Advertisement

ನುಡಿಜಾತ್ರೆಗೆ ಹೆಚ್ಚಲಿದೆ ಧಾರವಾಡ ಪೇಡಾ ಉತ್ಪಾದನೆ

06:25 AM Nov 30, 2018 | |

ಧಾರವಾಡ: ಕನ್ನಡದ ನುಡಿ ಜಾತ್ರೆ “84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ಕ್ಕೆ ಧಾರಾನಗರಿ ಸಜ್ಜಾಗುತ್ತಿದೆ. ತಯಾರಿ ಎಷ್ಟರ ಮಟ್ಟಿಗೆ ನಡೆದಿದೆಯೋ ಗೊತ್ತಿಲ್ಲ. ಆದರೆ, ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರ ಬಾಯಿ ಸಿಹಿ ಮಾಡುವುದಕ್ಕೆ ಧಾರವಾಡದ ಫೇಡಾ ಅಂತೂ ಸಜ್ಜಾಗಿದೆ.

Advertisement

ಸಮ್ಮೇಳನದಲ್ಲಿ ಮೃಷ್ಠಾನ್ನ ಭೋಜನವನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರ ಜಂಟಿಯಾಗಿ ಸಿದ್ಧಪಡಿಸುತ್ತವೆ. ಆದರೆ, ಸಮ್ಮೇಳನಕ್ಕಾಗಿ ಬಂದವರು ತಮ್ಮೊಂದಿಗೆ ಧಾರವಾಡ ಫೇಡಾ ಕೊಂಡೊಯ್ಯುತ್ತಾರೆ ಎನ್ನುವ ಆತ್ಮವಿಶ್ವಾಸದಲ್ಲಿರುವ ಧಾರವಾಡದ ಪ್ರಸಿದ್ಧ ಫೇಡಾ ಉತ್ಪಾದಕರಾದ ಮಿಶ್ರಾ ಮತ್ತು ಠಾಕೂರ್‌ ಸಿಂಗ್‌ ಅವರು 25 ಸಾವಿರ ಕೆ.ಜಿ.ಯಷ್ಟು ಹೆಚ್ಚುವರಿ ಫೇಡಾವನ್ನು ಸಮ್ಮೇಳನದ ಸಂದರ್ಭ ತಯಾರಿಸಲು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ.

ಸದ್ಯ ಮಿಶ್ರಾ ಮತ್ತು ಠಾಕೂರ ಸಿಂಗ್‌ ಮನೆತನಗಳು ತಮ್ಮ ಮಳಿಗೆ ಸಂಖ್ಯೆಗಳನ್ನು ಹೆಚ್ಚಿಸಿಕೊಂಡು ಫ್ರಾಂಚೈಸಿ ಮಾದರಿಯಲ್ಲಿ ಫೇಡಾ ಮಾರಾಟ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಧಾರವಾಡ ಫೇಡಾ ಮಾರಾಟ ಸ್ವರೂಪವೇ ಬದಲಾಗಿದ್ದು, ವಿದೇಶಗಳಲ್ಲಿಯೂ ಫೇಡಾ ಲಭ್ಯವಾಗುತ್ತಿದೆ.

25 ಸಾವಿರ ಕೆ.ಜಿ.ಉತ್ಪಾದನೆಗೆ ಸಿದ್ಧತೆ:
ಪ್ರತಿದಿನ ರಾಜ್ಯ, ಹೊರರಾಜ್ಯಗಳು ಸೇರಿ ವಿದೇಶಗಳಿಗೂ ಧಾರವಾಡದಿಂದಲೇ ರುಚಿ ರುಚಿಯಾದ ಸ್ವಾದಿಷ್ಠ ಫೇಡಾ ರವಾನೆಯಾಗುತ್ತಿದೆ. ಧಾರವಾಡದಲ್ಲಿಯೇ ದಿನವೊಂದಕ್ಕೆ ಅಂದಾಜು 4 ಸಾವಿರ ಕೆ.ಜಿ.ಯಷ್ಟು ಫೇಡಾ ಮಾರಾಟವಾಗುತ್ತಿದೆ. ಮಿಶ್ರಾ, ಬಿಗ್‌ಮಿಶ್ರಾ ಹೆಸರಿನ ನೂರಕ್ಕೂ ಹೆಚ್ಚು ಮಳಿಗೆಗಳು ಮತ್ತು 450ರಷ್ಟು ಇತರ ಮಿಠಾಯಿ ಅಂಗಡಿಗಳಲ್ಲಿಯೂ ಫೇಡಾ ಲಭ್ಯ. ಜತೆಗೆ ಠಾಕೂರ್‌ಸಿಂಗ್‌ ಫೇಡಾ ಕೂಡ 500 ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ. ಠಾಕೂರ್‌ಸಿಂಗ್‌ನಲ್ಲಿ ಮೂವರು ಅಣ್ಣ ತಮ್ಮಂದಿರು ಬಿಳಿ, ಕೆಂಪು ಮತ್ತು ನಾಶಿಪುಡಿ ಬಣ್ಣದ ಕವರ್‌ಗಳಲ್ಲಿ ಫೇಡಾವನ್ನು ಪ್ರತ್ಯೇಕವಾಗಿಯೇ ತಯಾರಿಸುತ್ತಿದ್ದಾರೆ.

ಇದೀಗ ಜನವರಿ 4ರಿಂದ ಮೂರು ದಿನಗಳ ಕಾಲ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭ ಅಗತ್ಯವಾದ ಅಂದಾಜು 25 ಸಾವಿರ ಕೆ.ಜಿ.ಯಷ್ಟು ಫೇಡಾಕ್ಕೆ ಬೇಕಾದ ಸಾಮಗ್ರಿಗಳು, ಖುವಾ ಮತ್ತು ತಯಾರಿಕೆ, ಪ್ಯಾಕೇಟ್‌ಗಳು ಮತ್ತು ಪೂರೈಕೆಗೆ ಅಗತ್ಯವಾದ ಸಿದ್ಧತೆಯನ್ನು ಈ ಸಂಸ್ಥೆಗಳ ಮಾಲೀಕರು ಈಗಲೇ ಮಾಡಿಕೊಳ್ಳುತ್ತಿದ್ದಾರೆ.

Advertisement

ಮಳಿಗೆ ಸಿಕ್ಕರೆ ಸೂಕ್ತ:
ಇನ್ನು ಮಿಶ್ರಾ ಮತ್ತು ಠಾಕೂರ್‌ಸಿಂಗ್‌ ಫೇಡಾ ತಯಾರಕರು ತಮ್ಮ ಉತ್ಪನ್ನ ಮಾರಾಟಕ್ಕೆ ಅಗತ್ಯವಾದ ಒಂದೆರಡು ಮಳಿಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಡಳಿತ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಸಾಹಿತ್ಯ ಸಮ್ಮೇಳನ ಧಾರವಾಡ ನಗರದಲ್ಲಿ ಆಗಿದ್ದರೆ ನಮಗೆ ತೊಂದರೆ ಇರಲಿಲ್ಲ. ಆದರೆ ಸಮ್ಮೇಳನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಗಿದ್ದರಿಂದ ಹೆಚ್ಚು ಜನರು ಅಲ್ಲಿಯೇ ಜಮಾವಣೆ ಆಗುತ್ತಾರೆ. ಹೀಗಾಗಿ, ಅಲ್ಲಿ ಧಾರವಾಡ ಫೇಡಾ ಮಾರಾಟಕ್ಕೆ ಅವಕಾಶ ನೀಡಬೇಕು ಎನ್ನುತ್ತಾರೆ ದೀಪಕ್‌ ಠಾಕೂರ್‌.

ವಾರಕ್ಕೆ ಮುನ್ನ ಉತ್ಪಾದನೆ:
ಧಾರವಾಡ ಫೇಡಾ ಶತಶತಮಾನಗಳಿಂದಲೂ ತನ್ನ ರುಚಿಗಾಗಿ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿನ ಎಮ್ಮೆಯ ಸ್ವಾದಿಷ್ಟ ಹಾಲೇ ಫೇಡಾದ ರುಚಿಗೆ ಕಾರಣ. ಬಾಲಿವುಡ್‌ ತಾರೆ ಅಕ್ಷಯಕುಮಾರ್‌, ನಿರ್ದೇಶಕ ಕರಣ ಜೋಹರ್‌ ಕಳೆದ ವಾರವಷ್ಟೇ ಧಾರವಾಡ ಫೇಡಾದ ರುಚಿ ಸವಿದಿದ್ದಾರೆ. ಇನ್ನು ಧಾರವಾಡ ಫೇಡಾ, ಸಿದ್ಧಗೊಂಡ 20 ದಿನಗಳವರೆಗೂ ತನ್ನ ಸ್ವಾದಿಷ್ಠ ರುಚಿಯನ್ನು ಉಳಿಸಿಕೊಳ್ಳಬಲ್ಲದು. ಆದರೆ, ಹತ್ತು ದಿನಗಳವರೆಗೆ ಬಳಕೆಗೆ ಸೂಕ್ತ. ಹೀಗಾಗಿ, ಫೇಡಾ ತಯಾರಕರು ಸಾಹಿತ್ಯ ಸಮ್ಮೇಳನ ಆರಂಭಗೊಳ್ಳುವ ಒಂದು ವಾರ ಮುಂಚೆಯಷ್ಟೇ ಫೇಡಾವನ್ನು ಸಿದ್ಧಗೊಳಿಸಲಿದ್ದಾರೆ.

ಕರ್ನಾಟಕದ ಎಲ್ಲೆಡೆಯಿಂದಲೂ ಕನ್ನಡದ ಜಾತ್ರೆಗೆ ಸಾಹಿತ್ಯಾಸಕ್ತರು ಬರುತ್ತಾರೆ. ಆ ಸಂದರ್ಭ ಸಹಜವಾಗಿಯೇ ಧಾರವಾಡ ಫೇಡಾಕ್ಕೆ ಬೇಡಿಕೆ ಹೆಚ್ಚಲಿದ್ದು, ಉತ್ಪಾದನೆಯನ್ನು ಹೆಚ್ಚಿಸುತ್ತೇವೆ.
– ಸತ್ಯಂ ಮಿಶ್ರಾ, ಧಾರವಾಡ ಫೇಡಾ ತಯಾರಕರು.

ಕನ್ನಡದ ನುಡಿ ಹಬ್ಬಕ್ಕೆ ಖಂಡಿತವಾಗಿಯೂ ಉತ್ತಮ ಫೇಡಾ ಪೂರೈಕೆ ಮಾಡಬೇಕು. ಸಮ್ಮೇಳನಕ್ಕೆ ಇನ್ನು ಒಂದು ತಿಂಗಳ ಸಮಯವಿದ್ದರೂ, ಈಗಿನಿಂದಲೇ ಯೋಜನೆ ರೂಪಿಸಿದ್ದೇವೆ. ಒಂದು ವಾರದೊಳಗೆ ಉತ್ತಮ ಫೇಡಾ ಉತ್ಪಾದಿಸಿ ಪೂರೈಸುತ್ತೇವೆ.
– ದೀಪಕ್‌ ಠಾಕೂರ್‌, ವೈಟ್‌ ಠಾಕೂರ್‌ಸಿಂಗ್‌ ಫೇಡಾ ಮಾಲೀಕರು.

– ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next