ಸೋನು…
ಎಂದೂ ನೆನಪಿಗೆ ಬಾರದವಳು ಇಂದೇಕೋ ತುಂಬಾ ನೆನಪಿಗೆ ಬರ್ತಿದೀಯಾ. ಕಾರಣವಿಲ್ಲದೇ ಪರಿಚಿತಳಾಗಿ, ಕಾರಣ ಹೇಳದೇ ನನ್ನ ತೊರೆದು ಹೋದಾಗಿನಿಂದ ಬದುಕೇ ಬರಿದಾಗಿದೆ, ಬರಡಾಗಿದೆ.
ಕತ್ತಲೆಯ ಬಾಳಿಗೆ ಬೆಳಕಂತೆ ಬಂದು ಈ ಒಂಟಿ ಜೀವಕ್ಕೆ ಜಂಟಿಯಾದೆ. ಸುಖ ಮತ್ತು ದುಃಖದ ಸಂದರ್ಭದಲ್ಲಿ ನನ್ನ ಕಣ್ಣೀರಿಗೆ ಆಸರೆಯಾಗಿ, ನಾನಿಡುವ ಹೆಜ್ಜೆಗಳ ಮೇಲೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ನಡೆದು ಬರುತ್ತಿದ್ದೆ. ಬದುಕಿಗೆ ರಂಗು ತುಂಬಿ ನಂತರ, ನಿರ್ದಾಕ್ಷಿಣ್ಯವಾಗಿ ಅದೇ ಪ್ರೀತಿಯನ್ನು ಕೊಂದು ಹೋದೆಯೇಕೆ?
ನಾನು ಬಡತನದ ಬೇಗೆಯಲ್ಲಿ ಬೆಂದು ಬೆಳೆದವನು. ನೀನು ಕೂಡಾ ಅಷ್ಟೇ, ಸುಖ ದುಃಖಗಳನ್ನು ಸಮನಾಗಿ ಒಂದೇ ತಟ್ಟೆಯಲ್ಲಿಟ್ಟು ಉಂಡು ಬೆಳೆದವಳು. ಬೇರೆಯವರಂತೆ ನಿನ್ನನ್ನು ಚಿನ್ನ, ಬಂಗಾರಿ, ಅಪ್ಸರೆ, ಅಪರಂಜಿ ಅದು ಇದು ಅಂತಾ ವರ್ಣನೆ ಮಾಡೋಕೆ ನನಗೆ ಗೊತ್ತಿಲ್ಲ. ಯಾಕಂದ್ರೆ ವರ್ಣನೆಗೆಂದು ಇವೆಯಲ್ಲ ಆಪದಗಳಿಗಿಂತ ಹೆಚ್ಚು ಮುದ್ದಾಗಿ ಕಾಣಿ¤à ಯ. ವಾಸ್ತವ ಹೀಗಿರುವಾಗ ನಿನಗೆ ಹೊಗಳಿಕೆಯ ಹಂಗೇಕೆ? ಚಂದಿರನನ್ನೂ ಎಷ್ಟೇ ಹೊಗಳಿದರೂ ಆತನ ಬೆಳದಿಂಗಳ ತಂಪನ್ನು ಮೀರಿಸುವ ಪದ ಸಿಗುವುದುಂಟೆ? ಅರ್ಥವಾಯ್ತಾ? ನೀನು ನನ್ನೆದೆಯ ಬೆಳದಿಂಗಳಂತೆ ಇದ್ದವಳು…
ಅವತ್ತಿನ ದಿನ ನೆನಪಿದೆಯಾ ನಿಂಗೆ? ಕಾಲೇಜಿನಿಂದ ಬಸ್‌ನಲ್ಲಿ ಬರೋವಾಗ ಅಕ್ಕ ಪಕ್ಕ ಕುಳಿತಿದ್ದೆವು. ಒಮ್ಮಿಂದೊಮ್ಮೆ ನಾನು ಭಾವುಕನಾಗಿ, ನನಗೆ ತಂದೆಯಿಲ್ಲ ತಾಯಿಯೂ ಇಲ್ಲ ಬೇರೊಬ್ಬರ ಆಶ್ರಯದಲ್ಲಿ ಬದುಕಿ ಬಾಳುತ್ತಿರುವ ಜೀವವಿದು ಎಂದಾಗ ನಿನ್ನ ಕಣ್ಣಿನಿಂದ ಜಿನುಗಿದ ಕಣ್ಣೀರ ಹನಿಯೂ ನಿನ್ನತ್ತ ಸೆಳೆಯುವಂತೆ ಮಾಡಿತ್ತು. ಸಾಲದ್ದಕ್ಕೆ ನನ್ನ ಪ್ರೀತಿಯೂ ನಿನಗೆ ದಕ್ಕದ್ದು. ಒಂದು ವೇಳೆ ದಕ್ಕಿದರೂ ಸುಖಕ್ಕಿಂತ ಹೆಚ್ಚಿಗೆ ಅದು ದುಃಖವನ್ನೇ ನೀಡುತ್ತೆ. ನನ್ನ ಮರೆತು ಸುಖವಾಗಿರೆಂದು ಕಣ್ಣೀರೊರೆಸಿಕೊಳ್ಳುತ್ತ ನೀ ನನಗೆ ಹೇಳಿದ ಸಾಂತ್ವನದ ನುಡಿಗಳು ನಿನ್ನನ್ನು ಮತ್ತೆ ಮೊದಲಿಗಿಂತ ಜಾಸ್ತಿಯೇ ಪ್ರೀತಿಸುವಂತೆ ಪ್ರೇರೇಪಿಸಿದ್ದವು.
ಇದೆಲ್ಲಾ ನಿಜವೇ ಆದರೂ, ಅದೊಂದು ದಿನ ಸ್ಪಷ್ಟ ಕಾರಣವನ್ನೇ ಹೇಳದೆ, ನಿಷ್ಕಲ್ಮಷ ಪ್ರೀತಿಯನ್ನು ನೀನು ತಿರಸ್ಕರಿಸಿ ನನ್ನಿಂದ ಬಹುದೂರ ಹೋಗಿಬಿಟ್ಟೆ. ನನ್ನುಸಿರು ನಂದುವವರೆಗೂ ನೀನೇ ನನ್ನುಸಿರೆಂದು ಒಂದೇ ಉಸಿರಿನಿಂದ ಹಲುಬುತ್ತಿರುವುದು ನಿನಗೆ ತಟ್ಟುತ್ತಿಲ್ಲವೇ ಅಥವಾ ಮುಟ್ಟುತ್ತಿಲ್ಲವೇ. ನೀನಿಲ್ಲದೆ ಬದುಕಿರಲಾರೆ. ಇನ್ನಾದರೂ ನಿನ್ನ ಮೌನ ಮಾತಾಗಲಿ..
ಇಂತಿ ನಿನ್ನ ನಿಜಪ್ರೇಮಿ
-ರಂಗನಾಥ ಎಸ್. ಗುಡಿಮನಿ