Advertisement

Diabetes: ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ಪಥ್ಯಾಹಾರ

04:31 PM Nov 26, 2023 | Team Udayavani |

ಮಧುಮೇಹವು ಜೀವನ ಶೈಲಿಗೆ ಸಂಬಂಧಿಸಿದ ಒಂದು ಅನಾರೋಗ್ಯ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಇದನ್ನು ತಡೆಗಟ್ಟಬಹುದು ಹಾಗೂ ಪಥ್ಯಾಹಾರ ಮತ್ತು ವ್ಯಾಯಾಮಗಳ ಮೂಲಕ ಇದರ ಮೇಲೆ ಉತ್ತಮ ನಿಯಂತ್ರಣ ಸಾಧಿಸಬಹುದು.

Advertisement

ಮಧುಮೇಹಿಯು ಈ ಅನಾರೋಗ್ಯಕ್ಕಾಗಿ ಮಾತ್ರೆಗಳನ್ನು ಮಾತ್ರ ಸೇವಿಸುತ್ತಿದ್ದಾರೆಯೇ ಅಥವಾ ಇನ್ಸುಲಿನ್‌ ತೆಗೆದುಕೊಳ್ಳುತ್ತಿದ್ದಾರೆಯೇ ಅಥವಾ ಆಕೆ ಗರ್ಭಿಣಿ ಅವಧಿಯಲ್ಲಿ ಮಧುಮೇಹಕ್ಕೆ ತುತ್ತಾಗಿದ್ದಾರೆಯೇ ಎಂಬ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ಕಾಯಿಲೆಯ ವೈದ್ಯಕೀಯ ನಿರ್ವಹಣೆಯ ವಿಧ, ವ್ಯಕ್ತಿಯ ಆಹಾರ ಶೈಲಿ, ಆಹಾರ ಸೇವಿಸುವ ವಿಧಾನ ಇತ್ಯಾದಿಗಳನ್ನು ಆಧರಿಸಿ ಆಯಾ ರೋಗಿಗೆ ವೈಯಕ್ತಿಕ ಊಟ -ಉಪಾಹಾರ ಯೋಜನೆಯನ್ನು ವಿನ್ಯಾಸಗೊಳಿಸಲಾಗುತ್ತದೆ.

ಕಡಿಮೆ ಕೊಬ್ಬು, ಕಡಿಮೆ ಗ್ಲೈ ಸೇಮಿಕ್‌ ಇಂಡೆಕ್ಸ್‌ ಹೊಂದಿರುವ ಆಹಾರಗಳು ಮತ್ತು ಹಣ್ಣುಗಳು, ಸಂಕೀರ್ಣ ಕಾರ್ಬೊಹೈಡ್ರೇಟ್‌ ಇರುವ ಆಹಾರಗಳು ಹಾಗೂ ಹೈಪರ್‌ಇನ್ಸುಲಿನೇಮಿಯಾ ತಡೆಗಟ್ಟಲು ಆಗಾಗ ಕಿರು ಆಹಾರ ಸೇವನೆಗೆ ಆದ್ಯತೆ ನೀಡಲಾಗುತ್ತದೆ. ದಿನವೊಂದಕ್ಕೆ ಎರಡು ಬಾರಿ ಭರ್ಜರಿ ಊಟ ಮಾಡುವ ಬದಲು ಊಟ-ಉಪಾಹಾರಗಳ ನಡುವೆ 3-4 ತಾಸು ಸಮಯಾವಕಾಶ ಇರಿಸಿಕೊಂಡು 3 ಬಾರಿ ಊಟ ಮತ್ತು 2 ಬಾರಿ ಉಪಾಹಾರ ಸೇವನೆಯ ಯೋಜನೆ ಉತ್ತಮವಾಗಿರುತ್ತದೆ.

ದಿನಕ್ಕೆ ಕನಿಷ್ಠ ಕ್ಯಾಲೊರಿ ಅಗತ್ಯವು ಮಹಿಳೆಯರಿಗೆ ಸರಿಸುಮಾರು 1,200-1,500 ಕೆಸಿಎಲ್‌ ಆಗಿದ್ದರೆ ಪುರುಷರಿಗೆ 1,500-1,800 ಕೆಸಿಎಲ್‌ ಆಗಿರುತ್ತದೆ. ಇಡೀ ಧಾನ್ಯಗಳಾದ ಗೋಧಿ, ಸಿರಿಧಾನ್ಯಗಳು, ಜೋಳ, ಬಾರ್ಲಿ, ಓಟ್ಸ್‌ ಮತ್ತು ಬಾಜ್ರಾ ಮೂಲದ ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳು ಆಹಾರದಲ್ಲಿ ಇರಬೇಕು. ಜತೆಗೆ ಹೆಚ್ಚು ಕಾರ್ಬೊಹೈಡ್ರೇಟ್‌ ಇರುವ ಪಾನೀಯಗಳು, ಜ್ಯೂಸ್‌ಗಳು, ಕ್ಯಾಂಡಿಗಳು, ಚಾಕೊಲೇಟ್‌ಗಳು, ಸಂಸ್ಕರಿತ ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪವನ್ನು ವರ್ಜಿಸಬೇಕು.

ಕಾರ್ಬೊಹೈಡ್ರೇಟ್‌ ಅಧಿಕ ಪ್ರಮಾಣದಲ್ಲಿ ಇರುವ ಮೈದಾದಂತಹ ಸಂಸ್ಕರಿತ ಹಿಟ್ಟುಗಳಿಂತ ತಯಾರಿಸಿದ ಆಹಾರ, ಗೆಡ್ಡೆ ಗೆಣಸುಗಳನ್ನು ಸೇವಿಸಬಾರದು. ಪ್ರತೀ ಬಾರಿ ಊಟ-ಉಪಾಹಾರ ಸೇವಿಸಿದ ಬಳಿಕ ಕಾರ್ಬೊಹೈಡ್ರೇಟ್‌ ಲೆಕ್ಕಾಚಾರ ಹಾಕುವುದರಿಂದ ಊಟ-ಉಪಾಹಾರದ ಬಳಿಕ ರಕ್ತದಲ್ಲಿ ಸಕ್ಕರೆಯಂಶ ಎಷ್ಟು ಹೆಚ್ಚಳವಾಗಬಹುದು ಎಂಬ ಬಗ್ಗೆ ಅಂದಾಜು ಸಿಗುತ್ತದೆ. ಮಧುಮೇಹದ ಮೇಲೆ ಉತ್ತಮ ನಿಯಂತ್ರಣ ಹೊಂದಿರಬೇಕಾದರೆ ಕ್ಯಾಲೊರಿ ಸೇವನೆಯನ್ನು ಇಡೀ ದಿನಕ್ಕೆ ಹಂಚಿಹಾಕಬೇಕಾಗುತ್ತದೆ.

Advertisement

ಮಧುಮೇಹಿಯು ಇನ್ಸುಲಿನ್‌ ಇಂಜೆಕ್ಷನ್‌ ತೆಗೆದುಕೊಳ್ಳುತ್ತಿದ್ದರೆ ಇನ್ಸುಲಿನ್‌ ವಿಧ ಮತ್ತು ಡೊಸೇಜ್‌ ಆಧಾರದಲ್ಲಿ ಕಾರ್ಬೊಹೈಡ್ರೇಟ್‌ ಸೇವನೆಯನ್ನು ಇಡೀ ದಿನಕ್ಕೆ ಹಂಚಿಹಾಕಬೇಕಿರುತ್ತದೆ.

ಮೊಟ್ಟೆಯ ಬಿಳಿಭಾಗ, ಬಿಳಿ ಮಾಂಸ, ಮೀನು, ಬೇಳೆಕಾಳುಗಳು ಇತ್ಯಾದಿ ಅಧಿಕ ಜೀವಶಾಸ್ತ್ರೀಯ ಪ್ರೊಟೀನ್‌ ಮೌಲ್ಯ ಹೊಂದಿರುವ ಮೂಲಗಳಿಂದ ಪ್ರೊಟೀನ್‌ ಅಗತ್ಯವನ್ನು ಪೂರೈಸಿಕೊಳ್ಳಬೇಕಾಗಿರುತ್ತದೆ. ಇವುಗಳ ಸೇವನೆಯನ್ನು ಕೂಡ ದಿನದ ಎಲ್ಲ ಊಟ-ಉಪಾಹಾರಗಳಿಗೆ ಹಂಚಿ ಹಾಕಬೇಕಾಗಿರುತ್ತದೆ. ರೋಗಿಯ ಸಹ ಅನಾರೋಗ್ಯಗಳನ್ನು ಆಧರಿಸಿ ಇದನ್ನು ಕೂಡ ರೋಗಿ ನಿರ್ದಿಷ್ಟವಾಗಿ ಮಾಡಬೇಕಾಗುತ್ತದೆ.

ಪ್ರೊಟೀನ್‌ ಮತ್ತು ಕೊಬ್ಬನ್ನು ಅನುಮತಿ ನೀಡಲಾದ ಪಥ್ಯಾಹಾರ ಪ್ರಮಾಣದಲ್ಲಿಯೇ ತೆಗೆದುಕೊಳ್ಳಬೇಕು. ಆಹಾರದಲ್ಲಿ ಹೆಚ್ಚು ಪ್ರೊಟೀನ್‌ ಮತ್ತು ಹೆಚ್ಚು ಕೊಬ್ಬಿನಂಶ ಮತ್ತು ಕಾರ್ಬೊಹೈಡ್ರೇಟ್‌ ಇದ್ದಲ್ಲಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕ್ರಮೇಣ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಳವಾಗಲು ಕಾರಣವಾಗುತ್ತದೆ.

ಆಹಾರದಲ್ಲಿ ನಾರಿನಂಶವು ಸಲಾಡ್‌ಗಳು, ತರಕಾರಿಗಳು, ಹಸುರು ಸೊಪ್ಪು ತರಕಾರಿಗಳು ಮತ್ತು ಸಂಕೀರ್ಣ ಕಾರ್ಬೊಹೈಡ್ರೇಟ್‌ಗಳು ಹಾಗೂ ಕಡಿಮೆ ಗ್ಲೈಸೇಮಿಕ್‌ ಇಂಡೆಕ್ಸ್‌ ಹೊಂದಿರುವ ಹಣ್ಣುಗಳಿಂದ ದೊರಕುತ್ತದೆ. ನಾರಿನಂಶವು ಹೊಟ್ಟೆ ತುಂಬಿದ ಅನುಭವ ಉಂಟು ಮಾಡುತ್ತದೆಯಲ್ಲದೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ದ್ರವಾಹಾರಗಳನ್ನು ನೀರು, ಮಜ್ಜಿಗೆ, ನಿಂಬೂನೀರು, ಜೀರಿಗೆ ನೀರು ಮತ್ತು ಬಾರ್ಲಿ ನೀರಿನ ರೂಪಗಳಲ್ಲಿ ಆಗಾಗ ಸೇವಿಸಬೇಕು. ಆಗಾಗ ಮೂತ್ರ ವಿಸರ್ಜನೆ ಮತ್ತು ಬಾಯಾರಿಕೆ ಮಧುಮೇಹದ ಲಕ್ಷಣಗಳಲ್ಲಿ ಒಂದಾಗಿದ್ದು, ಆಗಾಗ ನೀರಿನಂಶ ಪೂರೈಸಿಕೊಳ್ಳುವುದರಿಂದ ಈ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

-ಅರುಣಾ ಮಲ್ಯ,

ಹಿರಿಯ ಪಥ್ಯಾಹಾರ ತಜ್ಞೆ,

ಕೆಎಂಸಿ ಆಸ್ಪತ್ರೆ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ)

Advertisement

Udayavani is now on Telegram. Click here to join our channel and stay updated with the latest news.

Next