Advertisement

ಧನುರ್ಮಾಸ ಅಧ್ಯಾತ್ಮ ಸಾಧನೆಯ ಪರ್ವಕಾಲ

11:19 PM Dec 22, 2020 | mahesh |

ಸಾಲು ಸಾಲು ಹಬ್ಬಗಳ ಸಡಗರ, ಸಂಭ್ರಮಗಳು ಕಡಿಮೆಯಾಗುತ್ತಿದ್ದಂತೆ ಚುಮುಚುಮು ಚಳಿ ಆರಂಭ ವಾಗಿದೆ. ಡಿಸೆಂಬರ್‌ ತಿಂಗಳಾದಿಯ ಬಳಿಕ ವಾತಾವ ರಣದ ಉಷ್ಣತೆ ಮೆಲ್ಲಮೆಲ್ಲನೆ ಕಡಿಮೆಯಾಗ ತೊಡಗಿದೆ. ಬೆಳಗ್ಗೆ ಬೇಗ ಏಳಲೊಲ್ಲೆವು ಎನ್ನುತ್ತಿವೆ ತನು -ಮನ. ಏನೋ ಒಂದು ತರಹದ ಆಲಸ್ಯ, ಖನ್ನತೆ. ಇವೆಲ್ಲದರ ನಡುವೆ ಈಗ ದೇಗುಲಗಳಲ್ಲಿ ಮುಂಜಾವದಲ್ಲಿ ಧನುರ್ಮಾಸ ಪೂಜೆಯ ಘಂಟಾನಾದ.

Advertisement

ಈ ಅವಧಿ ಸೂರ್ಯನು ಧನು ರಾಶಿಯನ್ನು ಕ್ರಮಿಸುವ ಕಾಲ. ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳ ಉತ್ತರಾರ್ಧದಿಂದ ಜನವರಿ ತಿಂಗಳ ಪೂರ್ವಾರ್ಧದಲ್ಲಿ ಬರುವ ಮಾಸ. ಚಾಂದ್ರಮಾನದ ಮಾರ್ಗಶಿರ ಮತ್ತು ಪುಷ್ಯ ಮಾಸದ ಭಾಗಗಳನ್ನೊಳಗೊಂಡ ಸೌರಮಾನದ ಧನುರ್ಮಾಸ ಶೂನ್ಯ ಮಾಸ, ಚಾಪ ಮಾಸ, ಕೋದಂಡ ಮಾಸ, ಕಾರ್ಮುಕ ಮಾಸ ಇತ್ಯಾದಿ ಪರ್ಯಾಯ ಹೆಸರುಗಳಿಂದಲೂ ಗುರುತಿಸಿಕೊಂಡಿದೆ. ಅಧ್ಯಾತ್ಮ ಸಾಧನೆಗಿದು ಪರ್ವ ಕಾಲ.

ಮಾನವರ ಒಂದು ವರ್ಷ ದೇವತೆಗಳ ಒಂದು ದಿನ. ಉತ್ತರಾಯಣ ಹಗಲಾದರೆ, ದಕ್ಷಿಣಾಯನ ರಾತ್ರಿ. ದಕ್ಷಿಣಾಯನದ ಕೊನೆಯ ಧನು ತಿಂಗಳು ದೇವ- ದೇವತೆಗಳ ಹಗಲಿನ ಬ್ರಾಹ್ಮಿ ಮುಹೂರ್ತ. ಪೂಜೆ, ಅರ್ಚನೆಗಳಿಗೆ ಪ್ರಶಸ್ತ ಕಾಲ. ಆದ್ದರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ದೇವತೆಗಳ ಬ್ರಾಹ್ಮಿ ಮುಹೂರ್ತವಾದ ಧನುರ್ಮಾಸದುದ್ದಕ್ಕೂ ಪರಮಾತ್ಮ ನನ್ನು ಅರ್ಚಿಸಿದರೆ, ಆತ ಸಕಲ ಸೌಭಾಗ್ಯಗಳನ್ನು ಅನುಗ್ರಹಿಸುವನೆಂಬ ನಂಬಿಕೆ.

ಈ ತಿಂಗಳ ಪರ್ಯಂತ ಆಸ್ತಿಕರು ಅರುಣೋದಯ ಕಾಲದಲ್ಲೇ ಎದ್ದು ಸ್ನಾನ, ನಿತ್ಯಾಹ್ನೀಕಗಳನ್ನೆಲ್ಲ ಪೂರೈಸಿ ಸೂರ್ಯೋದಯದ ಮೊದಲೇ ಪೂಜೆ ಮುಗಿಸುತ್ತಾರೆ. ಬಾನಲ್ಲಿ ನಕ್ಷತ್ರಗಳು ಮಿನುಗುತ್ತಿರುವಾಗಲೇ ನಡೆಸಿದ ಪೂಜೆ ಸಂಪೂರ್ಣ ಫ‌ಲಪ್ರದವೆಂದೂ, ವಿಳಂಬಿಸಿದಷ್ಟೂ ಫ‌ಲಕ್ಷಯವಾಗುತ್ತಾ, ಮಧ್ಯಾಹ್ನ ಪೂಜೆ ನಿಷ್ಪಲವೆಂದು ಶಾಸ್ತ್ರಗಳಲ್ಲಿ ಹೇಳಿದ್ದಾರೆ. ಈ ಮಾಸದಲ್ಲಿ ಮುಂಜಾವದಲಿ ಭಗವಂತನ ಪೂಜೆಗೈಯದಿದ್ದರೆ ಜನ್ಮಾಂತರಗಳಲ್ಲಿ ದಾರಿದ್ರ್ಯ, ಅನಾರೋಗ್ಯ ಕಾಡುವುದೆಂದು ಶಾಸ್ತ್ರಗಳು ಹೇಳಿವೆ. ಧನುರ್ಮಾಸದಲ್ಲಿ ಹಗಲಿನ ಅವಧಿಯೂ ಕಿರಿದಾಗಿರುತ್ತದೆ. ಅದಕ್ಕಾಗಿಯೇ ಇರಬಹುದು ಈ ತರಹದ ಶಾಸ್ತ್ರದ ಕಟ್ಟುಪಾಡು.

ಕೊರೆವ ಚಳಿಯಾದರೂ ನದಿ-ಕೆರೆಗಳಲ್ಲಿ ಮಿಂದರೆ ಉತ್ತಮ. ನದಿ-ತೊರೆಯತ್ತ ಗಮಿಸುವ ಒಂದೊಂದು ಹೆಜ್ಜೆಯೂ ನಮ್ಮ ಪುಣ್ಯದ ಖಾತೆಯನ್ನು ಹಿಗ್ಗಿಸುತ್ತದೆ ಎಂದು ಹೇಳುತ್ತಾರೆ. ತಣ್ಣೀರ ಸ್ನಾನ ನಮ್ಮ ದೇಹದ ಜಡತ್ವವನ್ನು ಕಿತ್ತೂಗೆದು ಹೊಸ ಚೈತನ್ಯವನ್ನು ತಂದು ದಿನದ ಕೆಲಸಕ್ಕೆ ಅನುವಾಗಿಸುತ್ತದೆ. ಶಬರಿಮಲೆ ಯಾತ್ರಾ ರ್ಥಿಗಳು 48 ದಿನಗಳ ವ್ರತದ ಅವಧಿ ಧನು ತಿಂಗಳನ್ನೂ ಒಳಗೊಂಡಿರುತ್ತದೆ.

Advertisement

ಅಕ್ಕಿ ಮತ್ತು ಹೆಸರುಬೇಳೆಯಿಂದ ತಯಾರಿಸಿದ ಹುಗ್ಗಿ ಈ ಅವಧಿಯ ಪೂಜೆಗೆ ವಿಶೇಷ ನೈವೇದ್ಯ. ಹೆಸರುಬೇಳೆ ಹೊಟ್ಟೆಗೆ ಹಿತವಾದರೆ, ಬಳಸುವ ಇತರ ಸಾಮಗ್ರಿಗಳಾದ ಶುಂಠಿ, ಲವಂಗ, ಹಸಿಮೆಣಸು ಚಳಿಯಲ್ಲಿ ಹೊಟ್ಟೆಯನ್ನು ಬೆಚ್ಚಗಿಟ್ಟು, ಜೀರ್ಣಶಕ್ತಿಯನ್ನು ಉದ್ದೀಪನಗೊಳಿಸಿದರೆ, ತೆಂಗಿನಕಾಯಿ, ತುಪ್ಪಗಳು ಚರ್ಮ ಬಿರುಕು ಬಿಡುವ ಈ ಕಾಲದಲ್ಲಿ ಚರ್ಮದ ಜೀವಕೋಶಗಳನ್ನು ಪುನರ್‌ರಚಿಸಲು ಸಹಾಯ ಮಾಡುತ್ತವೆ.

ದೇವರಿಗೆ ಸಮರ್ಪಿಸಿದ ಹುಗ್ಗಿ ಮತ್ತು ಕಂಬಳಿ ಇತ್ಯಾದಿಗಳ ದಾನ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಚಳಿಗಾಲದ ಅಭಾವದ ದಿನಗಳಲ್ಲಿ ಹಸಿದ ಹೊಟ್ಟೆಗೆ ಇನಿತು ಆಹಾರ, ಚಳಿಗೆ ಹೊದೆಯಲೊಂದು ಕಂಬಳಿ ಅಗತ್ಯವಿರುವವರಿಗೆ ದೊರಕಿದರೆ.. ವಾಹ್‌! ಪಡೆದವನ ಸಂತೋಷವೆಷ್ಟಿರಬಹುದು? ಆ ಕ್ಷಣದಲ್ಲಿ ವಜ್ರವೈಡೂರ್ಯಕ್ಕಿಂತಲೂ ಮಿಗಿಲಾದ ದಾನವದು. ನೀಡಿದಾತನನ್ನು ಪಡೆದಾತ ಮನತುಂಬಿ ಹರಸ ದಿರುವನೇ? ಭಗವಂತ ತಥಾಸ್ತು ಎನ್ನುತ್ತಾನೆ.

ತಿರುಪತಿ ತಿಮ್ಮಪ್ಪನ ಸನ್ನಿಧಿ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಬ್ರಾಹ್ಮಿà ಮುಹೂರ್ತದಲ್ಲಿ ವಿಶೇಷ ಪೂಜೆ, ಅರ್ಚನೆಗಳು ನಡೆಯುತ್ತವೆ. ನಡುಗುವ ಚಳಿಯನ್ನು ಲೆಕ್ಕಿಸದೇ ಭಕ್ತರು ದೇವಸ್ಥಾನಗಳತ್ತ ಧಾವಿಸಿ, ಧ್ಯಾನ, ಅರ್ಚನೆ, ಪೂಜೆಗಳಲ್ಲಿ ಭಾಗಿಯಾಗುತ್ತಾರೆ. ಸಂಪ್ರದಾಯಸ್ಥರ ಮನೆಗಳಲ್ಲೂ ಬೆಳಗಿನ ಜಾವದಲ್ಲೇ ಪೂಜೆಗಳು ನಡೆಯುತ್ತವೆ. ವೈಕುಂಠ ಏಕಾದಶಿ, ಧನುರ್ವ್ಯತೀಪಾತ ಮತ್ತು ಧನುರ್ವೈಧೃತಿ ಈ ಅವಧಿಯಲ್ಲಿ ಬರುವ ಪರ್ವ ಕಾಲಗಳು.

“ಮಾಸಾನಾಂ ಮಾರ್ಗಶೀರ್ಷಃ ಅಹಮ…’, ಮಾರ್ಗ ಶಿರ ಮಾಸವೇ ನಾನೆಂದು ಶ್ರೀಕೃಷ್ಣನೇ ಭಗವದ್ಗೀತೆ ಯಲ್ಲಿ ತಿಳಿಸಿದ್ದಾನೆ. ಭಗವಂತನನ್ನು ಅರ್ಚಿಸಲು ಬಹುಶಃ ಇದಕ್ಕಿಂತ ಪುಣ್ಯಕಾಲ ಇನ್ನೊಂದಿಲ್ಲ. ಮಾರ್ಗಶಿರ ಮಾಸದ ಭಾಗವೂ ಆಗಿರುವ ಧನು ತಿಂಗಳಲ್ಲಿ, ಭಗವಂತನನ್ನು ಅರ್ಚಿಸಿ ಕೃತಾರ್ಥರಾದ ಹಲವಾರು ಉದಾಹರಣೆಗಳು ಪುರಾಣಗಳಲ್ಲಿ ಸಿಗುತ್ತವೆ. ಧನುರ್ಮಾಸ ಆಸ್ತಿಕರಿಗೆ ಅಧ್ಯಾತ್ಮದ ಹೊಳಹನ್ನು ತೋರಿದರೆ, ಲೌಕಿಕರಿಗೆ ಜೀವನ ಪಾಠವನ್ನು ಕಲಿಸಿಕೊಡುತ್ತದೆ. ಯಾವ ದೃಷ್ಟಿಯಿಂದ ಪಾಲಿಸಿದರೂ ಆತ್ಮೋದ್ಧಾರ, ದೇಹಾರೋಗ್ಯ, ಮಾನ ಸಿಕ ಸಂತುಲನೆಗಳಿಗೆ ದೇವರೇ ತೋರಿದ ದಾರಿ ಧನುರ್ಮಾಸದ ಆಚರಣೆಗಳು.

ಇದು ದೇವ ಮಾಸ
ಧನುರ್ಮಾಸ ದೇವತಾರಾಧನೆಗೆ ಮೀಸಲು. ದೇವತಾ ಕಾರ್ಯಗಳಿಂದ ಜನರು ವಿಮುಖರಾಗ ಬಾರದೆಂದು ಮದುವೆ, ಮುಂಜಿ, ಗೃಹಪ್ರವೇಶ ಗಳಂತಹ ಸಡಗರ, ಸಂಭ್ರಮೋಲ್ಲಾಸಗಳು ನಿಷಿದ್ಧ. ಬಹುಶಃ ಇದಕ್ಕಾಗಿಯೇ ಇದು ಶೂನ್ಯ ಮಾಸ. ಸೂರ್ಯನು ಧನು ರಾಶಿಯಲ್ಲಿ ಅಸ್ತವಾಗುವುದ ರಿಂದ, ಶುಭಕೆಲಸಗಳಿಗೆ ಸೂಕ್ತವಲ್ಲ ಎಂಬ ಅಭಿಪ್ರಾಯವೂ ಇದೆ. ಅಪರಿಮಿತ ಪುಣ್ಯ ಸಂಪಾ ದನೆಗೆ, ಮೋಕ್ಷದ ದಾರಿಗೆ ಅವಕಾಶವಿರುವ ಈ ಪರ್ವಕಾಲ ಶೂನ್ಯ ಮಾಸವಾಗುವುದೆಂತು? ಇದು ದೇವ ಮಾಸ.

Advertisement

Udayavani is now on Telegram. Click here to join our channel and stay updated with the latest news.

Next