ಅದೇ ಬಸ್ ಸ್ಟ್ಯಾಂಡ್‌ನ 10ನೇ ಫ್ಲಾಟ್ ಫಾರಂನಲ್ಲಿ ಕೈಯಲ್ಲೊಂದು ಮೊಬೈಲ್ ಹಿಡಿದು ಕೂತಿದ್ದೆ. ಕ್ಲಿಕ್ ಶಬ್ದದೊಂದಿಗೆ ಎರಡು ವರ್ಷದಿಂದಿನ ಫೋಟೋಗಳನ್ನು ಕೊಲ್ಯಾಜ್ ಮಾಡಿ ಗೂಗಲ್ ಕಳುಹಿಸಿತ್ತು. ಆ ಫೋಟೋಗಳನ್ನೂ ಕಣ್ಣುಗಳು ದಿಟ್ಟಿಸುತ್ತಿದ್ದವು. ಆಗಲೇ, ಅಚಾನಕ್ ಅವಳು ಅಲ್ಲೇ ಕಂಡಳು. ನನ್ನೆಡೆಗೆ ನೋಡಲು ಅವಳಿಗೆ ಆತಂಕ. ನನಗೂ ಅವಳ ಮುಖವನ್ನು ನೋಡಲಾಗಿರಲಿಲ್ಲ. ಕಂಬನಿಯುಕ್ತ ಪೂರ್ಣದೃಷ್ಟಿ ಅವಳ ಕಾಲಿನೆಡೆಗೆ ಹರಿದಿತ್ತು. ಹೌದು, ಅದೇ ಕಾಲುಗಳು. ಈಗ ಕಾಲುಂಗುರ ಇದ್ದಾವಷ್ಟೆ!.
ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಮರೆಯಲಿಕ್ಕೆ ಆಗದಷ್ಟು ಸಲ ನೋಡಿಕೊಂಡು ಬಂದಿದ್ದೆ. ಅದು ಮೊದಲ ಪ್ರೀತಿಯೇನಲ್ಲ. ಆದರೆ, ಆ ಮೂರು ವರ್ಷಗಳಲ್ಲಿ ನನ್ನ ಬದುಕಿನ ಎಲ್ಲವೂ ಅವಳಾಗಿದ್ದಳು. ಗಡಿಯಾರದ ಮುಳ್ಳಿನಂತೆ. ಸದಾ ಅವಳ ನೆರಳಾಗಿದ್ದೆ. ಕಾಲೇಜಿನ ಕಾರಿಡಾರು, ಸಾಲು ಮರಗಳ ನೆರಳು. ಚಿರುಮುರಿ ಅಂಗಡಿ, ಮನೆಯ ದಾರಿ, ಕ್ಯಾಂಪಸ್… ಇದೆಲ್ಲಕ್ಕೂ ಹೆಚ್ಚಾಗಿ ನಾನು ಅವಳನ್ನು ಹುಚ್ಚನಂತೆ ಪ್ರೀತಿಸಿದ್ದು ಇಡೀ ಕ್ಲಾಸಿಗೆ ಗೊತ್ತಿತ್ತು. ನೇರಾ ನೇರ ಅವಳಿಗೆ ಕೊನೆಯವರೆಗೂ ಹೇಳಲಿಲ್ಲ ಅನ್ನುವುದನ್ನು ಬಿಟ್ಟರೆ, ನನ್ನ ಉಸಿರಲ್ಲಿ ಅವಳ ಹೆಸರಿತ್ತು ಅನ್ನುವುದು ಅವಳಿಗೂ ಗೊತ್ತಿತ್ತು. ಪದವಿ ಮುಗಿಸಿದ ಕೊನೆಯದಿನ ಕಣ್ಣೀರು ಬಂತಾದರೂ ಭಯದ ಬಾಗಿಲು ತೆರೆದು ಪ್ರೀತಿಯ ಮಾತು ಆಚೆ ಬರಲಿಲ್ಲ.
ಇಷ್ಟಾಗಿಯೂ ಮತ್ತೆ ಒಂದು ವರ್ಷ ಅವಳ ಜಪ ಮಾತ್ರ ಬಿಡಲೇ ಇಲ್ಲ. ಆಕೆಗೆ ನನ್ನ ನೆನಪು ಇದೆಯೋ ಇಲ್ಲವೋ ಅನ್ನೋ ಪ್ರಶ್ನೆ ಎಂದೂ ಕಾಡಲೇ ಇಲ್ಲ. ಅವಳ ಸಹಪಾಠಿಗಳು ಅದಾಗಲೇ ನನ್ನ ಸ್ನೇಹಿತರಾಗಿದ್ದ ಕಾರಣ, ನನ್ನ ಹಾಜರಿ ಅಲ್ಲಿಯೂ ಇರುತ್ತಿತ್ತು.
ಅದೇನು ಕೇಡುಗಾಲವೋ ಏನೋ, ಅಂದು ನಾಲ್ಕೈದು ಸಲ ನಕ್ಕಿದ್ದಳು. ಅದಾಗಿ ಎರಡು ತಿಂಗಳು ಕಾಲೇಜಿನ ಕಡೆ ಹೋಗಲಾಗಿರಲಿಲ್ಲ. ಕೆಪಿಎಸ್ಸಿ ಎಕ್ಸಾಮ್ ಸೆಂಟರ್ ನನ್ನ ಹಳೇ ಕಾಲೇಜಾಗಿತ್ತು. ಎಕ್ಸಾಮ್ ಬರೆಯಲು ಹೋಗಿದ್ದೆ. ಕಾಕತಾಳೀಯವೋ ಏನೋ ಅವಳದ್ದೂ ಅದೇ ಸೆಂಟರ್. ಅಷ್ಟು ಜನರ ನಡುವೆ ಅವಳನ್ನೇ ಹುಡುಕಿದ ಕಣ್ಮನಗಳು ಎಂದಿನಂತೆ ಇರಲಿಲ್ಲ. ಆ ತೊಳಲಾಟ ಇಂದಿಗೂ ನನ್ನ ಅರಿವಿಗಿದೆ. ಅವಳ ಮುಖ ನೋಡಲು ಮನಸಾಗದೆ ಕಾಲನ್ನಷ್ಟೆ ನೋಡಿ ವಾಪಸ್ ಬಂದಿದ್ದೆ. ಈ ಎಲ್ಲವೂ ನೆನಪಾಗುವಷ್ಟರಲ್ಲಿ ನನ್ನ ಕಣ್ಣುಗಳು ತುಂಬಿ ಬಂದಿದ್ದವು.
ಅಷ್ಟೊತ್ತಿಗೆ ಅವಳು ಬಸ್ ಹತ್ತಿದ್ದಳು. ಬಸ್ ನಿಧಾನವಾಗಿ ಮುಂದೆ ಸಾಗುತ್ತಿತ್ತು.
-ಯೋಗೇಶ್ ಮಲ್ಲೂರು.