Advertisement
ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಹಿಂದೆ ಆಗಿರುವ ಮಳೆಹಾನಿಯ ಜೊತೆಗೆ ಈಗ ಕಳೆದ ಐದು ದಿನಗಳಿಂದ ಆಗುತ್ತಿರುವ ಮಳೆಯಿಂದ ರಸ್ತೆ, ಸೇತುವೆ, ಬೆಳೆ ಸೇರಿದಂತೆ ಆಗಿರುವ ಹಾನಿಯ ಬಗ್ಗೆಯೂ ಪರಿಶೀಲನೆ ಕೈಗೊಂಡು ವರದಿ ಸಿದ್ಧಪಡಿಸುವಂತೆ ಇಲಾಖಾವಾರು ಅಧಿಕಾರಿಗಳಿಗೆ ಜಿಪಂ ಸಿಇಒ ಡಾ| ಸತೀಶ ಅವರ ಮೂಲಕ ಸೂಚನೆ ಕೊಡಲಾಯಿತು.
Related Articles
Advertisement
ಮೊದಲ ಹಂತದಲ್ಲಿ ನಡೆದ ಸಮೀಕ್ಷೆ ಜೊತೆಗೆ ಮತ್ತೂಮ್ಮೆ ಸಮೀಕ್ಷೆ ಮಾಡಿ ಆಗಿರುವ ಹಾನಿಯ ಬಗ್ಗೆ ಪಕ್ಕಾ ವರದಿ ನೀಡಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ, ಮೊದಲ ಹಂತದಲ್ಲಿ ಬಿಡುಗಡೆ ಅನುದಾನದಲ್ಲಿ ಶಾಲೆ ಹಾಗೂ ಅಂಗನವಾಡಿಗಳಿಗೆ ನೀಡಲಾಗಿದೆ. ನಂತರದಲ್ಲಿ ತಮಗೆ ಅನುದಾನ ಬಿಡುಗಡೆ ಆಗಲಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
167 ಕೊಠಡಿ ಹಾನಿ: ಮಳೆಗೆ 65 ಶಾಲೆಗಳ 167 ಕೊಠಡಿಗಳು ಹಾನಿಯಾಗಿದ್ದು, 17.53 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಬೇಕಿದೆ. ಈ ಕುರಿತು ಕ್ರಿಯಾಯೋಜನೆ ಸಹ ಸಲ್ಲಿಸಲಾಗಿದೆ. ಅಲ್ಲದೇ, ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವಂತೆ ಪೂರಕವಾಗಿ ಅಕ್ಟೋಬರ್ ತಿಂಗಳಲ್ಲಿಯ ಅ.5ರಿಂದ 20ರ ವರೆಗೆ ಪ್ರತಿ ಶಾಲೆಯಲ್ಲೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಷಯಗಳ ಪುನರಾವರ್ತನೆ ಮಾಡಲಾಗುತ್ತಿದೆ.
ಪ್ರತಿದಿನ ಶಿಕ್ಷಕರೊಬ್ಬರು ತರಗತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಮಾಹಿತಿ ನೀಡಿದರು.
ಪ್ರತಿಭಾ ಕಾರಂಜಿ ಸಂದರ್ಭದಲ್ಲಿ ಶಾಲಾ ಮಕ್ಕಳನ್ನು ಬಸ್ ಅಥವಾ ಇನ್ನಾವುದೇ ಪ್ರಯಾಣಿಕರ ವಾಹನದಲ್ಲಿ ಕರೆದೊಯ್ಯುವ ಬದಲು ಟ್ರ್ಯಾಕ್ಟರ್‌ನಲ್ಲಿ ಕರೆದೊಯ್ಯಲಾಗಿದೆ ಎಂದು ಡಿಡಿಪಿಐ ಅವರನ್ನು ಜಿಪಂ ಅಧ್ಯಕ್ಷರು ಪ್ರಶ್ನಿಸಿದರು.
ಒಂದು ವೇಳೆ ಈ ರೀತಿ ಘಟನೆ ನಡೆದಿದ್ದರೆ ತಕ್ಷಣ ಅಂತಹ ಶಿಕ್ಷರರ ವಿರುದ್ಧ ಕ್ರಮ ಕೈಗೊಳ್ಳಲು ಡಿಡಿಪಿಐ ಅವರಿಗೆ ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಸೂಚಿಸಿದರು.
ಕೃಷಿ ಹೊಂಡಕ್ಕಿಲ್ಲ 12 ಕೋಟಿ ರೂ. ಬಾಕಿ: ಈ ಬಾರಿ ಎಷ್ಟು ಜನ ರೈತರಿಗೆ ಕೃಷಿ ಹೊಂಡಗಳನ್ನು ನೀಡಿದ್ದೀರಿ ಎಂದು ಜಿಪಂ ಉಪಾಧ್ಯಕ್ಷರು ಕೃಷಿ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಇಲಾಖೆಯ ಜಂಟಿ ನಿರ್ದೇಶಕ ಎಸ್.ಎಸ್. ಅಬೀದ್ ಅವರು, ಕಳೆದ ಬಾರಿ ಗರಿಷ್ಠ ಮಟ್ಟದಲ್ಲಿ ರೈತರು ಕೃಷಿ ಹೊಂಡಗಳನ್ನು ಸ್ವತಃ ರಚಿಸಿಕೊಂಡಿದ್ದಾರೆ. ಆದ್ದರಿಂದ ಆ ರೈತರಿಗೆ ಇನ್ನೂ ಹಣ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ 12 ಕೋಟಿ ಬಾಕಿ ಹಣವನ್ನು ಕೃಷಿ ಹೊಂಡ ಮಾಡಿಕೊಂಡಿರುವ ರೈತರಿಗೆ ಪಾವತಿಸಬೇಕಿರುವ ಕಾರಣ ಈ ಬಾರಿ ಕೃಷಿ ಹೊಂಡದ ಗುರಿಯೇ ಇಟ್ಟುಕೊಂಡಿಲ್ಲ ಎಂದು ತಿಳಿಸಿದರು.
ಜಿಪಂ ಉಪಕಾರ್ಯದರ್ಶಿ ಎಸ್.ಜಿ. ಕೊರವರ ಮಾತನಾಡಿ, ಗ್ರಾಮೀಣ ಉದ್ಯೋಗ ಯೋಜನೆಯಡಿ ಗ್ರಾಮೀಣ ಬಡತನ ನಿವಾರಣೆ ಕಾರ್ಯಕ್ರಮದಲ್ಲಿ ಸರ್ಕಾರದಿಂದ ವಾರ್ಷಿಕ ಗುರಿ ನಿಗದಿಪಡಿಸಿದ್ದು, ನರೇಗಾ ಕಾರ್ಯಕ್ರಮದಡಿ ಒಟ್ಟು 16,581 ಕಾಮಗಾರಿಗಳ ಗುರಿ ಹೊಂದಲಾಗಿದೆ.
ಇಲ್ಲಿಯವರೆಗೆ 5,412 ಕಾಮಗಾರಿಗಳನ್ನು ಪೂರ್ಣಗೊಳಿಸಿ ಸೆಪ್ಟೆಂಬರ್ ಅಂತ್ಯದವರೆಗೆ ಪ್ರಗತಿ ಸಾ ಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ| ರಾಮಚಂದ್ರ ಮಡಿವಾಳರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ಯಶವಂತ್ ಮದೀನಕರ್ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸೆಪ್ಟೆಂಬರ್ ಅಂತ್ಯದವರೆಗೆ ಆಗಿರುವ ಇಲಾಖಾವಾರು ಪ್ರಗತಿ ವಿವರಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮ ಪಾಟೀಲ, ಯೋಜನಾ ನಿರ್ದೇಶಕ ದೀಪಕ್ ಮಡಿವಾಳರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.