Advertisement

Badagannur: ಆರೋಗ್ಯ ಕೇಂದ್ರ, ಆ್ಯಂಬುಲೆನ್ಸ್‌ಗೆ ಗ್ರಾಮಸ್ಥರ ಬೇಡಿಕೆ

02:59 PM Dec 29, 2024 | Team Udayavani |

ಬಡಗನ್ನೂರು: ಗ್ರಾಮ ಪಂಚಾಯತ್‌ ಚುನಾಯಿತ ಮಂಡಳಿ ಮತ್ತು ಅಧಿಕಾರಿ ವರ್ಗವು ಭ್ರಷ್ಟಾಚಾರಕ್ಕೆ ಯಾವುದೇ ಆಸ್ಪದ ಕೊಡದೆ, ಪಕ್ಷ ಭೇದವಿಲ್ಲದೆ ಗ್ರಾಮದಲ್ಲಿ ಹಲವು ಅಭಿವೃದ್ಧಿಗಳನ್ನು ಮಾಡುವ ಮೂಲಕ ಮಾದರಿಯಾಗಿದೆ ಎಂದು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ ಘಟನೆ ಒಳಮೊಗ್ರು ಗ್ರಾಮಸಭೆಯಲ್ಲಿ ನಡೆಯಿತು.

Advertisement

ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ನವೋದಯ ರೈತ ಸಭಾಭವನದಲ್ಲಿ ಗ್ರಾಮಸಭೆ ನಡೆಯಿತು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ನಿತೀಶ್‌ ಕುಮಾರ್‌ ಶಾಂತಿವನ ಅವರು ಸರಕಾರದ ಅನುದಾನಗಳನ್ನು ಉತ್ತಮವಾಗಿ ಬಳಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲಾಗಿದೆ. ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಡೆ ಉತ್ತಮವಾಗಿದೆ ಎಂದರು. ಇದಕ್ಕೆ ಗ್ರಾಮಸ್ಥರು ಚಪ್ಪಾಳೆ ಮೂಲಕ ಅನುಮೋದನೆ ನೀಡಿದರು. ಮೆಸ್ಕಾಂ ಗ್ರಾಮಾಂತರ ಉಪವಿಭಾಗದ ಕುಂಬ್ರ ಜೆಇ ರವೀಂದ್ರ ಅವರ ಕಾರ್ಯವೈಖರಿಯನ್ನೂ ಅಭಿನಂದಿಸಲಾಯಿತು.

ಪ್ರಾ.ಆರೋಗ್ಯ ಕೇಂದ್ರ ಬೇಡಿಕೆ
ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆವಶ್ಯಕತೆ ತುಂಬಾ ಇದೆ. ಹಲವು ವರ್ಷಗಳಿಂದ ಬೇಡಿಕೆ ಈಡೇರಿಲ್ಲ ಎಂದು ಕೆ.ಮಹಮ್ಮದ್‌ ಅಡ್ಕ ಹೇಳಿದರು. ಗ್ರಾಮಸ್ಥರು ಧ್ವನಿಗೂಡಿಸಿದರು. ಗ್ರಾಮಕ್ಕೆ ಒಂದು ಸುಂದರ ಉದ್ಯಾನವನ ಹಾಗೂ 108 ಆ್ಯಂಬುಲೆನ್ಸ್‌ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆಯೂ ಕೇಳಿಬಂತು.

ಆನ್‌ಲೈನ್‌ ವ್ಯವಸ್ಥೆ ಸಮಸ್ಯೆ
ಶಾಲಾ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ಅರ್ಜಿಗಳನ್ನು ಆನ್‌ಲೈನ್‌ನಲ್ಲೇ ತುಂಬಬೇಕಾಗಿರುವುದರಿಂದ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ನಿಂದ ವಂಚಿತರಾಗುತ್ತಿದ್ದಾರೆ ಅರ್ಜಿ ತುಂಬುವಾಗ ಆಗುವ ಎಡವಟ್ಟುಗಳಿಂದಾಗಿ ಕೆಲವೊಂದು ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಬರುತ್ತಿಲ್ಲ. ಆದ್ದರಿಂದ ಮೊದಲಿನ ಅರ್ಜಿ ಸಲ್ಲಿಕೆ ಮಾದರಿ ಮತ್ತೆ ತರಬೇಕು ಎಂದು ಶಿಕ್ಷಕ ರಾಮಣ್ಣ ರೈ ಆಗ್ರಹಿಸಿದರು.

ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರಾದ ಶೀನಪ್ಪ ನಾಯ್ಕ, ವಿನೋದ್‌ ಶೆಟ್ಟಿ ಮುಡಾಲ, ಮಹೇಶ್‌ ರೈ ಕೇರಿ, ಸಿರಾಜುದ್ದೀನ್‌ ಕುಂಬ್ರ, ಲತೀಫ್ ಕುಂಬ್ರ, ರೇಖಾ ಯತೀಶ್, ವನಿತ ಕುಮಾರಿ, ಚಿತ್ರಾ ಬಿ.ಸಿ, ಸುಂದರಿ, ಶಾರದಾ ಇದ್ದರು. ಪಿಡಿಒ ಮನ್ಮಥ ಅಜಿರಂಗಳ, ಕಾರ್ಯದರ್ಶಿ ಜಯಂತಿ, ಸಿಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಲೋಕನಾಥ ಉಪಸ್ಥಿತರಿದ್ದರು.

Advertisement

ಚರ್ಚೆಯಾದ ಇತರ ವಿಷಯಗಳು
– ಬೆಳಗ್ಗೆ 7.30ರ ಬಳಿಕ ಕೆಲವೊಂದು ಬಸ್‌ ನಿಲ್ಲಿಸದೆ ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.
– ಪರ್ಪುಂಜದಲ್ಲಿ ಪ್ರಯಾಣಿಕರಿಗೆ ಬಸ್‌ ತಂಗುದಾಣದ ಅಗತ್ಯವಿದೆ.
– ಕೇರಳ ಮಾದರಿಯಲ್ಲೇ ಕರ್ನಾಟಕದಲ್ಲೂ ಬ್ಯಾಟರಿ ವಾಹನಗಳಿಗೆ ಚಾರ್ಜಿಂಗ್‌ ಪಾಯಿಂಟ್‌ ನಿರ್ಮಿಸಬೇಕು.
– ಸರಕಾರಿ ಶಾಲೆಯ ಜಾಗವು ಆಯಾ ಶಾಲೆಯ ಹೆಸರಿನಲ್ಲೇ ಆರ್‌ಟಿಸಿ ಆಗಬೇಕು.
– ರಸ್ತೆಬದಿ 3 ಮೀಟರ್‌ ಬಿಟ್ಟು ವಿದ್ಯುತ್‌ ಕಂಬ ಹಾಕಲು ಆಗ್ರಹ

ಬುದ್ಧಿಮಾಂದ್ಯ ಮಕ್ಕಳಿಗೂ ಸವಲತ್ತು ಸಿಗಲಿ
ದೈಹಿಕವಾಗಿ ವಿಕಲತೆಯನ್ನು ಹೊಂದಿರುವ ವಿಶೇಷ ಚೇತನ ಮಕ್ಕಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಿಗುವ ಸವಲತ್ತುಗಳು ಬುದ್ಧಿಮಾಂದ್ಯ ಮಕ್ಕಳಿಗೂ ಸಿಗುವಂತಾಗಬೇಕು ಎಂದು ಸಂತೋಷ್‌ ಭಂಡಾರಿ ಚಿಲ್ಮೆತ್ತಾರು ಒತ್ತಾಯಿಸಿದರು. ವಿಶೇಷ ಚೇತನ ಮಕ್ಕಳ ಆರೋಗ್ಯ ತಪಾಸಣೆ ಕ್ಯಾಂಪ್‌ ಮಂಗಳೂರು ಬದಲು ಗ್ರಾಮ ಮಟ್ಟದಲ್ಲಿ ಆಗಬೇಕು ಎಂದು ರಾಮಣ್ಣ ರೈ ಮನವಿ ಮಾಡಿದರು.

ಏಲಂ ಪ್ರಕ್ರಿಯೆ ಏನಾಯ್ತು?
ಪಂಚಾಯತ್‌ ಕಟ್ಟಡದ ಅಂಗಡಿ ಕೋಣೆಗಳ ಏಲಂ ಪ್ರಕ್ರಿಯೆ ಏನಾಯ್ತು ಎಂದು ಕೆ.ಮಹಮ್ಮದ್‌ ಅಡ್ಕ, ಅಝೀಜ್‌ ನೀರ್ಪಾಡಿ, ಮಹಮ್ಮದ್‌ ಬೊಳ್ಳಾಡಿ ಮತ್ತಿತರರು ಪ್ರಶ್ನಿಸಿದರು. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮಾತನಾಡಿ, ಏಲಂ ವಿಚಾರವಾಗಿ ವರ್ತಕರು ತಮ್ಮ ಸಂಕಷ್ಟವನ್ನು ಹೇಳಿಕೊಂಡು ಪಂಚಾಯತ್‌ಗೆ ಮನವಿ ಸಲ್ಲಿಸಿದ್ದರು. ಆ ಮನವಿಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಂಡ ಪ್ರಕಾರ, ಪಂಚಾಯತ್‌ಗೆ ಯಾವುದೇ ನಷ್ಟವಾಗದಂತೆ ನೋಡಿಕೊಂಡು ಪ್ರಸ್ತುತ ಇರುವ ಬಾಡಿಗೆ ದರವನ್ನು ಒಂದು ಪಟ್ಟು ಹೆಚ್ಚಿಸುವ ಮೂಲಕ ಮಾನವೀಯ ದೃಷ್ಟಿಯಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು. 3 ವರ್ಷದ ಬಳಿಕ ಮುಂದಿನ ಏಲಂ ಎಂಬ ಪಿಡಿಒ ಮಾತಿಗೆ ಸಹಮತ ವ್ಯಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next