ಧಾರವಾಡ: ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಸಮರ್ಪಿಸಬೇಕೆಂಬ ಉದಾರ ಗುಣ ಹೊಂದಿದ್ದ ನಾಟ್ಯಭೂಷಣ ನಾಡೋಜ ಏಣಗಿ ಬಾಳಪ್ಪನವರು ಕನ್ನಡ ರಂಗಭೂಮಿಯ ಸಾಕ್ಷಿ ಪ್ರಜ್ಞೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಬಿ.ಎಸ್. ಗವಿಮಠ ಹೇಳಿದರು.
ನಾಡೋಜ ಡಾ|ಏಣಗಿ ಬಾಳಪ್ಪ ಸ್ಮರಣಾರ್ಥ ದತ್ತಿ ಅಂಗವಾಗಿ ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ನಗರದ ಕವಿಸಂನಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಹಾಗೂ ರಂಗ ಗೌರವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಏಣಗಿ ಬಾಳಪ್ಪನವರು ತಮ್ಮ ವೃತ್ತಿ ಬದುಕಿನ ಬಹುತೇಕ ದಿನಗಳನ್ನು ಚಿಕ್ಕೋಡಿ ಶಿವಲಿಂಗ ಶಾಸ್ತ್ರಿಗಳಲ್ಲಿ ಕಳೆದರು. ಬಾಳಪ್ಪನವರು ಸ್ತ್ರೀ ಪಾತ್ರಗಳಲ್ಲಿ ಹೆಸರು ಗಳಿಸಿ ನಾಲ್ಕಾರು ಕಂಪನಿಗಳಲ್ಲಿ ದುಡಿದರೂ ವೃತ್ತಿಯಲ್ಲಿ ಸ್ಥಿರತೆ ಸಾಧಿಸಲಿಲ್ಲ.
1946ರಲ್ಲಿ ತಮ್ಮದೇ ಆದ ಕಲಾ ವೈಭವ ನಾಟ್ಯ ಸಂಘ ಕಟ್ಟಿ ಹೊಸ ಕಲಾ ಪ್ರಕಾರ ಹುಟ್ಟು ಹಾಕಿದರು. ನಾಡೋಜ ಏಣಗಿ ಬಾಳಪ್ಪನವರು ಅಂದಿನ ವೃತ್ತಿರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ನಡುವಿನ ಕಂದಕವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಬಾಳಪ್ಪನವರು ಓದಿದ್ದು ಕಡಿಮೆ. ಆದರೆ ಅವರಲ್ಲಿ ಅಪಾರವಾದ ಲೋಕಾನುಭವ, ಜೀವನಾನುಭವ ಹಾಗೂ ವ್ಯವಹಾರಿಕ ಜಾಣ್ಮೆ ಇತ್ತು. ಅವರಿಗೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದವು ಎಂದರು.
ಡಾ|ಪ್ರಕಾಶ ಗರುಡ ರಂಗ ಗೌರವ ಸ್ವೀಕರಿಸಿ, ಮಾತನಾಡಿದರು. ಇದೇ ಸಂದರ್ಭದಲ್ಲಿ ರಂಗ ಕಲಾವಿದರಾದ ಸುನಂದಾ ಹೊಸಪೇಟೆ, ಬಸವರಾಜ ಬೆಂಗೇರಿ ಅವರನ್ನು ಸನ್ಮಾನಿಸಲಾಯಿತು. ಕವಿಸಂ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ| ಏಣಗಿ ಬಾಳಪ್ಪನವರ ಹಾಗೂ ಗರುಡ ಸದಾಶಿವರಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ
ನಿರೂಪಿಸಿದರು. ಡಾ|ಧನವಂತ ಹಾಜವಗೋಳ ವಂದಿಸಿದರು.