ಚೆನ್ನೈ: ಲಸಿತ ಮಾಲಿಂಗ ಶೈಲಿಯಲ್ಲಿ ಬೌಲಿಂಗ್ ನಡೆಸುವ ಶ್ರೀಲಂಕಾದ ಮತೀಶ ಪತಿರಣ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಈ ವರ್ಷದ ಸ್ಟಾರ್ ಬೌಲರ್. ಧೋನಿಯ ನೆಚ್ಚಿನ ಬೌಲರ್ ಕೂಡ ಹೌದು. ಚೆನ್ನೈ ಫೈನಲ್ ಪಂದ್ಯವನ್ನು ಆಡುವುದಕ್ಕೂ ಮೊದಲು ಪತಿರಣ ಕುಟುಂಬದವರನ್ನು ಭೇಟಿಯಾದ ಧೋನಿ ಸಂತಸದ ವಾತಾವರಣ ಮೂಡಿಸಿದರು. ಈ ಭೇಟಿಗೆ ಸಂಬಂಧಪಟ್ಟ ಕೆಲವು ಚಿತ್ರಗಳನ್ನು ಪತಿರಣ ಅವರ ಸಹೋದರಿ ವಿಶುಕಾ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸಿದ್ದಾರೆ.
“ನಮ್ಮ ಮಲ್ಲಿ (ಮತೀಶ) ಈಗ ಸುರಕ್ಷಿತ ಕೈಗಳಲ್ಲಿದ್ದಾನೆ. ನೀವು ಪತಿರಣ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ, ಅವರು ಯಾವತ್ತೂ ನನ್ನ ಜತೆಯಲ್ಲಿರುತ್ತಾರೆ ಎಂದು ತಾಲಾ (ಧೋನಿ)ಹೇಳಿದ್ದನ್ನು ನಮಗೆ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಇದನ್ನು ನಾವು ಕನಸಿನಲ್ಲೂ ಭಾವಿಸಿದವರಲ್ಲ…’ ಎಂದು ವಿಶುಕಾ ಬರೆದಿದ್ದಾರೆ.
ಮತೀಶ ಪತಿರಣ ಕಳೆದ ಸೀಸನ್‌ನಲ್ಲೇ ಚೆನ್ನೈ ತಂಡವನ್ನು ಸೇರಿಕೊಂಡಿದ್ದರು. ಆದರೆ ಹೆಚ್ಚಿನ ಅವಕಾಶ ಪಡೆದಿರಲಿಲ್ಲ. ಈ ಬಾರಿ ಚೆನ್ನೈ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಮುಖ್ಯವಾಗಿ ಇವರನ್ನು ಧೋನಿ ಡೆತ್ ಓವರ್‌ಗಳಲ್ಲಿ ದಾಳಿಗಿಳಿಸುತ್ತಾರೆ. ಕಪ್ತಾನನ ನಂಬಿಕೆಯನ್ನು ಪತಿರಣ ಹುಸಿಗೊಳಿಸಿಲ್ಲ. 11 ಪಂದ್ಯಗಳಿಂದ 17 ವಿಕೆಟ್ ಕೆಡವಿದ್ದಾರೆ.
“ಪತಿರಣ ಅವರನ್ನು ಶ್ರೀಲಂಕಾ ಕ್ರಿಕೆಟ್ ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳ ಬೇಕು. ಏಕದಿನ ಕ್ರಿಕೆಟ್‌ನಲ್ಲಿ ಬಹಳ ಪ್ರಯೋಜನಕ್ಕೆ ಬರಬಲ್ಲರು’ ಎಂಬುದಾಗಿ ಧೋನಿ ಇತ್ತೀಚೆಗಷ್ಟೇ ಹೇಳಿದ್ದರು.