ಬೆಂಗಳೂರು: ಬಸವರಾಜ ಹೊರಟ್ಟಿ ಅವರನ್ನು ವಿಧಾನಪರಿಷತ್ ಸಭಾಪತಿ ಮಾಡಲು ಬಿಜೆಪಿ ಸಖ್ಯ ಹೊಂದುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುವುದರ ಜತೆಗೆ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವ ಶಾಸಕರಾದ ಜಿ.ಟಿ. ದೇವೇಗೌಡ, ಗುಬ್ಬಿ ಶ್ರೀನಿವಾಸ್ ಅವರು ಈಗ “ನಮ್ಮ ಹಾದಿ ನಮ್ಮದು’ ಎಂಬ ಸಂದೇಶ ರವಾನಿಸಿದ್ದಾರೆ. ಸಂಘಟನೆಗೆ ಹೊರಟು ನಿಂತ ಹೊತ್ತಿರಲ್ಲಿ ಜೆಡಿಎಸ್ ಒಳಗೆ ಅಪಸ್ವರ ಮೂಡಿದಂತಾಗಿದೆ.
ಗುರುವಾರ ನಡೆದ ಸಂಘಟನ ಸಭೆ ವೇಳೆ ವರಿಷ್ಠರ ಸಮ್ಮುಖದಲ್ಲೇ ಹಿರಿಯ ಶಾಸಕ ಶಿವಲಿಂಗೇಗೌಡ, ಪಕ್ಷದ ವರಿಷ್ಠ ದೇವೇಗೌಡರನ್ನು ಸುಮ್ಮನಿರಿಸಿದ್ದೇವೆ. ಬಿಜೆಪಿ ಜತೆಗೆ ಹೋಗುವುದಾಗಿ ಬಸವರಾಜ ಹೊರಟ್ಟಿ ಅವರು ಹೇಳಿದ್ದರಿಂದ ತಪ್ಪು ಸಂದೇಶ ರವಾನೆಯಾಗಿದೆ. ಅವರು ಸಭಾಪತಿ ಆಗದಿದ್ದರೆ ಮುಳುಗಿ ಹೋಗುವುದೇನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಭೆಗೆ ಮುನ್ನ ಮಾತನಾಡಿದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್, ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೇಳುತ್ತೇನೆ. ದಬ್ಟಾಳಿಕೆ ಮಾಡಿದರೆ ಕೇಳುವುದಿಲ್ಲ. ಯಾರ ಅಡಿಯಾಳಾಗಿರಲೂ ಬಯಸುವುದಿಲ್ಲ ಎಂದು ಹೇಳಿದರೂ ಬಳಿಕ ಸಭೆಯಲ್ಲೂ ಪಾಲ್ಗೊಂಡು ಅಚ್ಚರಿ ಮೂಡಿಸಿದರು.
ಈ ಮಧ್ಯೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಜಿ.ಟಿ. ದೇವೇಗೌಡ, ಮೈಸೂರಿನಿಂದಲೇ ಉಚ್ಚಾಟನೆ ಆರಂಭಿಸುವುದಾದರೆ ಸ್ವಾಗತ. ಎಚ್.ಡಿ. ಕುಮಾರಸ್ವಾಮಿಯವರಿಗೆ ಮೊದಲಿನಿಂದಲೂ ನನ್ನ ಬಗ್ಗೆ ಬೇರೆ ರೀತಿಯ ಅಭಿಪ್ರಾಯವಿದೆ ಎಂದಿದ್ದಾರೆ. ಕುಮಾರಸ್ವಾಮಿಯವರಿಗಿಂತ ದೊಡ್ಡ ಹೈಕಮಾಂಡ್ ಇದೆ ಎನ್ನುವ ಮೂಲಕ ಸಾ.ರಾ. ಮಹೇಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಮೂಲಕ ಒಂದೆಡೆ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿಯವರು ತಳ ಮಟ್ಟದಿಂದ ಸಂಘಟನೆಗೆ ಹೊರಟು ನಿಂತಿರುವಾಗ ಪಕ್ಷದಲ್ಲೇ ಬಹಿರಂಗ ಅಪಸ್ವರ ಕೇಳಿಬಂದಂತಾಗಿದೆ.