Advertisement

Dharwad; ಲಾರಿ-ಆಟೋ ಢಿಕ್ಕಿ: ಮೂವರು ದಾರುಣ ಸಾ*ವು

05:48 PM Oct 20, 2024 | Team Udayavani |

ಧಾರವಾಡ : ಲಾರಿ ಮತ್ತು ಆಟೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಏಳು ವರ್ಷದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಇಲ್ಲಿಯ ಕೆಲಗೇರಿ ರಸ್ತೆಯ ಸಂಪಿಗೆ ನಗರದಲ್ಲಿ ರವಿವಾರ(ಅ 20) ನಡೆದಿದೆ.

Advertisement

ಬೆಳಗಿನ ಇಂಟರ್‌ಸಿಟಿ ರೈಲು ಮೂಲಕ ಬ್ಯಾಡಗಿಗೆ ಆಟೋ ಮೂಲಕ ರೈಲು ನಿಲ್ದಾಣಕ್ಕೆ ಹೊರಟಿದ್ದ ಕೆಲಗೇರಿಯ ಹಂಚಿನಮನಿ ಕುಟುಂಬದ ಇಬ್ಬರು ಮಕ್ಕಳು ಸೇರಿ ಐವರ ಪೈಕಿ ಆಟೋ ಚಾಲಕ ರಮೇಶ ಹಂಚಿನಮನಿ (35), ಹತ್ತಿರದ ಸಂಬಂಧಿ ಮರೆವ್ವ ಹಂಚಿಮನಿ (55) ಆಕೆಯ ಮೊಮ್ಮಗ ಪ್ರಣವ (7) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಆಟೋದಲ್ಲಿದ್ದ ಮರೆವ್ವನ ಸೊಸೆ ರೇಣುಕಾ (25) ಹಾಗೂ ಇನ್ನೊಬ್ಬ ಮೊಮ್ಮಗ ಪೃಥ್ವಿ (4) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ. ಇವರ ಸ್ಥಿತಿಯೂ ಗಂಭೀರವಾಗಿದೆ.

ರಸ್ತೆ ಮಧ್ಯೆ ಮಲಗಿದ್ದ ಬಿಡಾಡಿ ದನ ತಪ್ಪಿಸಲು ಹೋಗಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಟ್ರಾಫಿಕ್ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಬಿಡಾಡಿ ದನಗಳ ಕಾಟ ಜಾಸ್ತಿಯಾಗಿದೆ. ಜತೆಗೆ ಈ ರಸ್ತೆ ಮೂಲಕ ಸಾರಿಗೆ ಬಸ್ಸುಗಳು ವೇಗವಾಗಿ ಸಂಚರಿಸುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡಾಡಿ ದನ, ನಾಯಿಗಳನ್ನು ತೆರವುಗೊಳಿಸಬೇಕು. ಈ ರಸ್ತೆಯಲ್ಲಿ ವೇಗದ ಮಿತಿ ನಿಗದಿಪಡಿಸಬೇಕು. ಹೊಸ ಬಸ್ ನಿಲ್ದಾಣದಿಂದ ನರೇಂದ್ರ ಬೈಪಾಸ್ ಮೂಲಕ ಬಸ್ಸುಗಳ ಸಂಚಾರವನ್ನು ಬದಲಿಸಬೇಕೆಂದು ಕೆಲಗೇರಿ ಕೆರೆ ಬಳಿಯ ಸೇತುವೆ ಬಳಿ ರಸ್ತೆ ಬಂದ್ ಮಾಡಿ ಸಾರ್ವಜನಿಕರು ಐದು ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next