ಲಿ ಉತ್ತಮ ಇಂಟರ್ನೆಟ್ ನೀಡಲು ಯಾಕೆ ಮುತುವರ್ಜಿ ವಹಿಸಿಲ್ಲ? ಎಕ್ಸ್‌ಚೇಂಜ್‌ನ ಹತ್ತಿರವೇ ಸಮರ್ಪಕವಾಗಿ ಸೇವೆ ನೀಡಲು ಬಿಎಸ್ಸೆನ್ನೆಲ್‌ನವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಬಿಎಸ್ಸೆನ್ನೆಲ್‌ನ ಕೇಂದ್ರ ಕಚೇರಿಯವರೇನೋ ಅತ್ಯಂತ ಕಡಿಮೆ ಬೆಲೆಗೆ ಲ್ಯಾಂಡ್‌ಲೈನ್ ಹಾಗೂ ಇಂಟರ್ನೆಟ್ ಸಂಪರ್ಕ ನೀಡುತ್ತೇವೆ ಎಂದು ಜಾಹೀರಾತು ಕೊಡುತ್ತಾರೆ. ಆದರೆ ಸ್ಥಳೀಯ ಏಕ್ಸ್‌ಚೇಂಜ್‌ಗೆ ಹೋಗಿ ಕೇಳಿದರೆ ನಿಮ್ಮ ಏರಿಯಾದಲ್ಲಿ ನಮ್ಮ ಲೈನ್ ಇಲ್ಲ, ಫೈಬರ್‌ನೆಟ್ ತೆಗೆದುಕೊಳ್ಳಿ ಎನ್ನುತ್ತಾರೆ. ಅದು ಬಹಳ ದುಬಾರಿ ಕನೆಕ್ಷನ್. ತಿಂಗಳಿಗೆ ಸಾವಿರ ರೂ.ಗಿಂತ ಹೆಚ್ಚು ಬಿಲ್ ಬರುತ್ತದೆ. ಹಾಗಾಗಿ ಜನರು ಖಾಸಗಿ ದೂರಸಂಪರ್ಕ ಕಂಪನಿಗಳಿಗೆ ಮೊರೆ ಹೋಗಬೇಕು. ಅವೂ ದುಬಾರಿ. ಇವೆಲ್ಲ ಶ್ರೀಸಾಮಾನ್ಯನ ಕಿಸೆಗೆ ಹೊರೆಯಾಗದೇ? ಬ್ಯಾಂಕುಗಳಲ್ಲಿ ದುರ್ವರ್ತನೆ
ಅಪನಗದೀಕರಣದ ಪೂರ್ವಭಾವಿಯಾಗಿ ಸರ್ಕಾರ ಜನ್‌ಧನ್ ಖಾತೆ ಮಾಡಿಸಿದೆ. ಇನ್ನೂ ಕೂಡಾ ಅದೆಷ್ಟೋ ಮಂದಿ ಖಾತೆ ತೆರೆದಿಲ್ಲ. ಆದ್ದರಿಂದ ಮನೆ ಮನೆಗೆ ತೆರಳಿ ಕನಿಷ್ಠ ಮನೆಗೊಂದಾದರೂ ಜನ್‌ಧನ್ ಅಥವಾ ಬ್ಯಾಂಕ್ ಖಾತೆ ಇರುವಂತೆ ಮಾಡಬೇಕಿತ್ತು. ಎಟಿಎಂ ಕಾರ್ಡ್ ಪ್ರತೀ ಖಾತೆದಾರರಿಗೂ ನೀಡಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ. ಈ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಯಬೇಕಿದೆ.
ಡಿಸಿಸಿ ಬ್ಯಾಂಕುಗಳಲ್ಲಿ, ಸಹಕಾರಿ ಸಂಸ್ಥೆಗಳಲ್ಲಿ ನೋಟು ಸ್ವೀಕಾರಕ್ಕೆ ಅನುಮತಿ ನೀಡಿಲ್ಲ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉತ್ತಮ ಸೇವೆ ನೀಡಬೇಕು ಎಂಬ ನಿಯಮ ಜಾರಿಯಾಗಿಲ್ಲ ಏಕೆ? ಭಾಷೆ ಅರಿಯದ ಅಧಿಕಾರಿಗಳು, ಸಿಬ್ಬಂದಿ ಗ್ರಾಮಾಂತರದ ಜನತೆಯ ಜತೆ ತೋರಿಸುವ ಅತಿರೇಕದ ಅಹಂಕಾರದ ಪರಮಾವಧಿಯ ವರ್ತನೆಗಳು ಅದೆಷ್ಟೋ ಮಂದಿ ಮತ್ತೆ ರಾಷ್ಟ್ರೀಕೃತ ಬ್ಯಾಂಕುಗಳ ಮೆಟ್ಟಿಲು ತುಳಿಯದಂತೆ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ವ್ಯವಹಾರ ಸೀಮಿತ ಮಾಡಿದರೆ ಹಳ್ಳಿ ಹಳ್ಳಿಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆ ತೆರೆಯಲೂ ಕಡ್ಡಾಯ ಮಾಡಬೇಕು. ಆಯಾ ರಾಜ್ಯದ ಸಿಬಂದಿಯೇ ಇರಬೇಕೆಂದು ತಾಕೀತು ಮಾಡಬೇಕು. ಗ್ರಾಹಕಸ್ನೇಹಿ ವರ್ತನೆ ಕಡ್ಡಾಯ, ಅನುಚಿತ ವರ್ತನೆಗೈದರೆ ಇಂತಹವರಿಗೆ ದೂರು ಕೊಡಿ ಎಂಬ ದೊಡ್ಡ ಫಲಕ ತೂಗುಹಾಕುವ ಕೆಲಸವಾದರೂ ನಡಿಯಬೇಕು. ನೋಟು ನಿಷೇಧದಂತಹ ದೊಡ್ಡ ಕೆಲಸದ ಮಧ್ಯೆ ಇದೆಲ್ಲ ಸಣ್ಣ ವಿಷಯಗಳು. ಆದರೆ ಇವುಗಳ ಕಡೆಗೆ ಗಮನ ಹರಿಸಿದರೆ ಜನರ ಬಾಯಲ್ಲಿ ಹರಿಯುವ ಕಟುಮಾತುಗಳಿಂದ ತಪ್ಪಿಸಿಕೊಳ್ಳಬಹುದು. ಜನ ಬ್ಯಾಂಕುಗಳ ಮುಂದೆ ಕ್ಯೂ ನಿಲ್ಲುವುದು ತಪ್ಪಬಹುದು. ಜತೆಗೆ ಡಿಜಿಟಲ್ ಜ್ಞಾನ ಇದ್ದವರು ಮೊಬೈಲ್ ಆ್ಯಪ್‌ಗ್ಳ ಕುರಿತು ಮಾಹಿತಿ ಇಲ್ಲದವರಿಗೆ, ಇಂಟರ್ನೆಟ್ ಮೂಲಕ ಬ್ಯಾಂಕ್ ವ್ಯವಹಾರ ಮಾಡಲು ಅರಿಯದವರಿಗೆ ಮಾಹಿತಿ ಕೊಡಿಸುವ ಕೆಲಸ ಆಂದೋಲನ ರೂಪದಲ್ಲಿಯೇ ನಡೆಯಬೇಕಿದೆ. ಎಟಿಎಂ ಕಾರ್ಡ್ ಮೂಲಕ ಹಣ ಪಾವತಿ ವ್ಯವಸ್ಥೆ (ಪಿಒಎಸ್: ಪಾಯಿಂಟ್ ಆಫ್ ಸೇಲ್ ಯಂತ್ರ) ಇನ್ನಷ್ಟು ಕಡೆ ಅನುಷ್ಠಾನಕ್ಕೆ ಬರಬೇಕು. ಹಾಗಾದಾಗ ಗ್ರಾಮೀಣ ಭಾರತ ಶ್ರೇಷ್ಠ ಭಾರತ ಎಂಬ ವಾಕ್ಯಕ್ಕೆ ಅರ್ಥ ಬರುತ್ತದೆ. – ಲಕ್ಷ್ಮೀ ಮಚ್ಚಿನ