Advertisement
ಕ್ಷೇತ್ರದ ಬೀದಿಗಳು, ದೇವಾಲಯ ಸಹಿತ ಸುತ್ತಮುತ್ತಲ ಕಟ್ಟಡಗಳು ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಲಿವೆ. ವಿದ್ಯುತ್ ದೀಪಗಳ ಜತೆ ವಿವಿಧ ಆಲಂಕಾರಿಕ ವಸ್ತುಗಳು ಕೂಡ ವಿಶೇಷ ರೀತಿಯಲ್ಲಿ ಭಕ್ತರನ್ನು ಆಕರ್ಷಿಸಲಿವೆ. ದೀಪೋತ್ಸವ ಆರಂಭದ ಕಾರ್ಯಕ್ರಮವಾಗಿ ಡಿ. 2ರಂದು ಉಜಿರೆಯಲ್ಲಿ ಬೃಹತ್ ಪಾದಯಾತ್ರೆಯೂ ನಡೆಯಲಿದೆ.
ಲಕ್ಷದೀಪೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿದಿನ ರಾತ್ರಿ 9ರಿಂದ ಡಿ. 2ರಂದು ಹೊಸಕಟ್ಟೆ ಉತ್ಸವ, ಡಿ. 3ರಂದು ಕೆರೆಕಟ್ಟೆ ಉತ್ಸವ, ಡಿ. 4ರಂದು ಲಲಿತೋದ್ಯಾನ ಉತ್ಸವ, ಡಿ. 5ರಂದು ಕಂಚಿಮಾರುಕಟ್ಟೆ ಉತ್ಸವ, ಡಿ. 6ರಂದು ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ಡಿ. 5: ಸರ್ವಧರ್ಮ ಸಮ್ಮೇಳನ
ಡಿ. 5ರಂದು ಸಂಜೆ 5ಕ್ಕೆ ಅಮೃತ ವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ಜರಗಲಿದ್ದು, ಗುಜರಾತ್‌ನ ಸೂರ್ಯಪೀಠದ ಶ್ರೀ ಜಗದ್ಗುರು ಸೂರ್ಯಾಚಾರ್ಯ ಶ್ರೀ ಕೃಷ್ಣದೇವನಂದ ಗಿರಿ ಮಹಾರಾಜ್ ಉದ್ಘಾಟಿಸಲಿದ್ದು, ಶಿಕ್ಷಣ ತಜ್ಞ ಎಂ. ಮಮ್ತಾಜ್ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಜೆ.ಆರ್. ಲೋಬೊ, ಕನ್ನಡ ಕಬೀರ ಪದ್ಮಶ್ರೀ ಇಬ್ರಾಹಿಂ ಸುತಾರ, ಚಿತ್ರನಟ ಶ್ರೀಧರ್ ಉಪನ್ಯಾಸಕಾರರಾಗಿ ಭಾಗವಹಿಸಲಿದ್ದಾರೆ. ಬಳಿಕ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಟಿ.ಎಂ. ಕೃಷ್ಣ ಚೆನ್ನೈ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ. ಡಿ. 6ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.
Related Articles
ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನದ 86ನೇ ಅಧಿವೇಶನವು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ನಡೆಯಲಿದ್ದು, ಜತೆಗೆ ವಿಶೇಷ ಬೃಹತ್ ವಸ್ತು ಪ್ರದರ್ಶನ ಹಾಗೂ ಪ್ರತ್ಯೇಕ ಎರಡು ವೇದಿಕೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ದೀಪೋತ್ಸವದ ಮೆರುಗನ್ನು ಹೆಚ್ಚಿಸಲಿವೆ.
Advertisement
ವಸ್ತುಪ್ರದರ್ಶನದಲ್ಲಿ ಅನೇಕ ಮಳಿಗೆಗಳು ಜನರನ್ನು ಆಕರ್ಷಿಸಲಿವೆ. ಜತೆಗೆ ಇತರ ಅಂಗಡಿ ಮುಂಗಟ್ಟುಗಳೂ ವಿಶೇಷ ಆಕರ್ಷಣೆಗೆ ಪಾತ್ರವಾಗಲಿವೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ವ್ಯವಸ್ಥೆಗಳನ್ನು ಕ್ಷೇತ್ರದ ವತಿಯಿಂದ ಸರಕಾರದ ಸಹಯೋಗದಲ್ಲಿ ಮಾಡಲಾಗಿದೆ. ಭಕ್ತರಿಗೆ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ, ದೂರದೂರುಗಳಿಂದ ವಿಶೇಷ ಬಸ್ಸಿನ ವ್ಯವಸ್ಥೆ, ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಪೊಲೀಸ್, ಗೃಹ ರಕ್ಷಕ ಸಿಬಂದಿಯ ನೇಮಕ ಹೀಗೆ ಎಲ್ಲ ವ್ಯವಸ್ಥೆಗಳನ್ನೂ ಅಚ್ಚುಕಟ್ಟುಗೊಳಿಸಲಾಗಿದೆ. ಒಟ್ಟಿನಲ್ಲಿ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತರನ್ನು ಸ್ವಾಗತಿಸುವುದಕ್ಕೆ ಧರ್ಮಸ್ಥಳ ಕ್ಷೇತ್ರ ಪೂರ್ಣ ರೀತಿಯಲ್ಲಿ ಸಜ್ಜಾಗಿದೆ.