Advertisement
ಹೌದು. ದೂರದ ಜಿಲ್ಲೆಗಳಿಂದ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳು ಪಡುತ್ತಿರುವ ಪಾಡು ದೇವರಿಗೆ ಪ್ರೀತಿ. ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಳ್ಳುವುದು ಧಾರವಾಡವನ್ನು. ಇದಕ್ಕೆ ಪೂರಕ ಶೈಕ್ಷಣಿಕ ವಾತಾವರಣ ಮತ್ತು ಸಾಂಸ್ಕೃತಿಕ ಸೊಬಗು ಇಲ್ಲಿರುವುದು ಸತ್ಯ. ಆದರೆ ವಿದ್ಯೆ ಅರಸಿ ಬರುವ ವಿದ್ಯಾರ್ಥಿಗಳಿಗೆ ಕನಿಷ್ಠ ಸೌಲಭ್ಯ ನೀಡುವ ನಿರ್ಮಿಸಿಕೊಡುವ ಸರ್ಕಾರದ ಹೊಣೆಗಾರಿಕೆಯೇ ಮಾಯವಾಗಿದ್ದು, ವಿದ್ಯಾರ್ಥಿ ನಿಲಯಗಳ ಸ್ಥಿತಿಚಿಂತಾಜನಕವಾಗಿದೆ.
Related Articles
ಉತ್ತಮ ಸಾಧನೆ ಮಾಡಬೇಕು ಎಂದುಕೊಂಡ ದೂರದ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ವಾಸ್ತವ್ಯಕ್ಕೆ ಅಗತ್ಯ ವಿದ್ಯಾರ್ಥಿ ನಿಲಯಗಳು ಲಭಿಸುತ್ತಿಲ್ಲ.
Advertisement
ಕುರಿದೊಡ್ಡಿಯಾದ ಹಾಸ್ಟೇಲ್‌ಗಳು: ಧಾರವಾಡದ ಮೆಟ್ರಿಕ್ ನಂತರದ ಹಾಸ್ಟೇಲ್‌ವೊಂದರಲ್ಲಿಯೇ (ಗೌರಿ ಶಂಕರ) ಒಂದು ಕೊಣೆಯಲ್ಲಿ 4 ಜನ ವಿದ್ಯಾರ್ಥಿಗಳು ಇದ್ದರೆ ಕೊಂಚ ಓದಬಹುದು. ಆದರೆ ಇಲ್ಲಿ 16 ವಿದ್ಯಾರ್ಥಿಗಳನ್ನು ತುಂಬಲಾಗಿದೆ. ಕೆಲಕೋಣೆಗಳಲ್ಲಿ 20 ವಿದ್ಯಾರ್ಥಿಗಳವರೆಗೂ ಇದ್ದಾರೆ. ಹೀಗಾದರೆ ಓದುವುದು ಹೇಗೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಇದು ಅಲ್ಲಿನ ಕುಡಿಯುವ ನೀರು, ಶೌಚಾಲಯ, ಆಹಾರದ ಗುಣಮಟ್ಟ ಅಷ್ಟೇಯಲ್ಲ, ಶೈಕ್ಷಣಿಕ ವಾತಾವರಣ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕರಿಯರ್ ಅಕಾಡೆಮಿಗಳ ಅಬ್ಬರ: ಧಾರವಾಡ ನಗರ ಸದ್ಯಕ್ಕೆ ಕರಿಯರ್ ಕಾರಿಡಾರ್ ಎನಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ. ಇಲ್ಲಿ ಕಳೆದ ಹತ್ತೇ ವರ್ಷದಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಪಡೆದಿದ್ದಾರೆ. ಸದ್ಯಕ್ಕೆ 50ಕ್ಕೂ ಹೆಚ್ಚು ಕರಿಯರ್ ಅಕಾಡೆಮಿಗಳಿದ್ದು, ಇಲ್ಲಿ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಮೂರು ವಿಶ್ವವಿದ್ಯಾಲಯಗಳು, ಐಐಟಿ, ಐಐಐಟಿ, ಡಿಮ್ಯಾನ್ಸ್, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಮಹಾವಿದ್ಯಾಲಯಗಳು ಹೀಗೆ ಲಕ್ಷ ಲಕ್ಷ ವಿದ್ಯಾರ್ಥಿಗಳ ಸಮೂಹವೇ ಧಾರವಾಡವನ್ನು ಆವರಿಸಿಕೊಂಡಿದೆ. 2500 ಪಿಜಿಗಳು: ಸರ್ಕಾರದ ಹಾಸ್ಟೇಲ್ ಗಳ ಕೊರತೆಯಿಂದಾಗಿ ಸದ್ಯಕ್ಕೆ ಖಾಸಗಿ ಪಿ.ಜಿ.ಗಳು,(ಪೇಯಿಂಗ್ ಗೆಸ್ಟ್‌ಹೌಸ್‌ಗಳು) ಪ್ರತ್ಯೇಕ ಬಾಡಗಿ ಕೋಣೆಗಳ ಮಾಫಿಯಾ ಇಲ್ಲಿ ಎದ್ದು ನಿಂತಿದೆ. ಸದ್ಯಕ್ಕೆ ಧಾರವಾಡ ನಗರವೊಂದರಲ್ಲಿಯೇ 2500 ಕ್ಕೂ ಅಧಿಕ ಖಾಸಗಿ ಪಿ.ಜಿ.ಗಳಿವೆ. ಬಾಡಿಗೆ ಆಸೆಗಾಗಿ ತಮ್ಮ ಮನೆಗಳನ್ನೇ ಪಿ.ಜಿ.ಗಳನ್ನಾಗಿ ಮಾಡುತ್ತಿದ್ದಾರೆ. ಇವುಗಳ ಮೇಲೆ ಮಹಾನಗರ ಪಾಲಿಕೆ ಅಥವಾ ಜಿಲ್ಲಾಡಳಿತಕ್ಕೆ ಯಾವುದೇ ಹಿಡಿತ ಕೂಡ ಇಲ್ಲವಾಗಿದೆ. ಹೀಗಾಗಿ ಬಡ ವಿದ್ಯಾರ್ಥಿಗಳಿಂದ ಇಲ್ಲಿ ವಿಪರೀತ
ಹಣ ಸುಲಿಯಲಾಗುತ್ತಿದೆ. ಬರಬೇಕಿದೆ ಹಾಸ್ಟೆಲ್ ಸಂಕಿರ್ಣ
ಸದ್ಯಕ್ಕೆ ಈ ಎಲ್ಲ ಸಮಸ್ಯೆಗಳಿಗೂ ಇರುವ ಪರಿಹಾರ ಧಾರವಾಡವನ್ನು ಶೈಕ್ಷಣಿಕ ವಲಯ ಎಂದು ಪರಿಗಣಿಸಿ ಇಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಹಾಸ್ಟೇಲ್ ಗಳು ಲಭಿಸುವಂತೆ ವ್ಯವಸ್ಥೆ ಮಾಡಿ ಕೊಡಬೇಕಿದೆ. ಇದಕ್ಕಾಗಿ ಜಿಲ್ಲಾಡಳಿತ ಈ
ಹಿಂದೆಯೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿತ್ತು. ಈ ಹಿಂದಿನ ಸರ್ಕಾರದ ಅವಧಿಯಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಹಾಸ್ಟೇಲ್ ಸಂಕೀರ್ಣ ನಿರ್ಮಾಣ ಬಗ್ಗೆ ಮತ್ತೆ ಯಾರೂ ಚಕಾರ ಎತ್ತುತ್ತಿಲ್ಲ. ಒಂದೆಡೆ ಸರ್ಕಾರದ ಹಾಸ್ಟೇಲ್‌ಗಳು ಸಿಕ್ಕುತ್ತಿಲ್ಲ. ಇನ್ನೊಂದೆಡೆ ತಿಂಗಳಿಗೆ 5000-8500 ರೂ.ಗಳ ವರೆಗೆ ಹಣ ವ್ಯಯಿಸಿ ಕಾಲೇಜು ಶಿಕ್ಷಣ ಪಡೆಯುವುದು ಬಡ ವಿದ್ಯಾರ್ಥಿಗಳಿಗೆ ಅಸಾಧ್ಯವಾಗುತ್ತಿದೆ. 10ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ನೆಲೆ
2023ನೇ ಶೈಕ್ಷಣಿಕ ಸಾಲಿನಲ್ಲಿ ಧಾರವಾಡ ಜಿಪಂ ವ್ಯಾಪ್ತಿಯಲ್ಲಿನ ಮೆಟ್ರಿಕ್ ನಂತರದ 35 ಹಾಸ್ಟೇಲ್‌ಗಳಲ್ಲಿ ಸದ್ಯಕ್ಕೆ 4456 ವಿದ್ಯಾರ್ಥಿಗಳು, 13 ವಸತಿ ಶಾಲೆಗಳಲ್ಲಿ 3179 ವಿದ್ಯಾರ್ಥಿಗಳಿದ್ದು ಒಟ್ಟು 7635 ವಿದ್ಯಾರ್ಥಿಗಳಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಅದರಂತೆ ಮೆಟ್ರಿಕ್ ಪೂರ್ವ ವಿಭಾಗದಲ್ಲಿ 25 ವಿದ್ಯಾರ್ಥಿ ನಿಲಯಗಳಿದ್ದು ಇಲ್ಲಿ 1195 ವಿದ್ಯಾರ್ಥಿಗಳು, 4 ಖಾಸಗಿ ಅನುದಾನಿತ ಹಾಸ್ಟೇಲ್‌ಗಳಲ್ಲಿ 615 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ನಾವು ಓದಲು ಬಂದಿದ್ದೇವೆ, ನಾಲ್ಕು ದಿನ ಪ್ರವಾಸಕ್ಕೆ ಬಂದಿಲ್ಲ. ಸದ್ಯಕ್ಕೆ ಹಾಸ್ಟೇಲ್‌ಗಳಲ್ಲಿ ಇದ್ದು ನಮಗೆ ನಿಜಕ್ಕೂ ಓದಲು ಹಿಂಸೆಯಾಗುತ್ತಿದೆ. ಕುರಿಗಳಂತೆ ಹುಡುಗರನ್ನ ತುಂಬಿದರೆ ಹೇಗೆ? ಕೂಡಲೇ ಹೊಸ ಹಾಸ್ಟೇಲ್‌ಗಳನ್ನು ನಿರ್ಮಿಸಬೇಕು.
*ಶರಣ ಬಸಪ್ಪ (ಹೆಸರು ಬದಲಿಸಿದೆ) ಧಾರವಾಡ ಜಿಲ್ಲೆ ಶೈಕ್ಷಣಿಕ ಕೇಂದ್ರ ಆಗಿರುವುದರಿಂದ ಡಿಸಿ ಗುರುದತ್ತ ಹೆಗಡೆ ಮನವಿ ಮೇರೆಗೆ ವಿಶೇಷವಾಗಿ ಧಾರವಾಡ
ಜಿಲ್ಲೆಗೆ ಹೆಚ್ಚು ವಸತಿ ನಿಲಯಗಳ ನಿರ್ಮಾಣಕ್ಕೆ ಅನುದಾನ, ಅನುಮೋದನೆ ನೀಡಲಾಗುವುದು. ಇದಕ್ಕಾಗಿ ಸಮಾಜ ಕಲ್ಯಾಣ
ಇಲಾಖೆಯ ಅಪರ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇನೆ. *ಡಾ.ಎಚ್.ಸಿ.ಮಹದೇವಪ್ಪ,
ಸಮಾಜ ಕಲ್ಯಾಣ ಸಚಿವ *ಡಾ|ಬಸವರಾಜ್ ಹೊಂಗಲ್