Advertisement
ಕರ್ಕಿಯ ಭೂಸ್ವರ್ಗಕೇರಿಯಲ್ಲಿರುವ ಭಂಡಾರಿಗಳ ಗಣಪತಿ ಜಿಲ್ಲೆಯಲ್ಲಿ ಪ್ರಸಿದ್ಧ. ಇಲ್ಲಿ ಮೂರು ಕುಟುಂಬಗಳು 500ಕ್ಕೂ ಹೆಚ್ಚು ಗಣಪತಿ ಸಿದ್ಧಪಡಿಸುತ್ತವೆ. ಕರ್ಕಿ ಗದ್ದೆಯ ಜೇಡಿಮಣ್ಣನ್ನು ಮಳೆಗಾಲಕ್ಕೂ ಮೊದಲೇ ಸಂಗ್ರಹಿಸಿ ಅದರಲ್ಲಿದ್ದ ಕಲ್ಲುಗಳನ್ನು ಆಯ್ದು, ಮಣ್ಣನ್ನು ಮೃದುವಾಗಿಸಿ, ಕೈಯಿಂದಲೇ ಗಣಪತಿ ನಿರ್ಮಿಸಿ ಪರಿಸರ ಪೂರಕ ಬಣ್ಣಗಳಿಂದ ಅವುಗಳನ್ನು ಚೆಂದಗೊಳಿಸುವುದು ಭಂಡಾರಿ ಕುಟುಂಬದ ವಂಶಪಾರಂಪರ್ಯ ವೃತ್ತಿ. ಅಚ್ಚುಗಳನ್ನು ಬಳಸದ ಕಾರಣ ಪ್ರತಿ ಮೂರ್ತಿಯೂ ತನ್ನದೇಯಾದ ವಿಶಿಷ್ಟತೆಯಿಂದ ಕೂಡಿರುತ್ತದೆ. ದೇವಾಲಯಗಳಲ್ಲಿ ಪಂಚವಾದ್ಯ ನುಡಿಸುವ ಭಂಡಾರಿ ಸಮಾಜದವರು ಜಿಲ್ಲೆಯಲ್ಲಿ ದೇವಾಲಯದ ಪರಿಸರದಲ್ಲಿ ನೆಲೆಸಿದ್ದಾರೆ. ಬೇಸಿಗೆಯಲ್ಲಿ ಮೃದಂಗ, ಚಂಡೆ ವಾದಕರಾಗಿ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ದುಡಿಯುವ ಇವರು ವಾದ್ಯಗಳ ದುರಸ್ತಿ ಮತ್ತು ಮಳೆಗಾಲದಲ್ಲಿ ಮೂರ್ತಿ ತಯಾರಿಸುತ್ತಾರೆ. ಎಲ್ಲ ಕಲೆಗಳು ವಿಶೇಷ ಲಾಭ ತರದಿದ್ದರೂ ಕುಟುಂಬದ ವೃತ್ತಿಯೆಂದು ನಡೆಸಿಕೊಂಡು ಬಂದಿದ್ದಾರೆ.
ಚೌತಿಗೆ ನಾಲ್ಕು ದಿನ ಇರುವಾಗ ಭಂಡಾರಿ ಕೇರಿಯ ಗಣಪತಿ ನೋಡಲು ಜನ ಸಾಲುಗಟ್ಟಿ ನಿಲ್ಲುತ್ತಾರೆ. ಶಿವಲಿಂಗ ಗಣಪ, ಬೆಣ್ಣೆ ಗಣಪ, ಸಿಂಹ ಸವಾರಿ, ಯಕ್ಷಗಾಣ ವೇಷ, ತಿರುಪತಿ ತಿಮ್ಮಪ್ಪ ಹೀಗೆ ವೈವಿಧ್ಯಮಯ ಮೂರ್ತಿ ನೋಡಲು ವಿದ್ಯಾರ್ಥಿಗಳು ಪದೇ ಪದೇ ಬರುತ್ತಾರೆ. ಹೆದ್ದಾರಿಯಲ್ಲಿ ಹೋಗುವ ಪ್ರವಾಸಿಗರು ಕುತೂಹಲದಿಂದ ಬಂದು ಗಣಪತಿ ನೋಡಿ ಖುಷಿ ಪಡುತ್ತಾರೆ. ಈ ಅವಧಿಯಲ್ಲಿ ಕಲಾವಿದರಿಗೆ ಹಗಲು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಗಲು ಬಂದವರಿಗೆ ಗಣಪತಿ ತೋರಿಸಿ ವಿವರಿಸುತ್ತಾರೆ. ನಮಗೆ ತೊಂದರೆಯಾದರೂ ಸರಿ ಸಾವಿರಾರು ಕಲಾಪ್ರೇಮಿಗಳು ನಮ್ಮ ಕೇರಿಗೆ ಆಗಮಿಸಿ ಖುಷಿ ಪಡುವುದು ನಮಗೆ ದೊಡ್ಡ ಉಡುಗೊರೆ ಎನ್ನುತ್ತಾರೆ. ಜಿಲ್ಲೆಯ ಎಲ್ಲೆಡೆ ಮೂರ್ತಿ ಕಲಾವಿದರ ಮನೆಗಳಲ್ಲಿ ಗಣಪತಿ ಸಿದ್ಧವಾಗುತ್ತಿದೆ. ಕೆಕ್ಕಾರ ಡಿ.ಜಿ. ಭಟ್ ಕೆಲವೇ ಕೆಲವು ಅಪರೂಪದ ಮೂರ್ತಿಗಳನ್ನು ರಚಿಸುತ್ತಾರೆ. ಮೂರ್ತಿ ಕಲಾವಿದರು ದೇಶದ ಪರಂಪರೆ, ಸಂಸ್ಕೃತಿ ಉಳಿಸಲು ಮಹತ್ವದ ಕೊಡುಗೆ ನೀಡಿದ್ದಾರೆ.
Related Articles
Advertisement