ಹೈದರಾಬಾದ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಕೂಟದ ಎರಡನೇ ಪಂದ್ಯವು ಶುಕ್ರವಾರ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ನಡುವೆ ಹೈದರಾಬಾದ್ ನಲ್ಲಿ ನಡೆಯಿತು. ಇಲ್ಲಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಬರ್ ಅಜಂ ಪಡೆಯು 81 ರನ್ ಅಂತರದ ಗೆಲುವು ಸಾಧಿಸಿದೆ. ಆದರೆ ಇದೇ ಪಂದ್ಯದಲ್ಲಿ ಬೌಂಡರಿ ಗೆರೆಯನ್ನು ನಿಗದಿತ ಸ್ಥಳಕ್ಕಿಂತ ದೂರು ತಳ್ಳಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ ನೆದರ್ಲ್ಯಾಂಡ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಬೌಂಡರಿ ರೋಪ್ ಕುಶನ್ ಸುಮಾರು 30 ನಿಮಿಷಗಳ ಆಟದ ಕಾಲ ನಿಗದಿತ ಸ್ಥಳಕ್ಕಿಂತ ಹೊರಕ್ಕೆ ಬಂದಿತ್ತು. ಇದು ಎಂಸಿಸಿ ನಿಯಮಕ್ಕೆ ವಿರುದ್ದವಾಗಿದೆ.
ಒಂದು ವೇಳೆ ಅದೇ ಜಾಗದಲ್ಲಿ ಸಿಕ್ಸರ್ ಅಥವಾ ಬೌಂಡರಿ ಲೈನ್ ಸನಿಹದಲ್ಲಿ ಕ್ಯಾಚ್ ಔಟ್ ಆಗಿದ್ದರೆ ವಿದಾದಕ್ಕೆ ಕಾರಣವಾಗುತ್ತಿತ್ತು. ಅಲ್ಲದೆ ಒಂದು ಸಮಯದಲ್ಲಿ ಪಾಕ್ ಫೀಲ್ಡರ್ ನಿಗದಿತ ಬೌಂಡರಿ ಗೆರೆ ಮತ್ತು ಹೊರಹೋಗಿರುವ ಕುಶನ್ ನಡುವಿನ ಜಾಗದಲ್ಲಿ ನಿಂತಿದ್ದರು. ಒಂದು ವೇಳೆ ಫೀಲ್ಡರ್ ಅಲ್ಲಿಯೇ ಕ್ಯಾಚ್ ಹಿಡಿದಿದ್ದರೆ ಅಥವಾ ಬೌಂಡರಿ ತಡೆದಿದ್ದರೆ ಅದು ದೊಡ್ಡ ವಿವಾದವಾಗುತ್ತಿತ್ತು. ಬೌಂಡರಿ ರೋಪ್ ಹೊರಗೆ ಹೋಗಿದ್ದು 21ನೇ ಓವರ್ ನ ಐದನೇ ಎಸೆತದ ವೇಳೆ ಅಧಿಕಾರಿಗಳು ಗಮನಿಸಿದರು. ಬಳಿಕ ಅದನ್ನು ಸುಮಾರು ಒಂದು ಅಡಿಗೂ ಹೆಚ್ಚು ಒಳಕ್ಕೆ ಎಳೆಯಲಾಯಿತು.
ಇದನ್ನೂ ಓದಿ:Fraud: ಹಾರ್ಟ್ ಸರ್ಜನ್ ಸೋಗಿನಲ್ಲಿ ಮಹಿಳೆಗೆ 7 ಸಾವಿರ ರೂ. ವಂಚನೆ
ಆಧುನಿಕ ಕ್ರಿಕೆಟ್ ನಲ್ಲಿ ಬೌಂಡರಿ ರೋಪ್ ಗೆ ಕುಶನ್ ಅಳವಡಿಸಲಾಗುತ್ದೆ. ಅದರಲ್ಲಿ ಸಾಮಾನ್ಯವಾಗಿ ಜಾಹೀರಾತುಗಳು ಇರುತ್ತದೆ. ಸಾಮಾನ್ಯವಾಗಿ ಯಾವುದೇ ಫೀಲ್ಡರ್ ಚೆಂಡನ್ನು ಗೆರೆ ದಾಟದಂತೆ ತಡೆಯುವ ವೇಳೆ ಕುಶನ್ ಹೊರಕ್ಕೆ ಹೋದರೆ ಅದನ್ನು ಮತ್ತೆ ಸರಿಪಡಿಸುತ್ತಾರೆ. ಇದು ಹಲವು ಬಾರಿ ನಡೆದಿದೆ.
ಉದ್ದೇಶಪೂರ್ವಕ ಕೃತ್ಯ?
ಶುಕ್ರವಾರದ ಪಂದ್ಯದಲ್ಲಿ ಬೌಂಡರಿ ಕುಶನ್ ಜಾಗ ಬಿಟ್ಟು ಹೇಗೆ ಹೋಗಿದೆ ಎಂದು ಖಚಿತವಾಗಿಲ್ಲ. ಅಲ್ಲದೆ ಪಾಕ್ ಫೀಲ್ಡರ್ ಗಳು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರಗಳೂ ಇಲ್ಲ. ಫೀಲ್ಡಿಂಗ್ ಸಮಯದಲ್ಲಿ ಅರಿಯದೆ ಹೀಗೆ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಆ ಜಾಗದಲ್ಲಿ ಬಾಲ್ ಬಾಯ್ ಅಥವಾ ಬೇರೆ ಯಾರೂ ಇರದೆ ಇದ್ದ ಕಾರಣ ಇದು ಗಮನಕ್ಕೆ ಬಂದಿರಲಿಲ್ಲ.
ನಿಯಮ ಏನು ಹೇಳುತ್ತದೆ?
ಎಂಸಿಸಿ ನಿಯಮ 19.3.2ರ ಪ್ರಕಾರ, ಬೌಂಡರಿ ಗುರುತು ಹಾಕುವ ಯಾವುದೇ ವಸ್ತು ನಿಗದಿತ ಸ್ಥಳಕ್ಕಿಂತ ದೂರವಿದ್ದರೆ ಆದಷ್ಟು ಶೀಘ್ರ ಅದನ್ನು ಸರಿಯಾದ ಜಾಗಕ್ಕೆ ತಂದಿರಿಸಬೇಕು. ಒಂದು ವೇಳೆ ನೆದರ್ಲ್ಯಾಂಡ್ ಬ್ಯಾಟರ್ ಹೊಡೆದ ಚೆಂಡು ನಿಗದಿತ ಸ್ಥಳ ಮತ್ತು ಕುಶನ್ ಇದ್ದ ಸ್ಥಳದ ನಡುವೆ ಬಿದ್ದರೆ ಅದನ್ನು ಬೌಂಡರಿ ಎಂದು ಪರಿಗಣಿಸಲಾಗುತ್ತದೆ. ಎಂಸಿಸಿ ನಿಯಮ 19.3.1 ಪ್ರಕಾರ ಮೂಲ ಸ್ಥಾನದಿಂದಲೇ ಬೌಂಡರಿಯನ್ನು ಪರಿಗಣಿಸಲಾಗುತ್ತದೆ.