ಬೆಳ್ತಂಗಡಿ: ಕೆಎಸ್‌ಆರ್ ಟಿಸಿಯು ದ.ಕ. ಜಿಲ್ಲೆಯ ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಬಸ್ ನಿಲ್ದಾಣಗಳಲ್ಲಿ ನಾಣ್ಯ ಹಾಕಿ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲು ಉದ್ದೇಶಿಸಿದ್ದು, ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನೀರಿನ ಘಟಕ ಆರಂಭಗೊಂಡಿದೆ.
ಆದರೆ ಪ್ರಾಯೋಗಿಕ ಹಂತದಲ್ಲಿ ಘಟಕದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಮುಂದಿನ ವಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಘಟಕವನ್ನು ಕಾರ್ಯಗತಗೊಳಿಸುವ ಚಿಂತನೆ ನಡೆದಿದೆ. ಅತಿ ಹೆಚ್ಚು ಬಸ್‌ಗಳು, ಪ್ರಯಾಣಿಕರು ಆಗಮಿಸುವ ನಿಲ್ದಾಣವಾಗಿ ಗುರುತಿಸಿಕೊಂಡಿರುವ ಧರ್ಮಸ್ಥಳ ನಿಲ್ದಾಣಕ್ಕೆ ಇಂತಹ ಘಟಕ ಅಗತ್ಯವಾಗಿದ್ದು, ಪ್ರಯಾಣಿಕರ ಜತೆಗೆ ಕೆಎಸ್‌ಆರ್‌ಟಿಸಿ ಸಿಬಂದಿಗೂ ಇದು ಅನುಕೂಲವಾಗಲಿದೆ.
ಬಿಪಿಸಿಎಲ್‌ನ ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡಲಾಗಿದೆ ಎಂದು ಘಟಕದಲ್ಲಿ ಬರೆಯಲಾಗಿದ್ದು, ನಾಣ್ಯಗಳ ಮೂಲಕ ಅದರಲ್ಲಿ ಸಂಗ್ರಹಗೊಂಡ ಹಣವನ್ನು ಕೆಎಸ್‌ಆರ್‌ಟಿಸಿ ಅದರ ನಿರ್ವಹಣೆಗಾಗಿ ಬಳಸಿಕೊಳ್ಳಲಿದೆ. ಇಲ್ಲಿ ಜನರಿಗೆ 2 ರೂ.ಗೆ 1 ಲೀ. ನೀರು ಹಾಗೂ 1 ರೂ.ಗೆ ಅರ್ಧ ಲೀ. ನೀರು ಲಭಿಸಲಿದೆ.
ಕ್ಷೇತ್ರದಲ್ಲಿ ಬೆಳಗ್ಗೆ 6ರಿಂದಲೇ ದೇವರ ದರ್ಶನ ಆರಂಭವಾಗುವುದರಿಂದ ಭಕ್ತರು ಸಾಕಷ್ಟು ಸಂಖ್ಯೆಯ ವಸತಿ ನಿಲಯಗಳಲ್ಲಿ ಉಳಿದುಕೊಂಡಿದ್ದು, ಕಳೆದ ಮೂರು ದಿನಗಳಲ್ಲಿ ವಸತಿ ನಿಲಯಗಳು ಕೂಡ ಭರ್ತಿಯಾಗಿದ್ದವು. ಕ್ಷೇತ್ರದಲ್ಲಿ 30ರಿಂದ 35 ಸಾವಿರದಷ್ಟು ಮಂದಿಗೆ ಉಳಿದುಕೊಳ್ಳುವ ವ್ಯವಸ್ಥೆಯಿದೆ. ಪ್ರಸ್ತುತ ವರ್ಷಾಂತ್ಯದ ಸಮಯವಾದುವರಿಂದ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಕ್ಷೇತ್ರದ ಮೂಲಗಳು ತಿಳಿಸಿವೆ.
ಪ್ರಾಯೋಗಿಕ
ಪ್ರಸ್ತುತ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ನೀರಿನ ಘಟಕವನ್ನು ತೆರೆಯಲಾಗಿದ್ದು, ಆದರೆ ಅದರಲ್ಲಿ ಗೊಂದಲಗಳು ಕಂಡುಬಂದಿವೆ. ಅದನ್ನು ಹೊರರಾಜ್ಯದವರು ಅನುಷ್ಠಾನಗೊಳಿಸಿರುವುದರಿಂದ ಅವರಿಗೆ ಈ ಕುರಿತು ತಿಳಿಸಲಾಗಿದ್ದು, ವಾರದೊಳಗೆ ಪೂರ್ಣ ಪ್ರಮಾಣದಲ್ಲಿ ಘಟಕ ಆರಂಭಗೊಳ್ಳುವ ಸಾಧ್ಯತೆ ಇದೆ.
– ಶಿವರಾಮ್ ನಾಯ್ಕ
ಮ್ಯಾನೇಜರ್, ಧರ್ಮಸ್ಥಳ ಡಿಪೋ