Advertisement

ಇಂದಿನಿಂದ ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ

09:01 PM Nov 18, 2022 | Team Udayavani |

ಬೆಂಗಳೂರು: ಪರಂಪರಾಗತ ಆಚಾರ ವಿಚಾರಗಳು, ಸಂಸ್ಕೃತಿ-ಸಾಹಿತ್ಯ ಪ್ರಕಾರಗಳ ಜತೆಗೆ ಈ ನಾಡಿನ ಕಲೆಗಳಾದಿಗಳು ಒಂದೆಡೆ ಕೇ೦ದ್ರೀಕೃತವಾಗುವ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ನ.19ರಿಂದ ನ.23ರವರೆಗೆ ನಾಡಿನ ಗಣ್ಯರು, ವಿದ್ವಾಂಸರು ಹಾಗೂ ಕಲಾವಿದರ ಸಹಭಾಗಿತ್ವದಲ್ಲಿ ಲಕ್ಷದೀಪೋತ್ಸವ ನೆರವೇರಲಿದೆ.

Advertisement

ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನೆರವೇರಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ದೇವಸ್ಥಾನ, ಮುಖ್ಯದ್ವಾರ ಸಹಿತ ದೇವಳದ ನಾಲ್ಕು ಸುತ್ತಿನಲ್ಲಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ವಿಶೇಷ ಆಕರ್ಷಣೆಯಾಗಿ ಈ ಬಾರಿ ಧರ್ಮಸ್ಥಳ ಶ್ರೀ.ಧ.ಮಂ. ಶಾಲಾ ಮೈದಾನದಲ್ಲಿ ವಸ್ತುಪ್ರದರ್ಶನ ಮಳಿಗೆಗಳು ಸಿದ್ಧವಾಗಿವೆ.

ಮಂಜುನಾಥ ಸ್ವಾಮಿಗೆ ಪಂಚ ಉತ್ಸವಗಳು:
ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಧರ್ಮಾಧಿಕಾರಿ ಉಪಸ್ಥಿತಿಯಲ್ಲಿ ಇಂದು ಹೊಸ ಕಟ್ಟೆ ಉತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ನಾಳೆ ಕೆರೆ ಕಟ್ಟೆ ಉತ್ಸವ, ನ.21ರಂದು ಲಲಿತೋದ್ಯಾನ ಉತ್ಸವ ಹಾಗೂ ಲಲಿತಕಲಾ ಗೋಷ್ಠಿ, ನ.22ರಂದು ಕಂಚಿಮಾರು ಕಟ್ಟೆ ಉತ್ಸವ ಹಾಗೂ ಸರ್ವಧರ್ಮ ಸಮ್ಮೇಳನ, ನ.23ರಂದು ಗೌರಿಮಾರುಕಟ್ಟೆ ಉತ್ಸವ ಹಾಗೂ ಸಾಹಿತ್ಯ ಸಮ್ಮೇಳನ ಮತ್ತು ನ.24ರಂದು ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ವೈಭವದಿಂದ ನೆರವೇರಲಿದೆ.

ನ.22ರಂದು ಧರ್ಮಸ್ಥಳ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನವನ್ನು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ನ.23ರಂದು ನಡೆಯುವ ಸಾಹಿತ್ಯ ಸಮ್ಮೇಳನವನ್ನು ರಾಷ್ಟ್ರಪ್ರಶಸ್ತಿ ವಿಜೇತ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಬೆಂಗಳೂರು ಉದ್ಘಾಟಿಸಲಿರುವರು.

ಇಂದು ವಸ್ತು ಪ್ರದರ್ಶನ ಉದ್ಘಾಟನೆ:
ಲಕ್ಷದೀಪೋತ್ಸವದ ಪ್ರಮುಖ ಕೇಂದ್ರಬಿಂದು ವಸ್ತು ಪ್ರದರ್ಶನವಾಗಿದ್ದು, ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆಯೋಜಿಸಲಾಗಿದ್ದು, ಸರ್ಕಾರಿ ವಿವಿಧ ಇಲಾಖೆಗಳಾದ ಆರೋಗ್ಯ, ಅರಣ್ಯ, ಕೃಷಿ, ರೇಷ್ಮೆ, ಹೈನುಗಾರಿಕೆ ಮಳಿಗೆಗಳೂ ಸೇರಿ ಬ್ಯಾಂಕ್‌ಗಳು, ವಾಣಿಜ್ಯ, ಕೈಗಾರಿಕೆಗೆ ಸಂಬಂಧಿಸಿದ 200ಕ್ಕೂ ಹೆಚ್ಚು ಮಳಿಗೆಗಳಿವೆ. ಇಂದು(ನ.19) ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆಯಲ್ಲಿ ಶಾಸಕ ಹರೀಶ್‌ ಪೂಂಜ ವಸ್ತುಪ್ರದರ್ಶನ ಉದ್ಘಾಟಿಸಲಿದ್ದಾರೆ. ವಸ್ತುಪ್ರದರ್ಶನ ಮಂಟಪದಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next