ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ, ಅಂಬಾರಿ ಖ್ಯಾತಿಯ ಎ.ಪಿ ಅರ್ಜುನ್ ನಿರ್ದೇಶಿಸಿರುವ ಮಾರ್ಟಿನ್ ಸಿನಿಮಾ ಚಿತ್ರಮಂದಿರದಲ್ಲಿ ಮಿಶ್ರ ಪ್ರತಿಕ್ರಿಯೆ ಗಳಿಸಿತ್ತು. ಧ್ರುವ ಸರ್ಜಾರ ಅವರ ಖಡಕ್ ಆಕ್ಷನ್ ಹೊಂದಿರುವ ಮಾರ್ಟಿನ್ ಚಿತ್ರ ಈಗಾಗಲೇ ಓಟಿಟಿಯಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿರುವ ಮಾರ್ಟಿನ್ ಇದೀಗ ಕಿರುತೆರೆಯಲ್ಲಿ ಬರಲು ಸಿದ್ದವಾಗಿದೆ.
ಇದೇ ಡಿಸೆಂಬರ್ 29 ರಂದು ಸಂಜೆ 4 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ʼಮಾರ್ಟಿನ್ʼ ಪ್ರಸಾರವಾಗಲಿದೆ. ಆಕ್ಷನ್ ಪ್ರಿನ್ಸ್ ಗೆ ವೈಭವೀ ಶಾಂಡಿಲ್ಯ ಅವರು ಜೋಡಿಯಾಗಿದ್ದು ಇವರಿಬ್ಬರ ಕೆಮಿಸ್ಟ್ರಿ ಈಗಾಗಲೇ ಥಿಯೇಟರ್ ವೀಕ್ಷಕರ ಮನಸೂರೆಗೊಳಿಸಿದೆ.
ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವೂ ಬರೀ ಆಕ್ಷನ್ ಅಷ್ಟೇ ಅಲ್ಲದೇ ಎಲ್ಲಾ ತರಹದ ಭಾವನೆಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ. ಧ್ರುವ ಸರ್ಜಾ ಅವರ ಅಬ್ಬರ, ಆಕ್ಷನ್, ನಟನೆ ವೀಕ್ಷಕರನ್ನು ಸೋಜುಗಗೊಳಿಸುತ್ತದೆ. ಅಚ್ಯುತ್ ಕುಮಾರ್, ಸುಕೃತ ವಾಗ್ಲೆ ಮತ್ತು ನಿಕಿತಿನ್ ಧೀರ್ ಅವರ ನಟನೆಯೂ ಮನಮುಟ್ಟುವಂತಿದೆ.
‘ಮಾರ್ಟಿನ್’ ಚಿತ್ರದಲ್ಲಿ ನಾಯಕ ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯನಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ ಆತನಿಗೆ ತಾನು ಯಾರು ಎಂಬುದೇ ನೆನಪಿರುವುದಿಲ್ಲ. ತನ್ನ ಐಡೆಂಟಿಟಿ ಏನು ಎಂಬುದನ್ನು ಹುಡುಕಿಕೊಂಡು ಹೊರಟಾಗ ಅನೇಕ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನಗೆ ಎದುರಾದ ಕಷ್ಟಗಳಿಗೆಲ್ಲ ಮಾರ್ಟಿನ್ ಎಂಬುವವನು ಕಾರಣ ಎಂಬುದು ತಿಳಿಯುತ್ತದೆ. ಹಾಗಾದರೆ ಆ ಮಾರ್ಟಿನ್ ಯಾರು? ಆತ ಎಲ್ಲಿದ್ದಾನೆ ಎನ್ನುವುದರ ಬಗ್ಗೆ ಆಸಕ್ತಿ ಇದ್ದರೆ ಈ ಸಿನಿಮಾ ಖಂಡಿತ ನೋಡಬಹುದು.