ಇತ್ತೀಚೆಗಷ್ಟೇ “ಚಾಣಾಕ್ಯ’ ಎಂಬ ಚಿತ್ರ ಮಾಡಿದ್ದ ಧರ್ಮ, ಇದೀಗ ಸದ್ದಿಲ್ಲದೆ ಇನ್ನೊಂದು ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತವು ಸದ್ದಿಲ್ಲದೆ ನಡೆದಿದ್ದು, ಚಿತ್ರೀಕರಣ ಸಹ ಶುರುವಾಗಿದೆ. ಅಂದಹಾಗೆ, ಈ ಚಿತ್ರದ ಹೆಸರು “ವಿವಿಕ್ತ’. “ವಿವಿಕ್ತ’ ಚಿತ್ರವನ್ನು ನಿರ್ದೇಶಕ ಗಡ್ಡ ವಿಜಿ ಅವರ ಕ್ಯಾಂಪ್‌ನ ರಘು ಅಪ್ಪು ಎನ್ನುವವರು ನಿರ್ದೇಶಿಸುತ್ತಿದ್ದಾರೆ.
ಇದು ಅವರ ನಿರ್ದೇಶನದ ಮೊದಲ ಚಿತ್ರ. ಎರಡು ವರ್ಷಗಳ ಹಿಂದೆ ನಡೆದ ಒಂದು ನೈಜ ಘಟನೆಯನ್ನಾಧರಿಸಿ ಈ ಕಥೆ ಮಾಡಿದ್ದಾರೆ. ಇಲ್ಲಿ ನಾಯಕಿಯ ಹೆಸರು ಯುಕ್ತ. ಯುಕ್ತ ಆಗಿದ್ದವಳು ಕ್ಲೈಮ್ಯಾಕ್ಸ್ ಹೊತ್ತಿಗೆ “ವಿವಿಕ್ತ’ ಆಗುವುದು ಹೇಗೆ ಮತ್ತು ಏಕೆ ಎನ್ನುವುದು ಚಿತ್ರದ ಕಥೆಯಂತೆ. ಆ ಕಥೆಯನ್ನು ಇವತ್ತಿನ ಪ್ರೇಕ್ಷಕರ ಮನಮುಟ್ಟುವಂತೆ ಚಿತ್ರಿಸುವ ಐಡಿಯಾ ಹಾಕಿಕೊಂಡಿದ್ದಾರೆ.
ಈ ಚಿತ್ರವನ್ನು ರಾಕೇಶ್ ಮತ್ತು ಭಾಸ್ಕರ್ ಎನ್ನುವವರು ನಿರ್ಮಿಸುತ್ತಿದ್ದು, ಅವರಿಗೆ ಚಿತ್ರದ ಕ್ಲೈಮ್ಯಾಕ್ಸ್ ಬಹಳ ಇಷ್ಟವಾಯಿತಂತೆ. ಅದೇ ಕಾರಣಕ್ಕೆ ಅವರು ಚಿತ್ರಕ್ಕೆ ಹಣ ಹಾಕುವುದಕ್ಕೆ ಮುಂದೆ ಬಂದಿದ್ದಾರೆ. ಇಲ್ಲಿ ಧರ್ಮ ಕೀರ್ತಿರಾಜ್ ಜೊತೆಗೆ ಪ್ರತಾಪ್ ನಾರಾಯಣ್ ಸಹ ಇದ್ದಾರೆ. “ಬೆಂಕಿಪೊಟ್ಣ’, “ಐ ಆ್ಯಮ್ ಪ್ರಗ್ನಂಟ್’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಪ್ರತಾಪ್‌ಗೆ ಇಲ್ಲಿ ಎರಡನೆಯ ಹೀರೋ ಪಾತ್ರ.
ಇನ್ನು ಇವರಿಬ್ಬರಿಗೆ ನಾಯಕಿಯಾಗಿ “ಪೈಪೋಟಿ’ ಚಿತ್ರದ ಪೂಜಾ ಇದ್ದಾರೆ. ಈ ಚಿತ್ರದಲ್ಲಿ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು, ಅನಾಥ ಹುಡುಗಿಯೊಬ್ಬಳ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರೀಕರಣ ಬೆಂಗಳೂರು, ಮಡಿಕೇರಿ, ಸಾಗರ ಮುಂತಾದ ಕಡೆ ನಡೆಯಲಿದೆ.
“ವಿವಿಕ್ತ’ಗೆ ಭಾಸ್ಕರ್ ರೆಡ್ಡಿ ಅವರು ಛಾಯಾಗ್ರಹಣ ಮಾಡಿದರೆ, ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಮೂರು ದುಃಖದ ಹಾಡುಗಳು ಮತ್ತು ಒಂದು ಡ್ಯುಯೆಟ್ ಇದೆಯಂತೆ. ಗಣೇಶ್ ಸಂಗೀತ ಸಂಯೋಜಿಸಿದರೆ, ಅಭಿ ಎನ್ನುವವರು ಸಾಹಿತ್ಯ ರಚಿಸಿದ್ದಾರೆ.