ಧಾರವಾಡ: ರಾಮಾಯಣ ಕಾಲದಲ್ಲಿ ಲಕ್ಷ್ಮಣನ ಜೀವ ಉಳಿಸಿದ್ದು ಸಂಜೀವಿನ ಸೊಪ್ಪು. ಅಂತಹ ಶಕ್ತಿ ಸೊಪ್ಪಿಗಿದೆ. ಸೊಪ್ಪು ಪರಿಪೂರ್ಣ ಆಹಾರ, ದೇಹಕ್ಕೆ ಬೇಕಾದ ಪೋಷಣೆ ಹಾಗೂ ಚೈತನ್ಯ ಕೊಡುವಂತದ್ದು. ರಕ್ತಹೀನತೆ, ಅಪೌಷ್ಟಿಕತೆ ಮತ್ತು ಇತರೆ ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ಸೊಪ್ಪು ಮಹತ್ವದ ಪಾತ್ರ ವಹಿಸುತ್ತದೆ ಎಂದು ಆಹಾರ ತಜ್ಞೆ ಡಾ| ಅರುಣಾ ತಿಮ್ಮಾಪುರ ಹಿರೇಮಠ ಹೇಳಿದರು.
ಸಹಜ ಸಮೃದ್ಧ ಹಾಗೂ ಪೀಪಲ್ ಫಸ್ಟ್ ಫೌಂಡೇಷನ್ ಆಶ್ರಯದಲ್ಲಿ ಆಯೋಜಿಸಿದ್ದ ಸೊಪ್ಪಿನ ಮೇಳದ ಅಂಗವಾಗಿ ರವಿವಾರ ನಡೆದ ಜವಾರಿ ಸೊಪ್ಪಿನ ಅಡುಗೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸೊಪ್ಪು ನಿಸರ್ಗದ ಕೊಡುಗೆ. ಹೆಚ್ಚು ಒಳಸುರಿ ಕೇಳದೆ ಬೆಳೆಯುವ ಸೊಪ್ಪು, ರೈತರಿಗೂ ಆರ್ಥಿಕ ಭದ್ರತೆ ಒದಗಿಸುತ್ತದೆ. ಇಷ್ಟೊಂದು ಬಗೆಯ ಸೊಪ್ಪುಗಳು ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇಂತಹ ಮೇಳಗಳನ್ನು ಆಯೋಜಿಸುವ ಮೂಲಕ ಗ್ರಾಹಕರಲ್ಲಿ ಶುದ್ಧ ಆಹಾರದ ಕುರಿತು ಜಾಗೃತಿ ಮೂಡಿಸುವುದು ಮಾದರಿಯಾಗಿದೆ ಎಂದರು. ಸೊಪ್ಪಿನ ಅಡುಗೆ ಸ್ಪರ್ಧೆ ತೀರ್ಪುಗಾರರಾಗಿದ್ದ ಸುನಂದಾ ಪ್ರಕಾಶ ಭಟ್ ಮಾತನಾಡಿ, ತೊಪ್ಪಲು ಪಲ್ಲೆ ನಮ್ಮ ದಿನನಿತ್ಯದ ಅಡುಗೆ ಭಾಗವಾಗಬೇಕು.
ಅವುಗಳ ಬಳಕೆಯ ಪಾಕ ವಿಧಾನಗಳನ್ನು ಪರಿಚಯಿಸಬೇಕಾಗಿದೆ. ಇವತ್ತಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಹೊಸ ತರಹದ ಅಡುಗೆಗಳನ್ನು ಪರಿಚಯಿಸಿದ್ದು ಸಂತಸದ ಸಂಗತಿ ಎಂದು ಹೇಳಿದರು.
ಇನ್ನೋರ್ವ ತೀರ್ಪುಗಾರ ಲಿಂಗರಾಜ ಬಿ. ಮಾಸೂರ ಮಾತನಾಡಿ, ಸೊಪ್ಪಿನ ಕೃಷಿಯಲ್ಲಿ ಅಪಾರವಾದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಗ್ರಾಹಕರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಗ್ರಾಹಕರು ಸಾವಯವದಲ್ಲಿ ಬೆಳೆದ ವಿಷಮಯಕ್ತ ಸೊಪ್ಪುಗಳನ್ನು ಬಳಸಬೇಕು ಎಂದರು. ಸಹಜ ಸಮೃದ್ಧದ ನಿರ್ದೇಶಕ ಜಿ.ಕೃಷ್ಣಪ್ರಸಾದ್ ಮತ್ತು ನಿಷಾಂತ್ ಇದ್ದರು. ಶಾಂತಕುಮಾರ್ ಸ್ವಾಗತಿಸಿದರು. ಜನಾರ್ಧನ್ ಬಟಾರಿ ನಿರೂಪಿಸಿದರು.
ಪ್ರತಿಮಾ ಪ್ರಥಮ-ವಾಣಿಶ್ರೀ ಭಟ್ ದ್ವಿತೀಯ
ಸೊಪ್ಪಿನ ರೊಟ್ಟಿ, ಹರಿವೆ ಸೊಪ್ಪಿನ ಕೇಕ್, ಸೊಪ್ಪಿನ ಪಲಾವ್, ತಂಬುಳಿ, ನುಗ್ಗೆ ಸೊಪ್ಪಿನ ಪಡ್ಡು, ದೊಡ್ಡಪತ್ರೆ ಬಜ್ಜಿ, ಮೆಂತೆ ಸೊಪ್ಪಿನ ಉಂಡಗಡಬು, ಸೊಪ್ಪಿನ ಚಟ್ನಿ, ಕೆಸುವಿನ ಎಲೆಯ ಪತ್ರೊಡೆ, ಸಬ್ಬಸಿಗೆ ಸೊಪ್ಪಿನ ವಡೆ, ದಾಸವಾಳ ಸೊಪ್ಪಿನ ದೋಸೆ, ಸಬ್ಬಸಿಗೆ ಸೊಪ್ಪಿನ ನಿಪ್ಪಟ್ಟು, ಸಬ್ಬಸಿಗೆ ಸೊಪ್ಪಿನ ನುಚ್ಚಿನ ಉಂಡೆ ಸೇರಿದಂತೆ ವೈವಿಧ್ಯಮಯ ರುಚಿಕರ ತಿಂಡಿ-ತಿನಿಸುಗಳನ್ನು ಸ್ಪರ್ಧೆಗೆ ತರಲಾಗಿತ್ತು. ಪ್ರತಿಮಾ ಪ್ರವಾರ್ ಪ್ರಥಮ, ವಾಣಿಶ್ರೀ ಎನ್. ಭಟ್ಟ ದ್ವಿತೀಯ, ಪ್ರಿಯದರ್ಶಿನಿ ಹಾಗೂ ಸಾವಿತ್ರಿ ಎಸ್. ಕೊಡಲಿ ತೃತೀಯ ಬಹುಮಾನ ಪಡೆದರು.