ಸುಮ್ಮನೆ ಚಿತ್ರ ಹಾಗಿದೆ-ಹೀಗಿದೆ ಎನ್ನುವುದರ ಬದಲು, ಚಿತ್ರ ಮಾಡಿ ಮುಗಿಸಿ, ಆ ನಂತರ ಮಾತಾಡೋಣ ಅಂತ ಹೇಳಿದ್ದರಂತೆ ನಿರ್ಮಾಪಕ ಕಂ ನಾಯಕ ರವಿ. ಅದೇ ಕಾರಣಕ್ಕೆ ಅಶೋಕ್ ಕಶ್ಯಪ್, ಇದುವರೆಗೂ ತಮ್ಮ “ಧ್ವಜ’ ಚಿತ್ರದ ಬಗ್ಗೆ ಏನೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿಯುತ್ತಾ ಬಂದಿದ್ದು, ಇನ್ನೇನು ಚಿತ್ರದ ಮೊದಲ ಕಾಪಿ ಬರಬೇಕು ಎನ್ನುವಷ್ಟರಲ್ಲೇ ಮಾಧ್ಯಮದವರ ಎದುರು ತಮ್ಮ ತಂಡದ ಜೊತೆಗೆ ಕುಳಿತಿದ್ದರು ಅಶೋಕ್ ಕಶ್ಯಪ್.
ಮೊದಲು ಚಿತ್ರದ ಟ್ರೇಲರ್ ಎರಡು ಬಾರಿ ತೋರಿಸಿಯೇ ಮಾತನಾಡಿದರು ಅಶೋಕ್ ಕಶ್ಯಪ್. ತಮ್ಮ ಚಿತ್ರವು ತಮಿಳಿನ “ಕೋಡಿ’ಯ ರೀಮೇಕ್ ಎಂದು ಮುಚ್ಚುಮರೆಯಿಲ್ಲದೆ ಹೇಳಿಕೊಂಡೇ ಅವರು ಮಾತು ಪ್ರಾರಂಭಿಸಿದರು. ಅಶೋಕ್ ಕಶ್ಯಪ್‌ಗೆ ನಿರ್ಮಾಪಕ ಕಂ ನಾಯಕ ರವಿ ಅವರ ಪರಿಚಯ ಆಗಿದ್ದು “ಉಪ್ಪಿ 2′ ಚಿತ್ರದ ಸಂದರ್ಭದಲ್ಲಿ. ಆ ಚಿತ್ರಕ್ಕೆ ಅಶೋಕ್ ಕಶ್ಯಪ್ ಛಾಯಾಗ್ರಾಹಕರು. ರವಿ ಸಹಾಯ ನಿರ್ದೇಶಕರು.
ಆಗ ಶುರುವಾದ ಅವರಿಬ್ಬರ ಗೆಳೆತನ, ಈಗ ನಿರ್ಮಾಪಕ-ನಿರ್ದೇಶಕ ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದಲ್ಲಿ ರವಿಗೆ ನಾಯಕಿಯರಾಗಿ ಪ್ರಿಯಾಮಣಿ ಮತ್ತು ದಿವ್ಯಾ ಉರುಡುಗ ನಟಿಸಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಎನ್ನುತ್ತಾರೆ ಅಶೋಕ್ ಕಶ್ಯಪ್. “ನಾನು ಇದುವರೆಗೂ ಹಲವು ಆ್ಯಕ್ಷನ್ ಚಿತ್ರಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದೇನೆ. ಇದೇ ಮೊದಲ ಬಾರಿಗೆ ಪಕ್ಕಾ ಆ್ಯಕ್ಷನ್ ಸಿನಿಮಾ ನಿರ್ದೇಶಿಸಿದ್ದೇನೆ.
ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ. ರಾಜ್ಯದ ರಾಜಕೀಯ ಬೆಳವಣಿಗೆಗೆ ಹತ್ತಿರವಿರುವ ಸಿನಿಮಾ. ಈ ಸಂದರ್ಭಕ್ಕೆ ಹೇಳಿ ಮಾಡಿಸಿದ ಸಿನಿಮಾ ಎಂದರೆ ತಪ್ಪಿಲ್ಲ. ಒಬ್ಬ ಕಾರ್ಯಕರ್ತನ ಹತ್ಯೆಯ ಸುತ್ತ ಸುತ್ತುವ ಈ ಚಿತ್ರದ ಹಕ್ಕುಗಳನ್ನು ರವಿ ಸುಮಾರು ಒಂದು ವರ್ಷದ ಹಿಂದೆಯೇ ಕೊಂಡು ತಂದಿದ್ದರು. ಇದು ಯಾವುದೋ ಒಂದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಎಲ್ಲಾ ಪಕ್ಷಗಳಿಗೂ ಸಂಬಂಧಿಸಿದ್ದು’ ಎಂದರು ಅಶೋಕ್ ಕಶ್ಯಪ್.
ನಾಯಕ ರವಿಗೆ ಇಂಥದ್ದೊಂದು ಚಿತ್ರ ಆಗುತ್ತೆ ಎಂಬ ನಂಬಿಕೆಯೇ ಇರಲಿಲ್ಲವಂತೆ. “ನಿಜಕ್ಕೂ ನನಗೆ ಈ ಸಿನಿಮಾ ಆಗಬಹುದು ಎಂಬ ನಂಬಿಕೆ ಇರಲಿಲ್ಲ. ಯಾವುದೋ ವಿಷಯ ಎಲ್ಲರನ್ನೂ ಒಟ್ಟಿಗೆ ಸೇರಿಸಿ, ಚಿತ್ರ ಮಾಡಿಸಿತು. ಈ ಚಿತ್ರ ಹೇಗೆ ಬರುತ್ತದೆ ಎಂದೇ ಗೊತ್ತಿರಲಿಲ್ಲ. ನಾನು ಹೊಸಬನಾದರೂ ಅಶೋಕ್ ಕಶ್ಯಪ್, ಪ್ರಿಯಾಮಣಿಯಂತಹ ಸೀನಿಯರ್‌ಗಳು ಜೊತೆಯಾಗಿದ್ದಾರೆ. ಇನ್ನು ದಿವ್ಯ ಉರುಡುಗ ಒಂದು ಬಬ್ಲಿ ಪಾತ್ರ ಮಾಡಿದ್ದಾರೆ’ ಎಂದೆಲ್ಲಾ ವಿವರಿಸಿದರು ರವಿ.
ಅವರು ಈ ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಒಂದು ಪಾತ್ರಕ್ಕೆ ಇಷ್ಟುದ್ದ ದಾಡಿ ಬಿಟ್ಟರೆ, ಇನ್ನೊಂದು ಪಾತ್ರಕ್ಕೆ ದಾಡಿ ಬೋಳಿಸಿದ್ದಾರೆ. ಒಂದು ಪಾತ್ರದ ಚಿತ್ರೀಕರಣ ಮುಗಿದು ಗಡ್ಡ ಬೋಳಿಸಬೇಕಾದ ಸಂದರ್ಭದಲ್ಲಿ, ಅವರ ಕಣ್ಣಲ್ಲಿ ನೀರೇ ಬಂದಿತ್ತು ಎಂದು ನೆನಪಿಸಿಕೊಂಡು ನಕ್ಕರು ಅಶೋಕ್ ಕಶ್ಯಪ್. ಪ್ರಿಯಾಮಣಿಗೆ ರವಿ ಹೇಗೆ ಅಭಿನಯಿಸುತ್ತಾರೆ ಎಂಬ ಕುತೂಹಲ ಇತ್ತಂತೆ. “ಅದು ಧನುಶ್ ಮಾಡಿದ ಪಾತ್ರ.
ರವಿ ಹೇಗೆ ಮಾಡುತ್ತಾರೋ ಎಂಬ ಕುತೂಹಲ ಸಹಜವಾಗಿಯೇ ಇತ್ತು. ಆದರೆ, ರವಿ ನನಗೆ ತಮ್ಮ ಅಭಿನಯದಿಂದ ಶಾಕ್ ಕೊಟ್ಟರು. ಇದೊಂದು ಒಳ್ಳೆಯ ಪೊಲಿಟಿಕಲ್ ಡ್ರಾಮ. ತಮಿಳಿನಲ್ಲಿ ತ್ರಿಷಾ ಮಾಡಿದ ಪಾತ್ರವನ್ನು ನಾನು ಇಲ್ಲಿ ಮಾಡಿದ್ದೇನೆ. ಚಿತ್ರದಲ್ಲಿ ನನ್ನ ಹೆಸರು ರಮ್ಯ ಅಂತಿದ್ದರೂ, ರಮ್ಯ ಅವರಿಗೂ ನನ್ನ ಪಾತ್ರಕ್ಕೂ ಯಾವುದೇ ಸಂಬಂಧವಿಲ್ಲ’ ಎಂದರು. ಇನ್ನು ದಿವ್ಯ ಉರುಡುಗ ತಮ್ಮ ಪಾತ್ರದ ಜೊತೆಗೆ ಅಶೋಕ್, ಪ್ರಿಯಾಮಣಿ, ರವಿ ಮುಂತಾದವರ ಜೊತೆಗೆ ಕೆಲಸ ಮಾಡಿದ್ದಕ್ಕೆ ಖುಷಿಪಟ್ಟರು.
* ಭುವನ್