Advertisement

Desi Swara;ರಂಗಿನ ವಿಭಿನ್ನ ಭಾವಾಲೋಕಗಳು;ಬಣ್ಣಗಳಲ್ಲಿಯೂ ಇವೆ ವಿರೋಧಾಭಾಸಗಳು….!

02:42 PM Aug 05, 2023 | Team Udayavani |

ಬಣ್ಣಗಳು ನಿಜವಾಗಿಯೂ ಬಣ್ಣಗಳಲ್ಲಿ ಅವು ಬೆಳಕಿನ ತರಂಗಗಳು ಎಂಬುದು ಸತ್ಯವಾದರೂ ನಾವು ಬಣ್ಣಗಳ ಇರುವಿಕೆಯ ಯೋಚನೆಯಲ್ಲಿಯೇ ಇರುತ್ತೇವೆ. ಪ್ರತೀ ಬಣ್ಣಗಳೊಂದಿಗೆ ನಾವು ಭಾವನೆಗಳನ್ನು ಪೋಣಿಸಿಕೊಂಡಿದ್ದೇವೆ. ವಿಷಯಧಾರಿತ, ಪ್ರದೇಶಾಧಾರಿತವಾಗಿ ಬಣ್ಣಗಳ ಈ ಭಾವನೆಗಳು ಬದಲಾಗುವುದನ್ನು ಗಮನಿಸಬಹುದು. ವಿವಿಧೆಡೆ ಕಾಣುವ ಬಣ್ಣಗಳ ರೂಪಾಂತರಗಳು, ಬಣ್ಣಗಳು ನಮ್ಮ ಮನಸ್ಥಿತಿ, ಮೆದುಳು ಹಾಗೂ ಪರಿಸ್ಥಿತಿಯ ಮೇಲೆ ಬೀಳುವ ಪರಿಣಾಮಗಳ ಬಗ್ಗೆ ಈ ವಾರ….

Advertisement

ಮನುಷ್ಯರ ರೂಪುಗಳಲ್ಲಿ ಎಷ್ಟು ವ್ಯತ್ತಾಸಗಳಿವೆಯೋ ಅಷ್ಟೇ ಭಿನ್ನತೆಗಳನ್ನು ಅವರ ವಿಚಾರ ಮತ್ತು ನಂಬಿಕೆಗಳಲ್ಲಿ ಕೂಡ ನೋಡುತ್ತೇವೆ. ಹೀಗಾಗಿ ಬಣ್ಣಗಳ ವಿಚಾರದಲ್ಲಿ ವಿರೋಧಾಭಾಸದ ಆರೋಪಗಳನ್ನು ನೋಡುವುದು ಆಶ್ಚರ್ಯವೇನಲ್ಲ. ಉದಾಹರಣೆಗೆ ಪಾಶ್ಚಾತ್ಯ ದೇಶಗಳಲ್ಲಿ ಕಪ್ಪನ್ನು ಶೋಕಾಚಾರಣೆಯ ಬಣ್ಣವಾಗಿ ಗುರುತಿಸಿದರೆ, ಪೂರ್ವಾತ್ಯ ದೇಶಗಳಲ್ಲಿ ಬಿಳಿಯನ್ನು ಶೋಕಾಚರಣೆಯ ಬಣ್ಣವಾಗಿ ಬಳಸಲಾಗುತ್ತದೆ. ಇನ್ನೂ ಥೈಲ್ಯಾಂಡ್‌ ಮತ್ತು ಬ್ರೆಝಿಲ್‌ ದೇಶಗಳಲ್ಲಿ ನೇರಳೆ ಬಣ್ಣವನ್ನು ಶೋಕದ ಬಣ್ಣವಾಗಿ ಗುರುತಿಸುತ್ತಾರೆ.

ಹಾಗೆಂದು ಪ್ರತೀ ಬಣ್ಣಕ್ಕೆ ಒಂದೇ ಭಾವವಿದೆ ಎಂದೇನೂ ಅಲ್ಲ. ಒಂದೇ ದೇಶದಲ್ಲಿ ಅವೇ ಬಣ್ಣಗಳು ಬೇರೆ, ಬೇರೆ ಉದ್ದೇಶಕ್ಕಾಗಿ ಬಳಕೆಯಾಗುವುದನ್ನು ನೋಡಬಹುದು. ಉದಾಹರಣೆಗೆ ಇಂಗ್ಲೆಂಡಿನ ಹೂವಿನ ಅಂಗಡಿಗಳಲ್ಲಿ ಕೆಂಪು ಗುಲಾಬಿ ಪ್ರೀತಿಯ ಸಂಕೇತವಾಗಿ ಬಿಕರಿಯಾದರೆ, ಫ‌ುಟ್‌ಬಾಲ್‌ ಕೋರ್ಟಿನಲ್ಲಿ ಕೆಂಪು ಕಾರ್ಡ್‌ ನಿಯಮದ ಉಲ್ಲಂಘನೆ, ಹಿಂಸೆಯ ಅರ್ಥವನ್ನು ನೀಡುತ್ತದೆ.

ಕೆಲವು ಬಣ್ಣಗಳನ್ನು ಬಹುತೇಕ ದೇಶಗಳು ಒಂದೇ ಉದ್ದೇಶಕ್ಕಾಗಿ ಬಳಸುವುದನ್ನು ಕೂಡ ಕಾಣಬಹುದು. ಉದಾಹರಣೆಗೆ “ನಿಲ್ಲಿಸು’ ಎನ್ನುವ ಟ್ರಾಫಿಕ್‌ ಚಿಹ್ನೆಯಲ್ಲಿ ಕೆಂಪು ಬಣ್ಣವನ್ನು ಬಳಸಲಾಗಿದೆ. ಈ ರೀತಿ ಕೆಂಪು ಬಣ್ಣವನ್ನು ಎಚ್ಚರಿಕೆ ನೀಡಲು ಉಪಯೋಗಿಸಲು ಏನಾದರೂ ಕಾರಣಗಳಿವೆಯೇ? ಕೆಲವರ ಪ್ರಕಾರ ನಮ್ಮ ಮೆದುಳು ಕೆಂಪನ್ನು ಆದಿ ಮಾನವನ ಕಾಲದಿಂದಲು ತಟ್ಟನೆ ಗುರುತಿಸುವ ಕ್ರಿಯೆಯಲ್ಲಿ ಭಾಗವಹಿಸುತ್ತ ಬಂದಿದ್ದು, ಈ ಬಣ್ಣಕ್ಕೆ ತಟ್ಟನೆ ಸ್ಪಂದಿಸುತ್ತದೆಯಂತೆ. ಹಾಗಾಗಿ ಕೆಂಪು ಬಣ್ಣವನ್ನು ಬಹುತೇಕ ಪ್ರತೀ ದೇಶದವರೂ ಹಲವು ಮುನ್ನೆಚ್ಚರಿಕೆ ನೀಡುವ ಸಂದೇಶಗಳಲ್ಲಿ ಬಳಸಿಕೊಂಡಿರುವುದನ್ನು ನೋಡುತ್ತೇವೆ.

Advertisement

ಕೆಲವರು ಬಣ್ಣಗಳನ್ನು ಮನಸ್ಸಿನ ಮುದಕ್ಕಾಗಿ ಬಳಸುವುದನ್ನು ಕಾಣಬಹುದು. ಉದಾಹರಣೆಗೆ ಖಾಯಿಲೆಯಾದವರ ಪಕ್ಕದಲ್ಲಿ ಇಡುವ ಬಣ್ಣದ ಹೂಗಳು ಮನಸ್ಸನ್ನು ಅರಳಿಸಬಲ್ಲವು. ಭರವಸೆಯನ್ನು ತುಂಬಬಲ್ಲವು. ಅಂತೆಯೇ ಕೆಲಸದ ಸ್ಥಳಗಳಲ್ಲಿ ಅಲ್ಲಲ್ಲಿ ಬಣ್ಣದ ಹೂವಿನ ಗುತ್ಛಗಳನ್ನು ಇಟ್ಟರೆ ಅವು ಕೆಲಸಗಾರರ ಒತ್ತಡವನ್ನು ಕಡಿಮೆ ಮಾಡಬಲ್ಲ ಕೇಂದ್ರ ಬಿಂದುಗಳಾಗುತ್ತವೆ ಎನ್ನಲಾಗಿದೆ.

ಆಸಕ್ತಿಯ ವಿಚಾರವೆಂದರೆ ನೀಲಿ ನೀರನ್ನು, ನೀಲಿ ನಭವನ್ನು ಮತ್ತು ನೀಲಿ ಹೂವನ್ನು ನೋಡಿ ಅರಳುವ ಮನಸ್ಸು ಅದೇ ಬಣ್ಣವನ್ನು ಕೋಣೆಯ ಎಲ್ಲ ಗೋಡೆಗಳ ಮೇಲೆ ನೋಡಿದಾಗ ಅರಳದಿರಬಹುದು. ಇದಕ್ಕೆ ಮುಖ್ಯ ಕಾರಣ, ಆ ಬಣ್ಣವನ್ನು ಇಂತಹ ಕೆಲವು ಅಗಾಧತೆ ಅಥವಾ ಮಿತಿಗಳಿಗೆ ಮಾತ್ರ ಹೋಲಿಸಿ ನೋಡುವ ನಮ್ಮ ಅಭ್ಯಾಸಬಲದಿಂದ ಇರಬಹುದು ಎನ್ನಲಾಗಿದೆ. ಅಕಸ್ಮಾತ್‌ ಮನಸ್ಸು ಕೆಲವುಕಾಲ ಅತ್ಯಂತ ವಿರಳ ಬಣ್ಣಗಳಿಗೆ ಆಕರ್ಷಿತವಾದರೂ ಆ ಪ್ರಭಾವ ನಿರ್ದಿಷ್ಟ ತಾಸುಗಳು ಮಾತ್ರ ಎನ್ನಲಾಗಿದೆ.

ಅಂತೆಯೇ ಕೆಂಪು ವರ್ಣದ ಕಡೆ ತಟ್ಟನೆ ಗಮನ ಹರಿಸುವ ಮನಸ್ಸು, ಇಡೀ ಕೋಣೆಯ ಬಣ್ಣ ಕೆಂಪಾದರೆ, ಸಹಿಸಲಾಗದ ಕಿರಿ -ಕಿರಿಗೆ ಸಿಲುಕಬಹುದು. ಇನ್ನೊಂದು ಅರ್ಥದಲ್ಲಿ ನಮ್ಮ ಮನಸ್ಸು ಬಣ್ಣಗಳ ವಿಚಾರದಲ್ಲಿ ಅತ್ಯಂತ ಪೂರ್ವಾಗ್ರಹ ಪೀಡಿತ ಎನ್ನಬಹುದು.

ಅಮೆರಿಕದಲ್ಲಿ ನಡೆದ ಒಂದು ಸಣ್ಣ ಅಧ್ಯಯನದ ಪ್ರಕಾರ 71 ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ಕೆಂಪು, ಕಪ್ಪು, ಮತ್ತು ಹಸುರು ಬಣ್ಣಗಳನ್ನು ತೋರಿಸಿ ಅನಂತರ ಪರೀಕ್ಷೆ ನೀಡಾಲಾಯಿತಂತೆ. ಆಶ್ಚರ್ಯ ಎನ್ನುವಂತೆ ಕೆಂಪು ಬಣ್ಣವನ್ನು ನೋಡಿದ ವಿದ್ಯಾರ್ಥಿಗಳು ಮಿಕ್ಕವರಿಗಿಂತ ಶೇ. 20 ಕಡಿಮೆ ಅಂಕ ಗಳಿಸಿದರಂತೆ. ಈ ರೀತಿಯ ಋಣಾತ್ಮಕ ಪ್ರದರ್ಶನಕ್ಕೆ ಕೆಂಪು ಬಣ್ಣದ ಬಗೆಗಿನ ಅವರ ಪೂರ್ವಾಗ್ರಹಗಳು ಕಾರಣವೇ ? ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಆದರೆ ಖಚಿತ ಉತ್ತರಕ್ಕೆ ಇನ್ನೂ ಹೆಚ್ಚಿನ ಅಧ್ಯಯನಗಳ ಆವಶ್ಯಕತೆಯಿದೆ.

ವಯಸ್ಸಿನ ಜತೆಗೆ ಬದಲಾಗುವ ಬಣ್ಣಗಳು
ಕೆಲವರಿಗೆ ಕೆಲವು ಬಣ್ಣಗಳೆಂದರೆ ಹೆಚ್ಚು ಪ್ರೀತಿ. ಆ ಬಣ್ಣಗಳಲ್ಲಿ ತಾವು ಚೆನ್ನಾಗಿ ಕಾಣುತ್ತೇವೆ ಎಂಬ ನಂಬಿಕೆಯೂ ಅದಕ್ಕೆ ಕಾರಣವಾಗಬಹುದು. ಬೇರೆಯವರು “ಇದು ಸುಂದರವಾದ ಬಣ್ಣ’ ಎಂತಲೂ ” ಈ ಬಣ್ಣ ನಿಮಗೆ ಒಪ್ಪುತ್ತದೆ’ ಎಂದು ಹೊಗಳುವ ಕಾರಣವೂ ಅಂತಹ ನಂಬಿಕೆಗಳು ಬೆಳೆಯಬಹುದು. ಇಂತಹವರು ಅದೇ ಬಣ್ಣದ ಬಟ್ಟೆಗಳನ್ನು ಪದೇ ಪದೇ ಕೊಳ್ಳುವುದನ್ನು ನೋಡಬಹುದು.

ವಯಸ್ಸಾದಂತೆ ಅವೇ ಬಣ್ಣಗಳು ತಮಗೆ ಒಪ್ಪುವುದಿಲ್ಲ ಎಂಬ ಶಂಕೆಯೂ ಕೆಲವರನ್ನು ಕಾಡಬಹುದು. ಚಿಕ್ಕವರಿ¨ªಾಗ ಕೆಲವು ಬಣ್ಣಗಳನ್ನು ಉಡಲು ಹಿಂಜರಿಯುವ ಕೆಲವರು ವಯಸ್ಸಾದಂತೆ ಯಾರು ಏನು ಬೇಕಾದರೂ ಅಂದುಕೊಳ್ಳಲಿ ಎನ್ನುವ ಉದಾಸಕ್ಕೆ ಬಿದ್ದು ಹೊಸ ಬಣ್ಣಗಳನ್ನು ಪ್ರಯತ್ನಿಸಬಹುದು. ಇನ್ನು ಕೆಲವರಿಗೆ ಹೊಸ, ಹೊಸ ಬಣ್ಣದ ಬಟ್ಟೆಗಳನ್ನು ಕೊಳ್ಳುವುದೇ ಸಂತೋಷ.

ಕೆಲವು ವಿರಳ ಬಣ್ಣಗಳು ಬಹಳ ದುಬಾರಿಯಾಗಿರಬಹುದು. ಇನ್ನು ಕೆಲವರಿಗೆ ಬಿಳಿಯ ಬಣ್ಣ ಇಷ್ಟವಾದರೂ ಅದನ್ನು ಸಂಭಾಳಿಸುವ ಚಿಂತೆಗಳ ಕಾರಣ ಅದರಿಂದ ದೂರವಿರಬಹುದು. ಇನ್ನು ಕೆಲವರಿಗೆ ಬೇರೆಯವರ ಗಮನವನ್ನು ಸೆಳೆಯಲು ಅತ್ಯಂತ ಗಾಢವಾದ, ಎದ್ದುಕಾಣುವ ಬಣ್ಣಗಳನ್ನು ಧರಿಸುವ ಇರಾದೆಯಿರಬಹುದು.

ವಯಸ್ಸಾದಂತೆ ಗಾಢ ವರ್ಣಗಳನ್ನು ಕಡಿಮೆ ಮಾಡಿ ಶಾಂತ ಭಾವವನ್ನು ನೀಡುವ ಬಣ್ಣಗಳನ್ನು ಕೆಲವರು ಆರಿಸಿಕೊಳ್ಳಲು ಶುರುಮಾಡಬಹುದು. ಬಣ್ಣಗಳು ಎಂದರೆ ಅದು ಬರೀ ಬಟ್ಟೆಗೆ ಸೀಮಿತವಾದುದಲ್ಲ. ಅದು ಅವರು ಇಡೀ ಮನೆಯನ್ನು ಅಲಂಕರಿಸಲು ಬಳಸುವ ಸಾಧನಗಳು, ಮನೆಯ ಪೇಂಟ್‌, ಓಡಿಸುವ ಗಾಡಿಗಳು, ಆರಿಸಿಕೊಳ್ಳುವ ತರಕಾರಿಯ ವಿಧಗಳು, ಅಡುಗೆಗೆ ಬಳಸುವ ಸಾಮಗ್ರಿಗಳು ಹೀಗೆ ಎಲ್ಲದರ ಮೇಲೆ ಬಣ್ಣಗಳ ಪ್ರಭಾವ ಬದುಕಿನುದ್ದಕ್ಕೂ ಮುಂದುವರೆಯುತ್ತದೆ.
ಬಣ್ಣಗಳ ಆಯ್ಕೆಯ ಮೇಲೆ ಅವರ ವೈಯಕ್ತಿಕ ಇಷ್ಟಗಳು, ಇತರರ ಅಭಿಪ್ರಾಯಗಳು, ಧಾರ್ಮಿಕ ನಂಬಿಕೆಗಳು, ಸಾಂಸ್ಕೃತಿಕ ವಿಚಾರಗಳು, ಲಭ್ಯತೆ ಮತ್ತು ಹಣದ ಮಿತಿ ಎಲ್ಲವೂ ಪ್ರಭಾವ ಬೀರಬಲ್ಲವು. ಅವರ ಮೇಲೆ ಕೆಲವು ಬಣ್ಣಗಳ ಪ್ರಭಾವ ಹೆಚ್ಚಾಗಲು ಮೇಲಿನ ಎಲ್ಲವೂ ಕಾರಣವಾಗಬಲ್ಲವು.

ಆದರೆ ಬಣ್ಣಗಳ ಮುಖ್ಯ ಉದ್ದೇಶ “ಆಕರ್ಷಣೆ’. ಪ್ರಕೃತಿಯ ಬಣ್ಣಗಳಿಗೆ ಉದ್ದೇಶವಿದೆ. ಹೂವುಗಳ ಬಣ್ಣ ಬಣ್ಣದ ಪಕಳೆಗಳು ಪರಾಗ ಸ್ಪರ್ಶಕ್ಕೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಕಪ್ಪು-ಬಿಳುಪಿನ ಹಾಳೆಯ ನಡುವೆ ಮಾರ್ಕರಿನಲ್ಲಿ ಗುರುತು ಮಾಡಿದಂತೆ ಸಂಗಾತಿಯ ನೋಟವನ್ನು ಆಕರ್ಷಿಸುವ ಉದ್ದೇಶವನ್ನು ಹೊತ್ತ ಚರಾಚರಗಳು ಬಣ್ಣದ ಸಾಮ್ರಾಜ್ಯದಲ್ಲಿ ಅದ್ದಿ ತೆಗೆದಂತೆ ಸೃಷ್ಟಿಯಾಗಿವೆ. ಅದಕ್ಕೇ ದಾರ್ಶನಿಕರು ಸೃಷ್ಟಿಯನ್ನು ಬಣ್ಣ -ವಾಸನೆಗಳ ಜಗತ್ತೆಂದು ವರ್ಣಿಸುತ್ತಾರೆ.
ಆಕರ್ಷಿಸುವುದಕ್ಕೆ ಎಂದೇ ಜಾಹೀರಾತು ಕಂಪೆನಿಯವರು ಡಿಸ್ಕೌಂಟ್‌, ಸೇಲ್‌ ಇತ್ಯಾದಿ ಪದಗಳನ್ನು ಅತೀ ಗಾಢ ಬಣ್ಣಗಳಲ್ಲಿ ಛಾಪಿಸುತ್ತಾರೆ. ನಮ್ಮ ಮೆದುಳು ಸುತ್ತಲ ಜಗತ್ತಿನಲ್ಲಿ ಬಣ್ಣ, ಆಕಾರ, ಅಗಾಧತೆ ಇತ್ಯಾದಿಗಳಲ್ಲಿ ಎದ್ದು ಕಾಣುವ ವಿಚಾರಗಳ ಕಡೆ ಮೊದಲು ಗಮನ ನೀಡುತ್ತದೆ. ಆ ಗಮನವನ್ನು ಸೆಳೆಯಲು ಬೇಕಾದ ಎಲ್ಲ ಸಾಧನಗಳಲ್ಲಿ ಬಣ್ಣಗಳು ಅಗ್ರ ಸ್ಥಾನವನ್ನು ಪಡೆದಿವೆ.
ಪ್ರಸಿದ್ಧ ಕಲಾವಿದ ವ್ಯಾನ್‌ ಗೋ “ನಾವು ನೋಡುವ, ನಮಗೆ ತಿಳಿದಿರುವ ವಸ್ತುಗಳ ಬಣ್ಣವನ್ನು ಬದಲಿಸಿ, ಆಸಕ್ತಿದಾಯಕ, ಆಕರ್ಷಣೀಯ ಬಣ್ಣಗಳನ್ನು ಬಳಸಿ ನನ್ನ ಅಭಿವ್ಯಕ್ತಿಯ ತೀವ್ರತೆಯನ್ನು ಹೆಚ್ಚಿಸುತೇನೆ ‘ ಎಂದು ಒಂದೆಡೆ ಹೇಳಿ¨ªಾನೆ. ಇದೇ ತಂತ್ರವನ್ನೇ ನಾವು ಜಾಹೀರಾತಿನ ಬಣ್ಣಗಳಲ್ಲೂ ನೋಡುತ್ತೇವೆ.

ರೂಪದರ್ಶಿಗೆ ಕೆಂಪು ಆಕರ್ಷಕ ತುಟಿಯ ಬಣ್ಣ ನೀಡುವ ಬದಲು ಗಾಢ ಕಪ್ಪಿನ ತುಟಿಯ ರಂಗನ್ನು ನೀಡಿ ಗಮನವನ್ನು ಸೆಳೆಯಲಾಗುತ್ತದೆ. ಅದರಿಂದ ಆಕರ್ಷಿತವಾದ ಅನಂತರ ಕಣ್ಣುಗಳಿಗೆ ಆ ಕಂಪೆನಿ, ಸಾಧನ ಇತ್ಯಾದಿಗಳ ಕಡೆ ನೋಡುವಂತೆ ಮಾಡುವ ಹುನ್ನಾರವಿದು. ಆದರೆ ಕೆಲವರು ಅದನ್ನು ನಿಜವಾಗಿಯೂ ಕೊಂಡು ಬಳಸಿ ಹೊಸ ಫ್ಯಾಷನ್‌ನ ಹರಿಕಾರರಾಗುತ್ತಾರೆ. ಈ ಉಪಾಯವನ್ನು ಈಗ ಬಹಳಷ್ಟು ಕಂಪೆನಿಗಳು ಬಳಸುತ್ತಾರೆ.

ಕೆಲವು ನಿರ್ಮಾಣ ಸಂಸ್ಥೆಗಳು ಒಂದು ಹೆಜ್ಜೆ ಮುಂದೆ ಹೋಗಿವೆ. ಪಿಕ್ಸಾì ಕಂಪೆನಿ ತನ್ನ ಐnsಜಿಛಛಿ Ouಠಿ ಎನ್ನುವ ಅನಿಮೇಶನ್‌ ಚಿತ್ರಗಳಲ್ಲಿ ಪ್ರತೀ ಭಾವವನ್ನು ಒಂದು ಬಣ್ಣದ ಫ್ರೆàಮಿನಲ್ಲಿ ಚಿತ್ರಿಸಿ, ಬಣ್ಣಕ್ಕೂ, ಭಾವಕ್ಕೂ ಅವಿನಾ ಸಂಬಂಧವನ್ನು ಕಲ್ಪಿಸುವ ಯತ್ನ ಮಾಡಿದೆ.

ಪ್ರಕೃತಿಯ ಅಗಾಧ ಸೃಷ್ಟಿಯಲ್ಲಿಯೂ ನಾವು ಅನೇಕಾನೇಕ ವರ್ಣ ಸಂಯೋಜನೆಗಳನ್ನು ಕಾಣುತ್ತೇವೆ. ಇಲ್ಲಿ ಕೂಡ ಯಾವ ಹುನ್ನಾರದಲ್ಲಿ ಈ ವರ್ಣಗಳ ಸಂಯೋಜನೆ ಆಗಿರಬಹುದು ಎಂಬ ಬಗ್ಗೆ ಮನಸ್ಸು ಯೋಚಿಸದಿರಲು ಸಾಧ್ಯವಿಲ್ಲ. ಈ ವಿರೋಧಾಭಾಸಗಳ ಜತೆಯಲ್ಲೇ ನಾವು ಬಣ್ಣಗಳನ್ನು ಹೇಗೆ ಅನುಭವಿಸುತ್ತೇವೆ ಎನ್ನುವದರ ಬಗ್ಗೆ ಮುಂದಿನ ವಾರ…

*ಡಾ| ಪ್ರೇಮಲತಾ ಬಿ.

Advertisement

Udayavani is now on Telegram. Click here to join our channel and stay updated with the latest news.

Next