ಪಟಾಕಿಯ ಸಿಡಿಮದ್ದು ಯಾರ ಕಣ್ಣಿಗೂ, ಬಾಳಿಗೂ ಕಿಡಿಯಾಗಿ ಬೀಳದಿರಲಿ. ಎಲ್ಲರೂ ಜೊತೆಯಾಗಿ ನಡೆಯಲು, ನಲಿಯಲು ದೀಪಾವಳಿ ನೆಪವಾಗಲಿ. ಹಣತೆಯ ಬೆಳಕು ಮನೆ-ಮನಗಳಲ್ಲೂ ಬೆಳಗಲಿ.
ಇಂದು ದೀಪಾವಳಿ. ಇದು ಬೆಳಕಿನ ಹಬ್ಬ. ಬೆರಗಿನ ಹಬ್ಬ. ಬೆಳಕು ಬೆಳದಿಂಗಳಾಗಿ ಕಾಣುವಂಥ ಬೆಡಗಿನ ಹಬ್ಬ. ಭಾರತೀಯರ ಪಾಲಿಗೆ, ಹಬ್ಬಗಳೆಂದರೆ ಕುಟುಂಬದವರೆಲ್ಲ ಒಂದೆಡೆ ಸೇರಿ, ಹೊಸಬಟ್ಟೆ ಧರಿಸಿ, ಹಬ್ಬದೂಟ ಉಂಡು, ಹಿರಿಯರನ್ನು ಸ್ಮರಿಸಿ ಸಂಭ್ರಮಿಸಲು ಸಿಗುವ ಒಂದು ಅಪರೂಪದ ಘಳಿಗೆ.
ದೀಪಾವಳಿಯೂ ಅಂಥದೇ ಮಧುರ ಕ್ಷಣಗಳ ಸಂಕಲನ. ಒಂದು ವಿಶೇಷವೆಂದರೆ ಈ ಹಬ್ಬದಲ್ಲಿ ಮನೆಯೊಳಗೆ ಮಾತ್ರವಲ್ಲ, ಹೊರಗೂ ದೀಪಗಳಿರುತ್ತವೆ. ಒಂದು ಹಣತೆಯಿಂದ ಮತ್ತೂಂದು, ಒಂದು ಸುರಸುರ ಬತ್ತಿಯಿಂದ ಹನ್ನೊಂದು ದೀಪಗಳು ಝಗ್ಗನೆ ಹೊತ್ತಿಕೊಂಡು ಕೆಲವೇ ಕ್ಷಣಗಳ ಮಟ್ಟಿಗೆ ಬೆಳದಿಂಗಳಿಗೂ ಸಡ್ಡು ಹೊಡೆದು ಗೆದ್ದಂತೆ ಬೀಗುತ್ತವಲ್ಲ- ಆ ವರ್ಣ ವೈಭವದ ಹೆಸರು ದೀಪಾವಳಿ.
ಹಿಂದೂ ಸಂಸ್ಕೃತಿಯಲ್ಲಿ, ಒಂದೊಂದು ಹಬ್ಬದ್ದೂ ಒಂದೊಂದು ಪೌರಾಣಿಕ ಸಂದರ್ಭದ ನಂಟು ಬೆಸೆದಿರುತ್ತದೆೆ. ದೀಪಾವಳಿಯೂ ಅದರಿಂದ ಹೊರತಾಗಿಲ್ಲ. ನರಕಾಸುರ ಎಂಬ ರಾಕ್ಷಸನನ್ನು ಕೃಷ್ಣ ಪರಮಾತ್ಮ ಕೊಂದು ಹಾಕಿದ. ಆ ನೆಪದಲ್ಲಿ ಲೋಕದ ಕಂಟಕವನ್ನೂ, ಕಷ್ಟವನ್ನೂ ದೂರ ಮಾಡಿದ. ನರಕಾಸುರನ ವಧೆಯಾದ, ಅಂದರೆ, ಕಷ್ಟಗಳೆಲ್ಲ ಕಣ್ಮರೆಯಾದ ಖುಷಿಯನ್ನು ಸಿಡಿಮದ್ದು ಸಿಡಿಸುವ ಮೂಲಕ ನೆನಪಿಸಿಕೊಳ್ಳಬೇಕು ಎಂಬದು, ದೀಪಾವಳಿಯೊಂದಿಗೇ ಅಡಗಿರುವ ಒಂದು ಸಂದೇಶ. ಇದಾಗಿ ಎರಡೇ ದಿನಕ್ಕೆ ಬರುವ ಬಲಿಪಾಡ್ಯಮಿಯನ್ನು, ಆ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಬಲಿ ಚಕ್ರವರ್ತಿಯ ಕಥೆಯನ್ನು, ಅವನ ತ್ಯಾಗ ಮನೋಭಾವವನ್ನು ಯಾರು ತಾನೇ ಮರೆತಾರು? “ಒಬ್ಬ ಯಃಕಶ್ಚಿತ್ ರಾಜ, ಭಗವಂತನಿಗೇ ದಾನ ನೀಡಿದ ಎಂಬ ನೆನಪಿನಲ್ಲಿ ಎಲ್ಲರೂ ಸಂಭ್ರಮಿಸಲಿ. ಅವರ ಹರ್ಷೋದ್ಗಾರ ಹರಕೆಯಾಗಿ ನನ್ನನ್ನು ಕಾಯಲಿ’ ಎಂದು ಪ್ರಾರ್ಥಿಸಿದನಂತೆ ಬಲಿ ಚಕ್ರವರ್ತಿ. ಒಂದೊಂದು ಪಟಾಕಿ ಸಿಡಿತದ ಹಿಂದೆಯೂ ಇಂಥವೇ ಕಥೆಗಳು, ಕನವರಿಕೆಗಳು…
ಈ ಹಿಂದೆ ದೀಪಾವಳಿ ಎಂಬುದು, ಕುಟುಂಬದವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸಲು ಸಿಗುತ್ತಿದ್ದ ಅನುಮಪ ಕ್ಷಣವಾಗಿತ್ತು. ಈದರೆ ಈಗ ಅದು ಬಹುತೇಕ “ಮಾರುಕಟ್ಟೆಯ ಸೇÇ’ಗಳಿಗೆ, ಸ್ಪೆಷಲ್ ಆಫರ್‌ನಲ್ಲಿ ಸಿಗುವ ಟಿ,ವಿ, ಫೋನ್‌ಗಳ ಹುಡುಕಾಟಕ್ಕೆ ಸೀಮಿತವಾಗುತ್ತಿದೆ. ನಗರ ಪ್ರದೇಶಗ ಳಲ್ಲಂತೂ ಜನ ದೀಪ ಹಿಡಿದರೂ ದ್ವೀಪಗಳಾಗಿ ಹೋಗಿದ್ದಾರೆ. ಹ್ಯಾಪಿ ದೀಪಾವಳಿ ಎನ್ನುವ ಅವರ ಧ್ವನಿ ಮೊಬೈಲ್‌ನ ಸಂದೇಶಗಳಿಗೆ, ವಿಡಿಯೋ ಕಾಲ್‌ಗಳಿಗೆ ಸೀಮಿತವಾಗಿದೆ. ಮನೆಯಲ್ಲಿ ಹಚ್ಚಿರುವ ಹಣತೆ ಬೆಳಕು ಮನೆಯಾಚೆಗೆ ಕಾಣಿಸುತ್ತಿಲ್ಲ. ದೀಪಾವಳಿ ಎಂದರೆ ಶಾಪಿಂಗ್‌ಗೆ ಸಿಗುವ ಒಂದು ನೆಪವಲ್ಲ. ಅದು ಎರಡು ದಿನ ರಜೆಯ ಸಡಗರವಲ್ಲ. ದೀಪಾವಳಿ ಎಂಬುದು ಕಿವಿಗಡಚಿಕ್ಕುವ ಪಟಾಕಿಗಳ ಸದ್ದು ಮಾತ್ರವಲ್ಲ, ಅದು ಸೆಲ್ಫಿಯಲ್ಲಿ ಫೋಟೋ ಕಳಿಸಿ ಸಂಭ್ರಮಿಸುವ ಕ್ಷಣವಷ್ಟೇ ಅಲ್ಲ. ದೀಪಾವಳಿ ಎಂದರೆ ಕಷ್ಟಗಳೆಂಬ ಕತ್ತಲೆ ಕಳೆದು ಸಂಭ್ರಮವೆಂಬ ಮತಾಪು ಬಾಳ ಆಗಸವನ್ನು ಬೆಳಗಲಿ ಎಂದು ಆಶಿಸುವ ಮಧುರ ಕ್ಷಣ. ಇಂಥದ್ದೊಂದು ಬೆಳಕಿನ ಕಿರಣ, ಎಲ್ಲರ ಬಾಳಿಗೂ ಬರಲಿ. ಬಂಧು ಬಾಂಧವರು-ಸ್ನೇಹಿತರು ಜೊತೆಯಾಗಿ ಸಂಭ್ರಮಿಸುವ ಆಪ್ತ ಹಬ್ಬವಾಗಲಿ. ಪಟಾಕಿಯ ಸಿಡಿಮದ್ದು ಯಾರ ಕಣ್ಣಿಗೂ, ಬಾಳಿಗೂ ಕಿಡಿಯಾಗಿ ಬೀಳದಿರಲಿ. ಎಲ್ಲರೂ ಜೊತೆಯಾಗಿ ನಡೆಯಲು, ನಲಿಯಲು ದೀಪಾವಳಿ ನೆಪವಾಗಲಿ. ಹಣತೆಯ ಬೆಳಕು ಮನೆ-ಮನಗಳಲ್ಲೂ ಬೆಳಗಲಿ.