ಹೊಸದಿಲ್ಲಿ : ”ಭಾರತದ ಮುಂದಿನ ಪ್ರಧಾನಿ ಯಾರು ಎಂಬ ಬಗ್ಗೆ ಭವಿಷ್ಯ ನುಡಿಯುವುದು ಕಷ್ಟ” ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಇರುವಂತೆಯೇ ಅವರು ಈ ಮಾತುಗಳನ್ನಾಡಿದ್ದಾರೆ.
ಬಾಬಾ ರಾಮ್ ದೇವ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದರು. “ಈ ಬಾರಿ ದೇಶದಲ್ಲಿನ ರಾಜಕೀಯ ಪರಿಸ್ಥಿತಿ ತುಂಬ ಸಂಕೀರ್ಣ ಇದೆ; ಯಾವುದೇ ಭವಿಷ್ಯ ನುಡಿಯುವುದು ಸುಲಭವಲ್ಲ” ಎಂದವರು ಹೇಳಿದರು.
“ದೇಶದಲ್ಲಿನ ರಾಜಕೀಯ ಸ್ಥಿತಿಗತಿ ಅಸ್ಥಿರವಿದೆ. ಮುಂದಿನ ಲೋಕಸಭಾ ಚುನಾವಣೆಗೆ ಘೋರವಾದ ಕದನ ನಡೆಯುವುದು ನಿಶ್ಚಿತವಿದೆ. ಈ ಕದನವನ್ನು ಯಾರು ಗೆಲ್ಲುತ್ತಾರೆ; ಯಾರು ಪ್ರಧಾನಿ ಆಗುತ್ತಾರೆ ಎಂದು ಹೇಳುವುದು ಬಹಳ ಕಷ್ಟ” ಎಂದು ಬಾಬಾ ರಾಮ್ ದೇವ್ ಅವರು ರಾಮೇಶ್ವರಂ ನಲ್ಲಿ ನಡೆದ ಭಾರತ ಸ್ವಾಭಿಮಾನ ಸಭೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
“ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನು ಯಾವುದೇ ವ್ಯಕ್ತಿ ಅಥವಾ ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ” ಎಂದು ರಾಮ್ ದೇವ್ ಖಡಕ್ ಆಗಿ ನುಡಿದರು.
“ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದು ನಮ್ಮ ಉದ್ದೇಶವಲ್ಲ; ಆದರೆ ಆಧ್ಯಾತ್ಮಿಕ ದೇಶವನ್ನಾಗಿ ಮಾಡುವುದು ನಮ್ಮ ಗುರಿ; ಭಾರತವನ್ನು ಮಾತ್ರವಲ್ಲ ಇಡಿಯ ವಿಶ್ವವನ್ನು ಆಧ್ಯಾತ್ಮಿಕ ಜಗತ್ತನ್ನಾಗಿ ಪರಿವರ್ತಿಸುವುದು ನಮ್ಮ ಗುರಿ” ಎಂದು ಯೋಗ ಗುರು ಹೇಳಿದರು.
ಈಚಿನ ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಬಾಬಾ ರಾಮ್ ದೇವ್ ಅವರು ಈ ಮಾತುಗಳನ್ನು ಆಡಿರುವುದು ಸ್ಪಷ್ಟವಿದೆ ಎಂದು ತಿಳಿಯಲಾಗಿದೆ.